ತುಕ್ಕಾನಟ್ಟಿ: ಮೌಲ್ಯಗಳಿಲ್ಲದ ಜೀವನ ವ್ಯರ್ಥ. ಆದ್ದರಿಂದ ಪ್ರತಿಯೊಬ್ಬರು ಕೆಲವೊಂದಾದರೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದು ತುಕ್ಕಾನಟ್ಟಿಯ ಅಥರ್ವ ಕಾಲೇಜಿನ ನಿರ್ದೇಶಕ ಹಾಗೂ ಉಪನ್ಯಾಸಕ ಚೇತನ ಜೋಗನ್ನವರ ಹೇಳಿದರು.
ಅವರು ತುಕ್ಕಾನಟ್ಟಿ ಗ್ರಾಮದಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಐದನೆಯ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ನಾವು ಅನೇಕ ಸಂದರ್ಭಗಳಲ್ಲಿ ಮೌಲ್ಯಗಳನ್ನು ಕುರಿತು ಮಾತನಾಡುತ್ತೇವೆ. ನಮ್ಮ ಜೀವನ, ಸಮಾಜ, ಅರ್ಥವ್ಯವಸ್ಥೆ, ರಾಜಕಾರಣ ಮುಂತಾದವುಗಳೆಲ್ಲವೂ ಮೌಲ್ಯಾಧಾರಿತವಾಗಿರಬೇಕೆಂದು ಬಯಸುತ್ತೇವೆ. ಮೌಲ್ಯಗಳು ಮನುಷ್ಯನ ಬದುಕಿಗೆ, ಅವುಗಳಿಗಿರುವ ವ್ಯವಸ್ಥೆಗೆ ಮೆರುಗನ್ನುಂಟುಮಾಡುವುದೇ ಇದಕ್ಕೆಲ್ಲ ಮೂಲಕಾರಣವೆನ್ನಬಹುದು. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮನುಷ್ಯನ ವ್ಯಕ್ತಿತ್ವವು ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ಶಿವಪ್ಪ ಮರ್ದಿ ಮಾತನಾಡಿ, ಮನುಷ್ಯನು ಉದಾತ್ತ ಗುರಿಯನ್ನು ಸಾಧಿಸುವಲ್ಲಿ ಮೌಲ್ಯಗಳು ಅತ್ಯಂತ ಸಹಾಯಕವಾಗುವುದರಿಂದ ಮಾನವ ಬದುಕಿನಲ್ಲಿ ಮೌಲ್ಯಗಳ ಪಾತ್ರ ಗಮನಾರ್ಹವಾಗಿದೆ. ನಾವೆಲ್ಲರೂ ನಮ್ಮ ಘನತೆಗೆ ತಕ್ಕಂತೆ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಎಲ್. ಕೆ. ಬುದ್ದನಗೋಳ, ಕೊನಸಾಗರ, ಶಿಬಿರಾಧಿಕಾರಿಗಳಾದ ಶಂಕರ ನಿಂಗನೂರ, ಎಮ್. ಬಿ. ಕುಲಮೂರ, ಸಹ ಶಿಬಿರಾಧಿಕಾರಿಗಳಾದ ಡಿ. ಎಸ್. ಹುಗ್ಗಿ, ಬಿ. ಕೆ. ಸೊಂಟನವರ, ಕಛೇರಿ ಸಿಬ್ಬಂದಿ ಮಂಜುನಾಥ ಗೊರಗುದ್ದಿ ಮುಂತಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ಉಮೇಶ ಪಡದಲ್ಲಿ ನಿರೂಪಿಸಿದರು, ವಿಜಯ ದಾಸನಾಳ ಸ್ವಾಗತಿಸಿದರು. ಸೋಹಿಲ್ ಕರೋಶಿ ವಂದಿಸಿದರು.