ಮೂಡಲಗಿ: ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮುದಾಯವು ಸುಮಾರು 50 ಲಕ್ಷಕ್ಕೂ ಹೆಚ್ಚಿಗೆ ಇದ್ದು, ಈ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಅತೀ ಹಿಂದುಳಿದ ಸಮಾಜವಾಗಿದೆ. ಈ ಸಮಾಜಕ್ಕೆ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸರಕಾರವು ರಾಜಕೀಯ ಅಧಿಕಾರ ನೀಡಿ, ಮುಂಚೂಣಿಗೆ ತರುವ ಪ್ರಯತ್ನ ಮಾಡಿರುವುದಿಲ್ಲ. ಈಗಿನ ಕಾಂಗ್ರೆಸ್ ಸರಕಾರ ಉಪ್ಪಾರ ಸಮಾಜಕ್ಕೆ ರಾಜಕೀಯ ಸ್ಥಾನ ಮಾನ ನೀಡಿ ಮುನ್ನೆಲೆಗೆ ತರಬೇಕು ಎಂದು ಕರ್ನಾಟಕ ಉಪ್ಪಾರ ಮಹಾಸಭಾ ರಾಜ್ಯಾಧ್ಯಕ್ಷ ವಿಷ್ಣು ಲಾತೂರ, ಉಪಾಧ್ಯಕ ಅರುಣ ಸವತಿಕಾಯಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರಕಾರವು ಚಾಮರಾಜ ನಗರದ ಮುಟ್ಟರಂಗಶೆಟ್ಟ ಇವರಿಗೆ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ಅವರ ಗೆಲುವಿಗೆ ಸಹಕರಿಸಿದೆ. ಕರ್ನಾಟಕ ರಾಜ್ಯದ ಇಡೀ ಉಪ್ಪಾರ ಸಮುದಾಯದಲ್ಲಿ ಕೇವಲ ಒಬ್ಬರೇ ಒಬ್ಬರು ಎಮ್.ಎಲ್.ಎ ಇದ್ದು, ಅವರಿಗೂ ಸಹ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡದೆ ವಂಚಿತರನ್ನಾಗಿ ಮಾಡಲಾಗಿದೆ. ಇದರಿಂದ ಸಮಾಜಕ್ಕೆ ತುಂಬಲಾರದಷ್ಟು ಹಾನಿಯಾಗಿದೆ, ಆದರೆ ಉಪ್ಪಾರ ಸಮಾಜವು ಸುಮಾರು 25 ಕ್ಷೇತ್ರಗಳಲ್ಲಿ ನಿರ್ಣಾಯಕರಿದ್ದು, 15 ಕ್ಷೇತ್ರಗಳಲ್ಲಿ ಎಮ್.ಎಲ್.ಎ ಆಗುವ ಸಾಮರ್ಥ್ಯ ಹೊಂದಿದ್ದು, ಮೊನ್ನೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ, ಅಧಿಕ ಮತಗಳಿಂದ ಆರಿಸಿ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ.
50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಉಪ್ಪಾರ ಸಮುದಾಯದ ಏಕೈಕ ಶಾಸಕ ಪುಟ್ಟರಂಗಶೆಟ್ಟ ಇವರಿಗೆ ಸಚಿವ ಸ್ಥಾನ ನೀಡಬೇಕು. ಈಗ ತೆರವುಗೊಳ್ಳುತ್ತಿರುವ 7ವಿಧಾನ ಪರಿಷತ್ ಸ್ಥಾನಗಳಲ್ಲಿ 3 ಸ್ಥಾನಗಳನ್ನು ಸರಕಾರವು ತನ್ನ ವಿವೇಚನಾತ್ಮಕ ಅಧಿಕಾರದ ಮೇಲೆ ಹಿಂದುಳಿದ ಸಮುದಾಯಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರ ಇರುತ್ತದೆ. ಕಾರಣ ಈ 3 ವಿಧಾನಪರಿಷತ್ ಸ್ಥಾನಗಳಲ್ಲಿ ಒಂದು ವಿಧಾನ ಪರಿಷತ್ ಸ್ಥಾನವನ್ನು ಕರ್ನಾಟಕ ಉಪ್ಪಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ, ಉಪಾಧ್ಯಕ್ಷರು (ಹಿಂದುಳಿದ ವರ್ಗಗಳ ವಿಭಾಗ) ಸುರೇಶ ಎಮ್. ಲಾತೂರ ವಕೀಲರು ಇವರಿಗೆ ನೀಡಿ, ಉಪ್ಪಾರ ಸಮುದಾಯಕ್ಕೆ ರಾಜಕೀಯಶಕ್ತಿ ತುಂಬಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಹಾಗೂ ಉಪ್ಪಾರಮಅಭಿವೃದ್ಧಿ ನಿಗಮಕ್ಕೆ ಆದಷ್ಟು ಬೇಗ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಮತ್ತು ಸರಕಾರದ ಅಧೀನದಲ್ಲಿರುವ ಸುಮಾರು 85 ಕ್ಕೂ ಹೆಚ್ಚಿನ ನಿಗಮಗಳಲ್ಲಿ ಉಪ್ಪಾರ ಸಮುದಾಯದ ಮುಖಂಡರಿಗೆ, ಯುವಕರಿಗೆ ಹಾಗೂ ಮಹಿಳೆಯರಿಗೆ ಸ್ಥಾನಮಾನ ನೀಡಿ, ಈ ಸಮುದಾಯವನ್ನು ಸಹ ರಾಜಕೀಯವಾಗಿ ಮೇಲೆತ್ತುವ ಪ್ರಯತ್ನ ಕಾಂಗ್ರೆಸ್ ಸರಕಾರ ಮಾಡುವುದಾಗಬೇಕು. ಇದರಿಂದ ಬರುವಂತಹ ಲೋಕಸಭಾ ಚುನಾವಣೆ ಹಾಗೂ ಜಿ.ಪಂ ತಾಪಂ, ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಉಪ್ಪಾರ ಸಮುದಾಯವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಈ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸುತ್ತೇವೆ ಎಂದು ಕರ್ನಾಟಕ ಉಪ್ಪಾರ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ ಮೈಲಾರ ಮತ್ತು ಅಧ್ಯಕ್ಷರ ವಿಶ್ವ ಭಗೀರಥ ಟ್ರಸ್ಟ ಹುಬ್ಬಳ್ಳಿ ಈಶ್ವರ ಶಿರಕೋಳ ತಿಳಿಸಿದ್ದಾರೆ.