ಬೀದರ: ಜೆಡಿಎಸ್ – ಬಿಜೆಪಿ ಮೈತ್ರಿ ಮತ್ತು ಟಿಕೆಟ್ ಹಂಚಿಕೆ ವಿಷಯದ ಬಗ್ಗೆ ದೇವೇಗೌಡರು, ಕುಮಾರಸ್ವಾಮಿಯವರು ಅತಿ ಶೀಘ್ರದಲ್ಲೇ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ಜೆಡಿಎಸ್ ಪಕ್ಷದ ಯುವ ನಾಯಕರು, ಚಿತ್ರ ನಟರಾಗಿರುವ ನಿಖಿಲ್ ಕುಮಾರಸ್ವಾಮಿರವರು ಹೇಳಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಬೀದರ್ ನಗರಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೀದರ್ ಟಿಕೆಟ್ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಬಂಡೆಪ್ಪ ಖಾಶೆಂಪುರ್ ರವರು ದೇವೇಗೌಡರ ಕುಟುಂಬದ ಸದಸ್ಯರಿದ್ದಂತೆ. ಈ ವಿಚಾರದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಬೇಕು. ಯಾರನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸಬೇಕು ಎಂಬ ನಿಟ್ಟಿನಲ್ಲಿ ಅವರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ದೇವೇಗೌಡರು ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಈಗ ಸಿನಿಮಾ ಶುರು ಮಾಡಿದ್ದೀನಿ. ಸದ್ಯಕ್ಕೆ ಚುನಾವಣಾ ರಾಜಕೀಯದಿಂದ ದೂರವಿರಲು ವೈಯಕ್ತಿಕವಾಗಿ ತೀರ್ಮಾನ ಮಾಡಿಕೊಂಡಿದ್ದೇನೆ ಎಂದು ನಿಖಿಲ್ ಹೇಳಿದರು.
ಪಕ್ಷದ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ದೇವೇಗೌಡರು ಕಟ್ಟಿ ಬೆಳೆಸಿದ ಪಕ್ಷವನ್ನು ಕುಮಾರಸ್ವಾಮಿಯವರು ನಡೆಸಿಕೊಂಡು ಸಾಗುತ್ತಿದ್ದಾರೆ. ಬಂಡೆಪ್ಪ ಖಾಶೆಂಪುರ್ ರವರಂತ ಹಿರಿಯ ನಾಯಕರ ಕೊಡುಗೆ ಪಕ್ಷಕ್ಕೆ ಇದೆ. ಬಂಡೆಪ್ಪ ಖಾಶೆಂಪುರ್ ರವರ ಕುಟುಂಬ ಇತಿಹಾಸ ಇರುವ ಕುಟುಂಬವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿರವರು ಹೇಳಿದರು.
ಬೀದರ್ ಕೋಟೆ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ನಿಖಿಲ್:
ಖಾಸಗಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೀದರ್ ನಗರಕ್ಕೆ ಬಂದಿದ್ದ ಜೆಡಿಎಸ್ ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿಯವರನ್ನು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ಕೋಟೆಗೆ ಕರೆ ತಂದು ಕೋಟೆಯ ದರ್ಶನ ಮಾಡಿಸಿದರು. ಬೀದರ್ ಕೋಟೆ ನೋಡಿ, ಕೋಟೆಯ ಇತಿಹಾಸ ತಿಳಿದುಕೊಂಡ ನಿಖಿಲ್ ಕುಮಾರಸ್ವಾಮಿರವರು ಹರ್ಷ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ