ಮೂಡಲಗಿ: ‘ಪರಿಸರಕ್ಕೆ ಹಾನಿಕಾರಕವಾಗಿರುವ ಘನತ್ಯಾಜ್ಯ ವಸ್ತುಗಳ ವಿಲೇವಾರಿಯನ್ನು ಸಮಾಜದ ಪ್ರತಿಯೊಬ್ಬರು ಸರಿಯಾಗಿ ಮಾಡುವ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವುದು ಅವಶ್ಯವಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಇಲ್ಲಿಯ ಕೆ.ಎಚ್. ಸೋನವಾಲಕರ ಸರ್ಕಾರಿ ಪ್ರೌಢ ಶಾಲೆಯ ಆತಿಥ್ಯದಲ್ಲಿ ಮೂಡಲಗಿ ಪುರಸಭೆ, ನೇತಾಜಿ ಇಂಟಿಗ್ರೇಟೆಡ್ ರೂರಲ್ ಡೆವೆಲಪ್‍ಮೆಂಟ್ ಸೊಸೈಟಿ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಏರ್ಪಡಿಸಿದ್ದ ಸ್ವಚ್ಛಭಾರತ ಮಿಷನ್‍ದ ಆಯ್‍ಇಸಿ ಕಾರ್ಯಕ್ರಮ ಅಡಿಯಲ್ಲಿ ಚಿತ್ರಕಲಾ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಘನತ್ಯಾಜ್ಯ ವಿಲೇವಾರಿ ಬಗ್ಗೆ ಅರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ನೇತಾಜಿ ಸೊಸೈಟಿಯ ಅಧ್ಯಕ್ಷ ಈರಣ್ಣ ಕೊಣ್ಣೂರ ಮಾತನಾಡಿ ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣದಿಂದ ಘನತ್ಯಾಜ್ಯದ ಸಮಸ್ಯೆಯು ಅಧಿಕವಾಗುತ್ತಲಿದೆ. ಇದನ್ನು ನಿರ್ವಹಣೆ ಮಾಡದೆ ಇದ್ದರೆ ಜೀವ ಸಂಕುಲವು ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದರು.
ಪುರಸಭೆ ಆರೋಗ್ಯ ಸಹಾಯಕ ನಿರೀಕ್ಷಕ ಪ್ರೀತಮ ಬೋವಿ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಪುರಸಭೆ ಸದಸ್ಯರಾದ ಅಬ್ದುಲ್‍ಗಫಾರ ಡಾಂಗೆ, ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ, ಮೂಡಲಗಿ ಶಿಕ್ಷಣ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ್ ಲೋಕನ್ನವರ, ಕಾರ್ಯದರ್ಶಿ ಸುಪ್ರೀತ ಸೋನವಾಲಕರ, ಸಂದೀಪ ಸೋನವಾಲಕರ, ಚಂದ್ರಕಾಂತ ಪಾಟೀಲ, ಪ್ರಸನ್ನ ಕರ್ಪೂರ, ಬಾಲಶೇಖರ ಬಂದಿ, ಮುಖ್ಯ ಶಿಕ್ಷಕ ಎಂ.ಎಂ. ವಾಟಕರ ಇದ್ದರು.
ಅಪ್ಪಾಸಾಹೇಬ ಕುರುಬರ ಪ್ರಾರ್ಥಿಸಿದರು, ಎಸ್.ಎಂ. ಶೆಟ್ಟರ ಸ್ವಾಗತಿಸಿದರು, ಬಿ.ಐ. ಬಡಿಗೇರ ನಿರೂಪಿಸಿದರು, ಪಿ.ಜಿ. ಪಾಟೀಲ ವಂದಿಸಿದರು.