- Advertisement -
ಹೀಗೇ ಒಮ್ಮೆ
____________
ಹೀಗೇ ಒಮ್ಮೆ
ನಾನು ನೀನು
ಅದೇ ಮರದ
ನೆರಳಲಿ ಕುಳಿತು
ಮಾತಾಡಬೇಕಿದೆ
ನೆನಪಿಸಿಕೊಳ್ಳಬೇಕಿದೆ
ಮತ್ತೆ ಹಳೆಯ ಕ್ಷಣಗಳ
ಹಂಚಿಕೊಂಡ ಕಥೆ ಕವನ
ಮಾತು ಚರ್ಚೆ ಸಂವಾದ
ನಗೆ ಪ್ರೀತಿಯ ಸವಿಯ
ಸವಿಯಬೇಕಿದೆ.
ಆಗ ನಮ್ಮಿಬ್ಬರ ಮಧ್ಯೆ
ಮೆರೆದ ಆದರ್ಶಗಳ
ಮೆಲುಕು ಹಾಕಬೇಕಿದೆ
ಅಂದು ಮಳೆಯಲ್ಲಿ
ತಪ್ಪನೆ ತೊಯ್ದ ಹಸಿ
ಇನ್ನೂ ಆರಿಲ್ಲ
ಬೈಕ್ ನಿಂದ ನಾವಿಬ್ಬರೂ
ಬಿದ್ದ ಪೆಟ್ಟು ಮಾಸಿಲ್ಲ
ಕೈ ಕೈ ಹಿಡಿದು
ದೂರ ದೂರ ಹೆಜ್ಜೆ ಹಾಕಿದ
ನೆನಪು ನಾವಿನ್ನೂ ಮರೆತಿಲ್ಲ
ಏಕೋ ಕೆಲ ದಿನಗಳಲ್ಲಿ
ಮೌನ ಆವರಿಸಿತು
ನನ್ನ ನಿನ್ನಯ ಮಧ್ಯೆ
ಹೀಗೆ ದೂರಾದೆವು
ಒಲವ ಸ್ನೇಹ ಪ್ರೀತಿ
ಪ್ರೇಮವ ಬಚ್ಚಿಟ್ಟು
ಬಾ ಮತ್ತೆ ಕುಳಿತು
ಮನ ಬಿಚ್ಚಿ ಮುಕ್ತವಾಗಿ
ಮಾತನಾಡುವ
ನಕ್ಕು ಮಲ್ಲಿಗೆಯಾಗುವ
ಅದೇ ಮರದ ನೆರಳಲ್ಲಿ
ಡಾ. ಶಶಿಕಾಂತ ಪಟ್ಟಣ ರಾಮದುರ್ಗ