ಸುಂದರ ಕವಿಗೋಷ್ಠಿಯ ಮಧುರ ನೆನಪುಗಳ ದೃಶ್ಯಗಳು

0
1369

ಧನಂಜಯ ಅವರ ಸಾರಥ್ಯದ ‘ಬೆಂಕಿಯ ಬಲೆ’ ಕನ್ನಡ ದಿನಪತ್ರಿಕೆಯ 19 ನೇ ವಾರ್ಷಿಕೋತ್ಸವದ ಅಂಗವಾಗಿ, ನನ್ನ ತವರು ಜಿಲ್ಲೆ ತುಮಕೂರಿನಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಿಶಿಷ್ಟ ಕವಿಗೋಷ್ಠಿ ಮತ್ತು ಕವನ ವಾಚನ ಸ್ಪರ್ಧೆಯ ಅವಿಸ್ಮರಣೀಯ ಕ್ಷಣಗಳ ಪಕ್ಷಿನೋಟವಿದು. ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿ ಕಾವ್ಯವಾಚನಕ್ಕಾಗಿ, ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ 36 ಕವಿ-ಕವಯಿತ್ರಿಯರ ವಿರಾಟ್ ಪ್ರದರ್ಶನಕ್ಕೆ ವೇದಿಕೆ ಸಾಕ್ಷಿಯಾಗಿತ್ತು.

ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಶಿರಸಿಯ ಶ್ರೀಮತಿ ಯಶಸ್ವಿನಿ ಶ್ರೀಧರಮೂರ್ತಿ ಪ್ರಥಮರಾದರೆ, ತುಮಕೂರಿನ ಬಿದಲೋಟಿ ರಂಗನಾಥ್ ಹಾಗೂ ಹಾಸನದ ಶ್ರೀಮತಿ ರೇಷ್ಮಾ ಶೆಟ್ಟಿ ದ್ವಿತೀಯ ಸ್ಥಾನ ಅಲಂಕರಿಸಿದರು. ನರೇಂದ್ರ ಬಾಬು, ಶ್ರೀಮತಿ ಶಶಿವಸಂತ, ಗಿರೀಶ್ ಮತ್ತು ಶ್ರೀಮತಿ ಅಶ್ವಿನಿ ತೃತೀಯ ಬಹುಮಾನ ಪಡೆದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸುಪ್ರಸಿದ್ದ ಲೇಖಕಿ, ಪ್ರತಿಭಾವಂತ ಕವಯಿತ್ರಿ, ಕಥೆಗಾರ್ತಿ ಹಾಗೂ ಬೆಂಗಳೂರಿನ ಎನ್.ಎಂ.ಕೆ.ಆರ್.ವಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ.ಸಂಧ್ಯಾ ಹೆಗಡೆ. ದೊಡ್ಡಹೊಂಡ ಅವರು ಪ್ರತಿ ಕವಿತೆಯನ್ನೂ ವಿಶ್ಲೇಷಿಸಿ, ಸ್ಪರ್ಧಿಗಳಿಗೆ ಕಾವ್ಯದ ಅರಿವು, ಹರಿವು, ಹರವು ಎಲ್ಲವನ್ನೂ ತಿಳಿಸಿದ ರೀತಿ ಆಪ್ತವಾಗಿತ್ತು ಮತ್ತು ಅಷ್ಟೇ ಸೂಕ್ತವಾಗಿತ್ತು. ವಿಶೇಷ ತೀರ್ಪುಗಾರನಾಗಿ ಅವರೊಂದಿಗೆ ಸ್ಪರ್ಧೆಯ ಫಲಿತಾಂಶ ನಿರ್ಣಯದಲ್ಲಿ ಭಾಗಿಯಾಗಿದ್ದು ವಿಶಿಷ್ಟ ಅನುಭವದೊಂದಿಗೆ, ಕಾವ್ಯದ ಕಲಿಕೆಯ ಅನುಭಾವವನ್ನೂ ನೀಡಿತು.

ವೇದಿಕೆಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಅರ್ಥಪೂರ್ಣ ನುಡಿಗಳು, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ ಹಾಗೂ ಇನ್ನಿತರ ಗಣ್ಯರ ಸಂದರ್ಭೋಚಿತ ನುಡಿಗಳು ಸಮಾರಂಭದ ಘನತೆಯನ್ನು ಇಮ್ಮಡಿಗೊಳಿಸಿದವು. ವಿಶೇಷಾಂಕ ಬಿಡುಗಡೆ, ಅತಿಥಿಗಳಿಗೆ ಸತ್ಕಾರ, ಬಡ ಮತ್ತು ಅನಾಥ ಮಕ್ಕಳಿಗೆ ವಸ್ತ್ರ ಮತ್ತು ವಿದ್ಯಾ ಸಾಮಗ್ರಿಗಳ ವಿತರಣೆ, ಆಗಮಿಸಿದ ಸರ್ವರಿಗೂ ಸ್ವಾದಿಷ್ಟ ಉಪಾಹಾರ, ಭೂರಿ ಭೋಜನ, ಹೀಗೆ ಹತ್ತು ಹಲವು ವಿಶೇಷಗಳೊಂದಿಗೆ 19 ನೆಯ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.

ಕವಿಗೋಷ್ಠಿಗೆ ವಿಶೇಷ ಮಹತ್ವ ನೀಡಿ, ಭಾಗವಹಿಸಿದ ಸಕಲ ಕವಿಹೃದಯಗಳನ್ನು ಗೌರವ ಮನ್ನಣೆಗಳೊಂದಿಗೆ ಪುರಸ್ಕರಿಸಿದ್ದು ಧನಂಜಯ್ ಅವರ ಸಾಹಿತ್ಯಾಸಕ್ತಿಗೆ ಸಾಕ್ಷಿಯಾಗಿತ್ತು. ಮೂವರು ವಿಜೇತರ ಜಾಗದಲ್ಲಿ, ಏಳು ಜನ ವಿಜೇತರನ್ನು ನಾವು ಆರಿಸಿದರೂ, ಸಂತೋಷದಿಂದಲೇ ಬಹುಮಾನದ ಮೊತ್ತವನ್ನು ದ್ವಿಗುಣಗೊಳಿಸಿ ನೀಡಿದ್ದು ಅವರ ಔದಾರ್ಯದ ಪ್ರತೀಕವಾಗಿತ್ತು.

ಚೆಂದದ ಸಮಾರಂಭ ಆಯೋಜಿಸಿದ ಧನಂಜಯ ಹಾಗೂ ಪತ್ರಿಕೆಯ ಸಮಸ್ತ ಸಿಬ್ಬಂದಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮುಖಾಮುಖಿಯಾಗಿ ಮಧುರ ನೆನಪುಗಳನ್ನು ಕಟ್ಟಿಕೊಟ್ಟ ಸಕಲ ಸಾಹಿತ್ಯಬಂಧುಗಳಿಗೂ ನಾನು ಆಬಾರಿ.

ನನ್ನ ಪ್ರತಿ ಕಾವ್ಯ ಸಂಭ್ರಮಕೂ, ನಿತ್ಯ ಹಾರೈಸುವ ಅಕ್ಷರಬಂಧುಗಳೇ ಕಾರಣ, ಪ್ರೇರಣ. ಹಾಗಾಗಿ ಅಕ್ಷರ ಪಯಣದ ಪ್ರತಿ ವರದಿಯನ್ನು ವಿನೀತನಾಗಿ ಒಪ್ಪಿಸುತ್ತೇನೆ. ಓದಿ.. ಆಶೀರ್ವದಿಸಿ.. ಪ್ರತಿ ವರ್ಷ ನಡೆವ ಈ ವಿಶಿಷ್ಟ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದರೆ, ಖಂಡಿತಾ ತಪ್ಪಿಸಿಕೊಳ್ಳಬೇಡಿ ಎಂದು ವಿನಂತಿಸುತ್ತಾ ಸಮಾರಂಭದ ದೃಶ್ಯಾವಳಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.


  ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.