ಬೀದರ: ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರಕ್ಕೆ ಯಾರಿಂದಾದರೂ ಶಾಪ ತಟ್ಟುತ್ತದೆ ಅಂದರೆ ಅದು ರೈತರಿಂದ ಮಾತ್ರ ಎಂದು ಬೀದರ ನಲ್ಲಿ ಕೇಂದ್ರ ಸಚಿವರಾದ ಭಗವಂತ ಖೊಬಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೀದರ್‌ನಿಂದ ಯಶವಂತಪುರಕ್ಕೆ ಹುಮನಾಬಾದ ಮಾರ್ಗವಾಗಿ ತೆರಳುವ ರೈಲಿಗೆ ಸಂಜೆ ಹುಮನಾಬಾದ್ ಪಟ್ಟಣದ ಹೊರವಲಯದ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡುವ ಸಂದರ್ಭದಲ್ಲಿ ಅವರು ಮಾತನಾಡಿದರು.
ರೈತರಿಗೆ ಸಮರ್ಪಕವಾದ ವಿದ್ಯುತ್ ನೀಡಲು ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ,ರೈತರು ಗೋಳಾಡುತ್ತಾ ಕಣ್ಣೀರು ಹಾಕುತ್ತಿದ್ದಾರೆ. ಈ ಸರ್ಕಾರಕ್ಕೆ ರೈತರ ಶಾಪ ತಟ್ಟೇ ತಟ್ಟುತ್ತದೆ ಎಂದರು.
2014ರಿಂದ 9 ವರ್ಷಗಳ ಕಾಲ ಕ್ಷೇತ್ರದಲ್ಲಿ ಹೈವೆ ರಸ್ತೆ, ರೈಲ್ವೆ,ವಿಮಾನ ಸೌಲಭ್ಯ ಸೇರಿ ಅನೇಕ ಅಭಿವೃದ್ಧಿ ಕಾರ್ಯ ನಾನು ಮಾಡಿದ್ದೇನೆ. ಆದರೆ ಇವರು ಹುಮನಾಬಾದ ಮತ್ತು ಭಾಲ್ಕಿ ಯಲ್ಲಿ ಕುಟುಂಬ ರಾಜಕೀಯ ಮಾಡುತ್ತ ಬಂದಿದ್ದಾರೆ. ಭಾಲ್ಕಿಯಲ್ಲಿ 60 ವರ್ಷ,ಹುಮನಾಬಾದನಲ್ಲಿ 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರೆ ರೋಡ್ ಮಾಡಿಕೊಳ್ಳಲು ಆಗಿಲ್ಲ ಎಂದು ಖೂಬಾ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗು ಮಾಜಿ ಸಚಿವ ರಾಜಶೇಖರ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಹುಮನಾಬಾದ ಶಾಸಕ ಸಿದ್ದು ಪಾಟೀಲ ಮಾತಾಡಿ, ವಿವಿಧ ಕೆಲಸ ಕಾರ್ಯಗಳಿಗಾಗಿ ಕ್ಷೇತ್ರದ ಜನರು ಹೆಚ್ಚಾಗಿ ಹೈದರಾಬಾದ್ ನಗರಕ್ಕೆ ಹೋಗುತ್ತಾರೆ. ಹಾಗಾಗಿ, ಬೀದರ್-ಹೈದರಾಬಾದ್ ರೈಲು ಹುಮನಾಬಾದ್ ಮಾರ್ಗವಾಗಿ ಹೋದರೆ ಈ ಭಾಗದ ಜನರಿಗೆ ಮತ್ತಷ್ಟು ಅನುಕೂಲ ಆಗಲಿದೆ, ಆದಷ್ಟು ಬೇಗ ಈ ಒಂದು ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಮನವಿ ಮಾಡಿದರು.
ವರದಿ: ನಂದಕುಮಾರ ಕರಂಜೆ, ಬೀದರ