ಬೀದರ: ಆಟೋಗೆ ಲಾರಿ ಡಿಕ್ಕಿಯಾಗಿ ಮಹಾರಾಷ್ಟ್ರ ಮೂಲದ ನಾಲ್ವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಡೆದಿದೆ.
ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ಸುಂದರವಾಡಿ ಗ್ರಾಮದ ನಿವಾಸಿ ಪ್ರಮೀಳಾ (32), ಪತಿ ಆಟೋ ಚಾಲಕ ಸುನೀಲ ಜಗದಾಳೆ (35), ಈತನ ತಾಯಿ ಅನುಷಾಬಾಯಿ ಮಹಾದೇವ ಜಗದಾಳೆ(65) ಹಾಗೂ ತುಳಜಾಪೂರ ತಾಲೂಕಿನ ಶಾಪೂರ ಗ್ರಾಮದ ನಿವಾಸಿ ಪೂಜಾ ಜಾಧವ ಮೃತ ದುರ್ದೈವಿಗಳಾಗಿದ್ದಾರೆ.
ಗೀತಾ ಶಿವರಾಮ ಜಗದಾಳೆ (40), ಆಶ್ಮಿತಾ ಶಿವರಾಮ ಜಗದಾಳೆ (12), ಲಕ್ಷ್ಮಿ ಸುನೀಲ ಜಗದಾಳೆ (11) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಶಾಸಕ ಶರಣು ಸಲಗರ ಧಾವಿಸಿ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿದರು. ಆಟೋದಲ್ಲಿ ಒಟ್ಟು 8 ಜನ ಪ್ರಯಾಣಿಸುತಿದ್ದರು ಎನ್ನಲಾಗಿದ್ದು, ಶ್ರಾವಣ ಸೋಮವಾರ ಹಿನ್ನೆಲೆಯಲ್ಲಿ ಬಸವಕಲ್ಯಾಣ ತಾಲೂಕಿನ ಚಂಡಕಾಪೂರ ಬಳಿಯ ಐತಿಹಾಸಿಕ ಶ್ರೀ ಕ್ಷೇತ್ರ ಅಮೃತಕುಂಡಕ್ಕೆ ದರ್ಶನಕ್ಕೆಂದು ಆಗಮಿಸಿದ್ದರು. ದರ್ಶನ ಮುಗಿಸಿಕೊಂಡು ಮರಳಿ ಗ್ರಾಮಕ್ಕೆ ತೆರಳುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸವಕಲ್ಯಾಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ