ಚಂದ್ರಿಕಾ ಶಾಲೆಯಲ್ಲಿ ವಾರ್ಷಿಕೋತ್ಸವ
ಮೂಡಲಗಿ: ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಎಷ್ಟು ಬೇಕಾದರೂ ಖರ್ಚು ಮಾಡುತ್ತಾರೆ. ಶಿಕ್ಷಣ ಕಲಿಸುವುದು ಒಳ್ಳೆಯದು ಆದರೆ ಮಕ್ಕಳಿಗೆ ಶಿಕ್ಷಣ ಕಲಿಸುವುದಕ್ಕಿಂತ ಮುಂಚೆ ಮಕ್ಕಳಿಗೆ ಬಡತನ ಕಲಿಸಬೇಕು ಅದರಿಂದ ಅವರಲ್ಲಿರುವ ಪ್ರತಿಭೆ ಹೊರಬರಲು ಸಹಾಯಕವಾಗುತ್ತದೆ ಎಂದು ಕಲ್ಲೊಳಿಯ ಸಾಯಿ ಸಮಿತಿ ಅಧ್ಯಕ್ಷ ಸುರೇಶ ಕಬ್ಬೂರ ಹೇಳಿದರು.
ಅವರು ಸ್ಥಳೀಯ ಚಂದ್ರಿಕಾ ಶಿಕ್ಷಣ ಸಂಸ್ಥೆಯ ಚಂದ್ರಿಕಾ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರಗೆಡವಲು ನಾವು ಪ್ರಯತ್ನಿಸಬೇಕು. ಈಗ ಶಿಕ್ಷಣ ಪದ್ಧತಿಯೇ ಸರಿಯಿಲ್ಲ. ಶಿಕ್ಷಣ ಸಂಸ್ಥೆಗಳು ಭಯೋತ್ಪಾದಕರನ್ನು ಉತ್ಪಾದಿಸುವ ಕಾರ್ಖಾನೆಗಳಾಗಿವೆ. ಕಲಿತ ಮಕ್ಕಳೇ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಂತೆಯೆ ದಿ. ಪಾಟೀಲ ಪುಟ್ಟಪ್ಪ ಅವರು ತಮ್ಮ ಪ್ರಪಂಚ ವಾರಪತ್ರಿಕೆಯಲ್ಲಿ ಸುಶಿಕ್ಷಿತರಿಂದ ದೇಶವನ್ನು ರಕ್ಷಿಸಿರಿ ಎಂದು ಬರೆದಿದ್ದರು. ಆದ್ದರಿಂದ ನಮ್ಮ ಮಕ್ಕಳಲ್ಲಿ ಮನುಷ್ಯತ್ವ ಬೆಳೆಸಬೇಕು, ನೈತಿಕತೆ ಬೆಳಸಬೇಕು ಎಂದರು.
ಶಾನೂರ ಮಾಯನ್ನವರ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆ ಕಟ್ಟುವುದು ದೊಡ್ಡ ಶ್ರಮದ ವಿಷಯ. ಶ್ರಮ ವಹಿಸಿದಾಗ ಜ್ಞಾನ ಬರುತ್ತದೆ ಆದ್ದರಿಂದ ಮಕ್ಕಳಿಗೆ ಶ್ರಮದ ಬಗ್ಗೆ ತಿಳಿವಳಿಕೆ ನೀಡಬೇಕು. ಯೋಗ, ಧ್ಯಾನ ಮಾಡಿ ಆರೋಗ್ಯ ಗಳಿಸಲು ತಿಳಿಸಬೇಕು. ನೈತಿಕತೆ ಕಲಿಸಬೇಕು ಮಕ್ಕಳ ಮೊದಲ ಗುರುಗಳಾದ ಪಾಲಕರೇ ಇದನ್ನೆಲ್ಲ ಕಲಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಪ್ಪಲಗುದ್ದಿ ಮೊರಾರ್ಜಿ ವಸತಿ ಶಾಲೆಯ ಉಪಾಧ್ಯಾಯ ಕೆ ಬಿ ಸಾಯನ್ನವರ ವಹಿಸಿದ್ದರು.
ವೇದಿಕೆಯ ಮೇಲೆ ಚಂದ್ರಿಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ ಬಿ ಹುಕ್ಕೇರಿ, ಎಸ್ ಎಲ್ ದಬಾಡಿ, ಎಲ್ ಎಲ್ ವ್ಯಾಪಾರಿ, ಬಸವರಾಜ ಗಾಣಿಗೇರ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಮಾಯಾ ಶಾಬನ್ನವರ ವರದಿ ವಾಚನ ಓದಿದರು.
ಶಿಕ್ಷಕಿ ಮಮತಾ ಕುರಬೇಟ ಸ್ವಾಗತಿಸಿದರು.
ಕಾರ್ಯಕ್ರಮ ನಿರೂಪಣೆ ಎಚ್ ಬಿ ಬೆಳಕೂಡ ಮಾಡಿದರು. ಶ್ರೀದೇವಿ ಹಿರೇಮಠ ವಂದಿಸಿದರು.