ಮೂಡಲಗಿ: ನಿರಂತರ ಹಾಗೂ ವ್ಯಾಪಕವಾಗಿ ಅಧ್ಯಯನಕ್ಕಿಳಿದಾಗ ಮಾತ್ರ ಯಶಸ್ಸು ದೊರೆಯುತ್ತದೆ. ಇಲಾಖೆಯ ಅಧಿಕಾರಿ ವರ್ಗ ಸಹೋದ್ಯೋಗಿಗಳು ಶಿಕ್ಷಕರು ಪಾಲಕರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಮಾತ್ರ ವಿಶೇಷ ಸಾಧನೆಗೈಯಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಸಮೀಪದ ಕೌಜಲಗಿ ಗ್ರಾಮದಲ್ಲಿ ಜರುಗಿದ ರಾಷ್ಟ್ರ ಪ್ರಶಸ್ತಿ ವಿಜೇತರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವವರ ಸತ್ಕಾರ ಹಾಗೂ ಕೌಜಲಗಿ ಸಮೂಹ ಮಟ್ಟದ ಆಪ್ತಾಲೋಚನೆ ಸಭೆಯಲ್ಲಿ ಮಾತನಾಡಿದರು.
ಸರಕಾರಿ ಶಾಲೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಮತ್ತು ಉನ್ನತ ವ್ಯಾಸಂಗದಲ್ಲಿ ಉತ್ಕೃಷ್ಟ ಸಾಧನೆಯ ವಿದ್ಯಾರ್ಥಿಗಳ ಪುರಸ್ಕಾರ, ಶತಮಾನ ಕಂಡ ಶಾಲೆಗಳ ಪೋಷಣೆ, ತೀವ್ರ ಶಿಕ್ಷಕರ ಕೊರತೆ ನೀಗಿಸುವಲ್ಲಿ ಅತಿಥಿ ಶಿಕ್ಷಕರ ನಿಯೋಜನೆ, ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಯ ಶ್ರೇಷ್ಠ ಫಲಿತಾಂಶ ಪಡೆದವರನ್ನು ಅಭಿನಂದಿಸುವಿಕೆ, ಬಿ.ಆರ್.ಸಿ. ಮತ್ತು ಸಿ.ಆರ್.ಸಿ. ಗಳಂತಹ ಶೈಕ್ಷಣಿಕ ಮೇಲುಸ್ತುವಾರಿ ಸಂಸ್ಥೆಗಳನ್ನು ಸಂಪನ್ಮೂಲ ಕೇಂದ್ರಗಳನ್ನಾಗಿ ಪರಿವರ್ತನೆಗೊಳಿಸಿ ಪುನಶ್ಚೇತನಗೋಳಿಸಲಾಗಿದೆ. ಶೈಕ್ಷಣಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ಅನುಷ್ಠಾನದಲ್ಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಶಿಕ್ಷಣಕ್ಕಾಗಿನ ನಿರಂತರ ಪ್ರೋತ್ಸಾಹವನ್ನು ಸ್ಮರಣಾರ್ಹವಾಗಿದೆ. ವಲಯದ ಶಿಕ್ಷಕರ ಶ್ರಮವು ಅವಿರತವಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಎ.ಸಿ ಮನ್ನಿಕೇರಿ, ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಈರಣ್ಣ ಕಡಕೋಳ, ಕೌಜಲಗಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ೧೪ ವರ್ಷದೊಳಗಿನ ಖೋ-ಖೋ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಾಧಸಿದ ವಿದ್ಯಾರ್ಥಿಗಳು, ಅರಳಿಮಟ್ಟಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕಲೋತ್ಸವ ಸ್ಪರ್ಧೆಯಲ್ಲಿ ಆಟಿಕೆ ತಯಾರಿಕೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರು, ಇಲಾಖಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆವಿಷ್ಕಾರ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವರನ್ನು ಸತ್ಕರಿಸಿ ಸನ್ಮಾನಿಸಿದರು.
ಪ್ರಾಸ್ತಾವಿಕವಾಗಿ ಮಾಲತೇಶ ಸಣ್ಣಕ್ಕಿ ಮಾತನಾಡಿದರು. ಎ.ಪಿ ಪರಸಣ್ಣವರ, ಕೆ.ಆರ್ ಅಜ್ಜಪ್ಪನವರ, ಬಿ.ಬಿ ಕಿವಟಿ, ಪಿ.ಬಿ ಕುಲಕರ್ಣಿ, ಎಸ್.ಎಮ್ ದಬಾಡಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಹಾಗೂ ಅವುಗಳನ್ನು ಫಲಪ್ರದಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು.
ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಲ್.ಎಮ್ ಬಡಕಲ, ಶಿವಾನಂದ ಕುರನಗಿ, ಎನ್ ಜಿ ಹೆಬ್ಬಳ್ಳಿ, ಗೋವಿಂದ ಸಣ್ಣಕ್ಕಿ, ಆರ್.ಬಿ ಕಟಗಾವಲಿ, ಅಲ್ಲಪ್ಪ ನಾಯಕ, ಸಿ.ಆರ್.ಪಿಗಳಾದ ವಿ.ಐ ಮಿಲ್ಲಾನಟ್ಟಿ, ಎಚ್.ಎನ್ ಬೆಳಗಲಿ, ವಿ.ಆರ್ ಬರಗಿ ಹಾಗೂ ಸಮೂಹ ವ್ಯಾಪ್ತಿಯ ಶಿಕ್ಷಕರ ಬಳಗದವರು ಹಾಜರಿದ್ದರು.
ಕಾರ್ಯಕ್ರಮವನ್ನು ಎ.ಎಸ್ ದಳವಾಯಿ ನಿರೂಪಿಸಿ, ವೆಂಕಟೇಶ ಕೌಜಲಗಿ ವಂದಿಸಿದರು.