ಯುನೈಟೆಡ್ ಶಾಲೆಯ 19ನೇ ವಾರ್ಷಿಕೋತ್ಸವ
ಮೈಸೂರು – ನಗರದ ರಾಜರಾಜೇಶ್ವರಿ ಬಡಾವಣೆಯಲ್ಲಿರುವ ಶ್ರೀ ಬಾಲಾಜಿ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ನ ಯುನೈಟೆಡ್ ಪ್ರಾಥಮಿಕ ಶಾಲೆಯಲ್ಲಿ 19ನೇ ವರ್ಷದ ಶಾಲೆಯ ವಾರ್ಷಿಕೋತ್ಸವ ರಾಮಕೃಷ್ಣನಗರದಲ್ಲಿರುವ ರಮಾ ಗೋವಿಂದ ಸಭಾ ಭವನದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಅಪರಾಧಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ್ ಅವರು ಜ್ಯೋತಿ ಬೆಳಗಿಸಿ, ಮಾತನಾಡಿ, ಶಿಕ್ಷಣವು ಜ್ಞಾನವನ್ನು ನೀಡುವುದರ ಜೊತೆಗೆ ವಿವೇಕ, ವಿನಯವನ್ನು ನೀಡುತ್ತದೆ. ಅದರೊಂದಿಗೆ ನೈತಿಕತೆಯ ಪಾಠವನ್ನು ಶಿಕ್ಷಕರು ನೀಡಬೇಕೆಂದರು. ಮಕ್ಕಳು ಶಿಸ್ತನ್ನು ರೂಢಿಸಿಕೊಂಡು, ಸಮಯ ಪರಿಪಾಲನೆಯೊಂದಿಗೆ ವಿದ್ಯಾಭ್ಯಾಸದಲ್ಲಿ ತೊಡಗಿದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದೆಂದರು.
ಸಮಾಜದಲ್ಲಿ ಹಣವಂತರು ಸಾಕಷ್ಟು ಜನರಿದ್ದಾರೆ. ಶಿಕ್ಷಣದಿಂದ ವಂಚಿತರಾದವರಿಗೆ ಹಣವುಳ್ಳವರು ದಾನಿಗಳಾಗಿ ಮುಂದೆ ಬಂದರೆ ಅವರಿಗೂ ಕೂಡ ಶಿಕ್ಷಣ ಸಿಕ್ಕಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾರದಾ ವಿಲಾಸ ಕಾಲೇಜಿನ ಉಪನ್ಯಾಸಕರಾದ ರಾಜೇಂದ್ರಪ್ರಸಾದ್ ಹೊನ್ನಲಗೆರೆಯವರು ಮಾತನಾಡಿ, ಇಂದಿನ ವಿದ್ಯಾರ್ಥಿ ಸಮೂಹವು ತಂದೆ-ತಾಯಿ, ಪಾಠ ಹೇಳಿಕೊಟ್ಟ ಶಿಕ್ಷಕ, ದೇಶವನ್ನು ಕಾಯುವ ಸೈನಿಕ, ಅನ್ನವನ್ನು ನೀಡುವ ರೈತರನ್ನು ಎಂದಿಗೂ ಮರೆಯಬಾರದು ಎಂದು ತಿಳಿಸಿ, ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಸತತ ಅಭ್ಯಾಸದೊಂದಿಗೆ ಅತ್ಯುತ್ತಮ ತೇರ್ಗಡೆ ಹೊಂದಬೇಕೆಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ನವೀನ್‍ರವರು ಮಾತನಾಡಿ, ಶಿಕ್ಷಣ ಎಂಬುದು ಇಂದು ವ್ಯಾಪಾರೀಕರಣಗೊಂಡಿದೆ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಬಹು ಮುಖ್ಯವಾಗಿ ಸಿಗುವಂತಾಗಬೇಕು. ಕಠಿಣ ಅಭ್ಯಾಸಕ್ಕಿಂತ ಸ್ಮಾರ್ಟ್ ವರ್ಕ್ (ಚತುರ ಅಭ್ಯಾಸ) ಜಾಸ್ತಿಯಾಗಿದೆ. ದೈಹಿಕ ಹಾಗೂ ಬೌದ್ಧಿಕ ಶ್ರಮ ಹೆಚ್ಚಾಗಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಸಮಾಜ ಸೇವಕ ಬಿ.ನಿಂಗಪ್ಪ, ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ದಮಯಂತಿ, ಮುಖ್ಯೋಪಾಧ್ಯಾಯರಾದ ಎ.ಟಿ.ಶಂಕರೇಗೌಡ, ಕಣ್ವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಗಾಯತ್ರಿ ಪ್ರಾರ್ಥಿಸಿದರೆ, ನಿವೇದಿತ ವಂದಿಸಿದರು. ಶಿಕ್ಷಕಿ ದಮಯಂತಿ ಶಾಲಾ ವಾರ್ಷಿಕ ವರದಿ ವಾಚಿಸಿದರೆ, ಪದ್ಮಾಕ್ಷಿ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ನೃತ್ಯ ಸಂಯೋಜನೆಯನ್ನು ಶ್ರೀಮತಿ ಸೌಂದರ್ಯ ನೆರವೇರಿಸಿಕೊಟ್ಟರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.