ಸಿಂದಗಿ: ಪಂಚಮಸಾಲಿ ಸಮಾಜಕ್ಕೆ ಎಲ್ಲ ಸಮುದಾಯಗಳು ತಾಯಿ ಬೇರು ಇದ್ದಂತೆ ಅದನ್ನು ಸಂಘಟಿಸಿದರೆ ಎಲ್ಲಾ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತದೆ ಎಂದು ಕೆಲವರು ಹೋರಾಟವನ್ನು ಹತ್ತಿಕ್ಕುವ ಹುನ್ನಾರ ನಡೆಸಿದ್ದರು ಆದರೆ ಹೋರಾಟ ಅತೀ ಪರಿಣಾಮಕಾರಿಯಾಗಿ ಹೆಚ್ಚು ಜನರು ವಿಧಾನ ಸೌಧ ಪ್ರವೇಶ ಮಾಡಿದಂತಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ತಾಲೂಕಾ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ನೂತನ ಶಾಸಕರಿಗೆ ಸನ್ಮಾನ ಸಮಾರಂಭಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ರಾಜಕೀಯ ಇಚ್ಚಾಶಕ್ತಿ ಮುಖ್ಯವಾಗಿದೆ. ಸೋಲನ್ನು ಲೆಕ್ಕಿಸದೇ ಇಡೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಮನ್ನಣೆ ಪಡೆದಿದ್ದರಿಂದಲೇ ಜಯಶಾಲಿಯಾಗೊದಕ್ಕೆ ಕಾರಣವಾಗಿದೆ ಪಂಚಮಸಾಲಿ ಸಮಾಜದದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಜೋಡೆತ್ತುಗಳಾಗಿ ಕಾರ್ಯನಿರ್ವಹಿಸಿ ಎಂದರು.
ಸನ್ಮಾನ ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ರಾಜಕಾರಣದಲ್ಲಿ ನಮ್ಮಷ್ಟಕ್ಕೆ ನಾವೇ ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಸಮಾಜದ ಕಳಕಳಿ ನಮ್ಮ ಮೇಲಿದದ್ದರೆ ಮಾತ್ರ ಜಯ ಗಳಿಸಲು ಸಾಧ್ಯ. ಸಮಾಜಕ್ಕೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯವಲ್ಲ ಸಮಾಜ ನಮಗೇನು ಮಾಡಿದೆ ಎಂಬುದು ಬಹುಮುಖ್ಯವಾಗಿದೆ ಆ ನಿಟ್ಟಿನಲ್ಲಿ ಎಲ್ಲ ಸಮುದಾಯಗಳ ಒಡನಾಡಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿಗಾಗಿ ಜಗದ್ಗುರುಗಳು ಸುಮಾರು ವರ್ಷಗಳಿಂದ ಹೋರಾಟ ನಡೆಸಿದ್ದಾರೆ ಅದುವೇ ನಮ್ಮ ಸಮಾಜಕ್ಕೆ ದಾರಿ ದೀಪವಾಗಿದೆ. ನೆನೆಗುದಿಗೆ ಬಿದ್ದಿರುವ ಸಿಂದಗಿ ಪಟ್ಟಣದ ಪಂಚಮಸಾಲಿ ವಸತಿ ನಿಲಯದ ಕಟ್ಟಡ ಕಾಮಗಾರಿಗೆ ರೂ 1 ಕೋಟಿ ಮಂಜೂರು ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಅಲ್ಲದೆ ಪಟ್ಟಣದಲ್ಲಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಯನ್ನು ತೀವ್ರಗತಿಯಲ್ಲಿ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಎಲ್ಲರನ್ನು ಪ್ರೀತಿ, ಬಾಂಧವ್ಯದಿಂದ ಸಮಾನವಾಗಿ ತೆಗೆದುಕೊಂಡು ಹೋಗುವ ಪಂಚಮಸಾಲಿ ಸಮಾಜವಾಗಿದೆ. ಈ ಸಮಾಜದಲ್ಲಿ ರಾಣಿ ಕಿತ್ತೂರ ಚನ್ನಮ್ಮನಂತಹ ಮಹಾ ಮೇಧಾವಿಗಳ ಇತಿಹಾಸವಿದೆ ಅದಕ್ಕೆ ಸರ್ವ ಜಾತಿಗಳನ್ನು ಬಾಂಧವ್ಯದಿಂದ ನಮ್ಮನ್ನು ಮೇಲೆತ್ತಿದ್ದಾರೆ. ಅಧಿಕಾರ ಮುಖ್ಯವಲ್ಲ ಎಲ್ಲರ ಪ್ರೀತಿ ಬಾಂಧವ್ಯ ಮುಖ್ಯವಾಗಿದೆ ಅದಕ್ಕೆ ತಾವು ಕೂಡಾ ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಅಭಿಮತ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎ.ಪಾಟೀಲ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಂಗರಗಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಯಡ್ರಾಮಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ ಆಸಂಗಿಹಾಳ ಆರೂಢಮಠದ ಶಂಕರಾನಂದ ಮಹಾರಾಜರು, ಸಮಾಜದ ಹಿರಿಯ ದುರೀಣ ಶಿವಪ್ಪಗೌಡ ಬಿರಾದಾರ, ಜಿಪಂ ಮಾಜಿ ಉಪಾಧ್ಯಕ್ಷ ಸಿದದ್ದರಾಮ ಪಾಟೀಲ, ಮಾಜಿ ಜಿಪಂ ಸದಸ್ಯ ಗುರುರಾಜ ಪಾಟೀಲ, ನಾಗರತ್ನಾ ಮನಗೂಳಿ ಜಯಶ್ರೀ ಪಾಟೀಲ, ವ್ಹಿ.ಬಿ.ಕುರುಡೆ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಮುಖ್ಯಗುರು ಸಂಗನಗೌಡ ಬಿರಾದಾರ ಸ್ವಾಗತಿಸಿದರು. ಶಿಕ್ಷಕ ಎಸ್.ಬಿ.ಪಾಟೀಲ ನಿರೂಪಿಸಿದರು ಆನಂದ ಶಾಬಾದಿ ವಂದಿಸಿದರು.