ಮೂಡಲಗಿ: ‘ಮಕ್ಕಳಲ್ಲಿ ಶಿಕ್ಷಣದೊಂದಿಗೆ ತಂದೆ, ತಾಯಿ ಮತ್ತು ಗುರುವಿಗೆ ಗೌರವ ಕೊಡುವಂಥ ಮೌಲ್ಯಗಳನ್ನು ಬಿತ್ತುವುದು ಅವಶ್ಯವಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಇಲ್ಲಿಯ ಚೈತನ್ಯ ಆಶ್ರಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಜರುಗಿದ ‘ಚೈತನ್ಯ ಸಾಂಸ್ಕೃತಿಕ ಉತ್ಸವ-2023′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸುವ ಮೂಲಕ ಮಕ್ಕಳನ್ನು ಶ್ರೇಷ್ಠ ನಾಗರಿಕರನ್ನಾಗಿಸುವುದು ಶಿಕ್ಷಣದ ಮುಖ್ಯ ಗುರಿಯಾಗಬೇಕು ಎಂದರು.
ಚೈತನ್ಯ ಆಶ್ರಮ ಶಾಲೆಯಿಂದ ಪ್ರತಿ ವರ್ಷವೂ ನವೋದಯ, ಸೈನಿಕ ಶಾಲೆ ಮತ್ತು ಮೊರಾರ್ಜಿ ಶಾಲೆಗೆ ನೂರಾರು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿರುವುದು ಶಾಲೆಯ ಶಿಕ್ಷಕರ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಸಾಹಿತಿ ಬಾಲಶೇಖರ ಬಂದಿ ಮಾತನಾಡಿ, ಪದವಿ ಸರ್ಟಿಫಿಕೆಟ್‌ಗಳಿಗಾಗಿ ವಿದ್ಯೆ ಕಲಿಸಬಾರದು. ಅವರಲ್ಲಿ ನೈತಿಕತೆ ಹಾಗೂ ಆತ್ಮವಿಶ್ವಾಸ ಬೆಳೆಯುವಂತಾಗಬೇಕು ಎಂದರು.
ಚೈತನ್ಯ ಗ್ರುಪ್ ಅಧ್ಯಕ್ಷ ಟಿ.ಬಿ. ಕೆಂಚರಡ್ಡಿ, ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಎ. ಪಾಟೀಲ ಮಾತನಾಡಿದರು.
ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಆರ್.ಎಸ್. ಹೊರಟ್ಟಿ ವಹಿಸಿದ್ದರು. ಬಿಆರ್‌ಸಿ ವೈ.ಬಿ. ಪಾಟೀಲ, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಬಿ.ವೈ. ಪಾಟೀಲ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕೆ.ಎಸ್. ಹುಬ್ಬಳ್ಳಿ ಅತಿಥಿಯಾಗಿ ವೇದಿಕೆಯಲ್ಲಿದ್ದರು.
ನವೋದಯ, ಸೈನಿಕ ಶಾಲೆ, ಮೊರಾರ್ಜಿ ಶಾಲೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು, ತರಬೇತಿ ನೀಡಿದ ಶಿಕ್ಷಕರಾದ ಮಹಾಂತೇಶ ತ್ಯಾಪಿ, ಯೋಗೇಶ ಅಮೀನ ಹಾಗೂ ಸಾಧಕ ಶಿಕ್ಷಕರನ್ನು ಸನ್ಮಾನಿಸಿದರು.
ವಿನೋದ ಉಮರಾಣಿ, ಅಶ್ವಿನಿ, ಅಮರಶೆಟ್ಟಿ ನಿರೂಪಿಸಿದರು.