ಗೋಕಾಕ– ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಮನಗಳನ್ನು ಅರ್ಪಿಸಿದ್ದಾರೆ.
ಅಂಬೇಡ್ಕರ್ ಅವರು ಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರಾಗಿದ್ದರು.
ಮಾನವ ಹಕ್ಕುಗಳನ್ನು ಕಾಯ್ದಿಸಿರಲು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು. ಕೇವಲ ದಲಿತ ಸಮುದಾಯದ ಗುರಿಯಾಗಿರದೇ ಎಲ್ಲ ಜಾತಿ- ಜನಾಂಗದ ಬಗ್ಗೆ ಅಂಬೇಡ್ಕರ್ ಅವರು ಕಾಳಜಿಯನ್ನು ಹೊಂದಿದ್ದರು. ನಮ್ಮ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹಾನ್ ಚೇತನವನ್ನು ನಾವೆಲ್ಲರೂ ಸ್ಮರಿಸಿಕೊಂಡು ಅವರಿಗೆ ಗೌರವಾದರಗಳನ್ನು ಸಲ್ಲಿಸಬೇಕು. ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಸಮಾಜದ ಅಮೂಲಾಗ್ರ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರವೆಂಬುದನ್ನು ನಾವು ಮರೆಯಬಾರದು. ಕೇವಲ ಎಪ್ರಿಲ್ ೧೪ ಮತ್ತು ಡಿಸೆಂಬರ್ ೬ ರಂದು ಮಾತ್ರ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳದೇ ದಿನನಿತ್ಯವೂ ಅವರನ್ನು ಸ್ಮರಿಸಿಕೊಳ್ಳುವ ಮೂಲಕ ಡಾ. ಅಂಬೇಡ್ಕರ್ ಅವರಿಗೆ ಗೌರವ ಅರ್ಪಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿಪಾದಿಸಿದ್ದಾರೆ.