ಮೂಡಲಗಿ: ಕನ್ನಡಪರ ಸಂಘಟನೆ ಮತ್ತು ಕನ್ನಡ ಅಭಿಮಾನಿಗಳ ಸಹಯೋಗದೊಂದಿಗೆ ನ.25 ರಂದು ಮೂಡಲಗಿ ಪಟ್ಟಣದಲ್ಲಿ ಹಮ್ಮಿಕೊಂಡ ಸುವರ್ಣ ಕನ್ನಡ ರಾಜ್ಯೋತ್ಸವ-2023 ಸಮಾರಂಭವನ್ನು ಶಾಂತತೆಯಿಂದ ಆಚರಿಸಬೇಕೆಂದು ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಹೇಳಿದರು.
ಪಟ್ಟಣದ ನ.25 ರಂದು ಪಟ್ಟಣದಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆಯುವ ರಾಜ್ಯೋತ್ಸವದ ಪ್ರಯುಕ್ತ ಪೋಲಿಸ್ ಠಾಣೆ ಆವರಣದಲ್ಲಿ ಶುಕ್ರವಾರದಂದು ಜರುಗಿದ ಶಾಂತಿ-ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಕೂಡಿಕೊಂಡು ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು, ಮೆರವಣಿಗೆಯು ಸುಗಮವಾಗಿ ಸಾಗಲು ಸೂಕ್ತ ಪೋಲಿಸ್ ಇಲಾಖೆಯಿಂದ ವಾಹನ ಸಂಚಾರದ ರಸ್ತೆಯ ಬದಲಾವಣೆ ಮಾಡಲಾಗುವುದು ಮತ್ತು ಬಂದೋಬಸ್ತಿಗಾಗಿ ಅಗತ್ಯ ಸ್ಥಳಗಳಲ್ಲಿ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದರು.
ಪಿ.ಎಸ್.ಐ ಹಾಲಪ್ಪ ಬಾಲದಂಡಿ ಮಾತನಾಡಿ, ನಮ್ಮ ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷ ತುಂಬಿದ ಪ್ರಯುಕ್ತ ಹಮ್ಮಿಕೊಂಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಕನ್ನಡ ಧ್ವಜವನ್ನು ಮಾತ್ರ ಬಳಸಬೇಕೆಂದರು.
ರಾಜ್ಯೋತ್ಸವ ಆಚರಣೆಯ ಸಮಿತಿ ಮುಖಂಡರಾದ ಡಾ.ಎಸ್.ಎಸ್.ಪಾಟೀಲ ಮತ್ತು ಮರೆಪ್ಪ ಮರೆಪ್ಪಗೋಳ ಅವರು ರಾಜ್ಯೋತ್ಸವ ರೂಪುರೇಷೆಗಳನ್ನು ವಿವರಿಸುತ್ತಾ ಮಧ್ಯಾಹ್ನ 3ಗಂಟೆಗೆ ಮೆರವಣಿಗೆ ಆರಂಭವಾಗಿ ಕಲ್ಮೇಶ್ವರ ವೃತ್ತ, ಚನ್ನಮ್ಮ ವೃತ್ತ, ಕರೆಮ್ಮಾದೇವಿ ವೃತ್ತ ಮಾರ್ಗವಾಗಿ ಸಮಾರಂಭದ ಸ್ಥಳವಾದ ಬಸವರಂಗ ಮಂಟಪದವರೆಗೆ ನಡೆಯುವುದು. ಸಂಜೆ 6 ಗಂಟೆಯಿಂದ ವೇದಿಕೆಯ ಕಾರ್ಯಕ್ರಮ ಆರಂಭವಾಗಿ ನಂತರ ಕನ್ನಡ ನಾಡು-ನುಡಿಯ ಬಗ್ಗೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದರು.
ವೇದಿಕೆಯಲ್ಲಿ ಕಾನಿಪ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗಾಡವಿ ಹಾಗೂ ಸಭೆಯಲ್ಲಿ ವಿವಿಧ ಕರವೇ ಸಂಘಟನೆಯ ಮುಂಖಂಡರಾದ ಶಿವರಡ್ಡಿ ಹುಚರಡ್ಡಿ, ಸಚೀನ ಲಂಕೆನ್ನವರ, ಬಸವರಾಜ ಹುಲಕುಂದ, ಯಲ್ಲಪ್ಪ ಮಾನಕಪ್ಪಗೋಳ, ನಂಜುಡಿ ಸರ್ವಿ, ಸಾವಂತ ಹೊಸಮನಿ, ಸಂಜು ಯಕ್ಸಂಬಿ, ಸುಭಾಸ ಕಡಾಡಿ, ಭೀಮಶಿ ನಾಯ್ಕ, ಹಾಗೂ ರಾಜ್ಯೋತ್ಸವ ಆಚರಣೆಯ ಸಮಿತಿಯವರು ಉಪಸ್ಥಿತರಿದ್ದರು.