ಸೌರ ವಿದ್ಯುತ್ ಉತ್ಪಾದಿಸಿ ಬಳಸಿ ಹಣ ಉಳಿಸಿ ಕುರಿತು ರಾಯಚೂರಿನ ಸರ್ ಎಮ್. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಕಲಬುರಗಿಯ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ನಿಶಾಂತ ಎಲಿ ಯವರು ಉದ್ಘಾಟಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ, ಶಕ್ತಿನಗರದ ಕ್ಯಾಷುಟೆಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಪಟ್ಟೇದ, ತರಬೇತಿ ಸಲಹೆಗಾರ ಭಾಲಚಂದ್ರ ಜಾಬಶೆಟ್ಟಿ, ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಶಂಕರಗೌಡ ಪಾಟೀಲ ವೇದಿಕೆ ಮೇಲಿದ್ದರು.
ಉಚಿತವಾಗಿ ದೊರೆಯುವ ಸೌರ ಶಕ್ತಿ ಯಿಂದ ಆರ್ಥಿಕ ಅಭಿವೃದ್ಧಿ ಹೊಂದುವ ಯೋಜನೆಗಳನ್ನು ರೂಪಿಸಬೇಕಾಗಿದ್ದು ಅದಕ್ಕಾಗಿ ಯುವಜನರು ಮುಂದೆ ಬಂದು ಇಂಧನ ಸಾಮಥ್ಯ೯ವನ್ನು ದ್ವಿಗುಣಗೊಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಯಾಷುಟೆಕ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶರಣಬಸಪ್ಪ ಪಟ್ಟೇದರವರು ಸೌರ ವಿದ್ಯುತ್ ಉತ್ಪಾದನೆಯಿಂದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣಗೊಳ್ಳುತ್ತಿದ್ದು, ಇಂಗಾಲದ ಹೆಜ್ಜೆಗಳನ್ನು ಕಡಿತಗೊಳಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ವಿಸ್ತೃತವಾದ ಸೌರಶಕ್ತಿ ಬಳಕೆ ಇಂಧನ ಸ್ವಾವಲಂಬನೆಯೆಡೆಗಿನ ಮೊದಲ ಹೆಜ್ಜೆಯಾಗಿಯೆಂದರು.
ಕ್ಯಾಷುಟೆಕ್ ನ ತರಬೇತಿ ಸಲಹೆಗಾರ ಭಾಲಚಂದ್ರ ಜಾಬಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ವಿಷಯ ಮಂಡಿಸಿದರು.
ವಿದ್ಯುತ್ ಜಾಲದೊಂದಿಗೆ ಗ್ರಿಡ್ ಟೈಡ್ ಮನೆ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಸ್ಥಾಪಿಸಿ, ಬಳಸಿ ಹಣ ಉಳಿಸುವ ಮತ್ತು ಹಣ ಗಳಿಸುವ ಕುರಿತು ವಿವರಿಸಿದರು.
ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತವು ಹೊಸ ಮೈಲಿಗಲ್ಲು ಸ್ಥಾಪಿಸುದರೆಡೆಗೆ ದಾಪುಗಾಲು ಹಾಕುತ್ತಿದೆ. ಉಚಿತವಾಗಿ ದೊರಕುವ ಸೌರಶಕ್ತಿಯಿಂದ ಜಾಗತಿಕ ಇಂಧನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವುದೆಂದು ಅವರು ಅಭಿಪ್ರಾಯ ಪಟ್ಟರು.
ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತವು ಇಂಧನ ಸ್ವಾವಲಂಬಿಯಾಗುವ ದಿನಗಳು ದೂರವಿಲ್ಲ.
ಒಂದೇ ವಿಶ್ವ- ಒಬ್ಬನೇ ಸೂರ್ಯ- ಒಂದೇ ವಿದ್ಯುತ್ ಗ್ರಿಡ್ ತತ್ವಗಳನ್ನಾಧರಿಸಿ ವಿವಿಧ ದೇಶಗಳು ಸೌರ ವಿದ್ಯುತ್ ಉತ್ಪಾದನೆಯೆಡೆಗೆ ಪರಸ್ಪರ ಕೈಜೋಡಿಸುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆಯೆಂದರು.
ಮನೆ ಮೇಲ್ಛಾವಣಿ ಮೇಲೆ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರಕಾರವು ರೂ. 78,000/- ವರೆಗೆ ಸಹಾಯಧನ ನೀಡುವ ಯೋಜನೆಯು ತುಂಬಾ ಜನಪ್ರಿಯವಾಗಿದ್ದು, ಇಂಗಾಲದ ಹೆಜ್ಜೆ ಗುರುತುಗಳನ್ನು ಅಳಿಸಲು ಸಹಕಾರಿಯಾಗಿದ್ದು ಹೆಚ್ಚು ಹೆಚ್ಚು ಜನರು ಯೋಜನೆಯ ಪ್ರಯೋಜನ ಪಡೆಯಲು ಕರೆ ನೀಡಿದರು.
ಭಾರತ ಸರಕಾರದ ‘ಹೊಸ ಮತ್ತು ನವೀಕರಿಸಬಲ್ಲ ಇಂಧನ, ಸಚಿವಾಲಯದ’ “ಸೌರ ಘರ: ಮುಫ್ತ ಬಿಜಲಿ ಯೋಜನೆಯ” ಅಳವಡಿಕೆಯ ಸಾಧಕ ಬಾಧಕಗಳ ಕುರಿತು ಆಯೋಜಿಸಲಾದ ಈ ವಿಶೇಷ ಕಾರ್ಯಾಗಾರವನ್ನು ಶಕ್ತಿನಗರದ ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಹಾಗೂ ರಾಯಚೂರಿನ ಸರ್ ಎಎಮ್.ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಉಷ್ಣಸ್ಥಾವರ ವಿದ್ಯುತ್ ಉತ್ಫಾದನಾ ಘಟಕಗಳ ನೆರೆಹೊರೆಯಲ್ಲಿ ವಾಸಿಸುವ ಜನರು ಅನೇಕ ರೋಗರುಜಿನಗಳಿಗೆ ಸಿಲುಕುವ ಅಪಾಯ ವಿದ್ದು ಅಂತಹ ಅಪಾಯಗಳು ಸೌರ ವಿದ್ಯುತ್ ಉತ್ಪಾದನಾ ಘಟಕಗಳಿಂದ ಇರುವುದಿಲ್ಲವಾದ್ದರಿಂದ ಈ ಕಾರ್ಯಕ್ಕೆ ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿದೆಯೆಂದರು.
ಶೃತಿ ಶಿವರಾಜ ಕಾರ್ಯಕ್ರಮ ನಿರೂಪಿಸಿದರು.ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಸಂಶೋಧನಾ ವಿಭಾಗದ ಮುಖ್ಯಸ್ಥ ಸುರೇಂದ್ರ ಪಾಟೀಲ, ಪ್ರೊ. ಕೃಷ್ಟಯ್ಯ ಶೆಟ್ಟಿ, ಪ್ರೊ. ಸುಭಾಸಚಂದ್ರ ಪಿ, ಪ್ರೊ.ಸಂದೀಪ ಪಾಟೀಲ, ಮಹಾಂತೇಶ ಪಾಟೀಲ, ಪ್ರೊ.ಅನಂತಲಕ್ಷ್ಮಿ, ಪ್ರೊ. ಚೈತ್ರ ಹಾಗೂ ನೂರಾರು ವದ್ಯಾರ್ಥಿಗಳು ಉಪಸ್ಥಿತರಿದ್ದರು
ಕೊನೆಯಲ್ಲಿ ಜರುಗಿದ ಚಿಂತನ ಮಂಥನದಲ್ಲಿ ಈ ಕೆಳಕಂಡ ವಿಷಯಗಳ ಕುರಿತು ಚರ್ಚಿಸಲಾಯಿತು:
“ಆನ್-ಗ್ರಿಡ್, ಆಫ್-ಗ್ರಿಡ್ ಮತ್ತು ಹೈಬ್ರಿಡ್ ಸೋಲಾರ ಫಲಕಗಳು ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸುವ ವಿಧಾನಗಳು
ಗ್ರಾಹಕರ ಇಚ್ಛೆಗಳಿಗನುಸಾರ ‘ಪಾಲಿ ಕೃಷ್ಟಲೈನ್’, ‘ಮೋನೋಕೃಷ್ಟಲೈನ್’, ‘ಪರ್ಕ’, ‘ಹಾಫ್ ಕಟ್’, ಮೋನೋಫೇಸಿಯಲ್’, ‘ಬೈಫೇಸಿಯಲ್’, ಟಾಪಕದ್ವಿಗ ಮುಂತಾದ ವಿವಿಧ ತಂತ್ರಜ್ಞಾನಗಳಾಧಾರಿತ ಸೌರಫಲಕಗಳನ್ನು ಅಳವಡಿಸುವುದರಿಂದ ದೊರೆಯುವ ಲಾಭಗಳು, ಹಾಗೂ ಹೆಚ್ಚು ವಿದ್ಯುತ್ ಉತ್ಪಾದಿಸಬಲ್ಲ ಘಟಕಗಳನ್ನು ಅಳವಡಿಸಲು ಎಷ್ಟು ಖರ್ಚು ಬರುತ್ತದೆ ಎಂಬ ವಿಷಯದ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಅನೇಕ ರಾಷ್ಟ್ರೀಕೃತ ಬ್ಯಾಂಕುಗಳು ಮನೆ ಮೇಲ್ಛಾವಣಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಾಲ ಸೌಲಭ್ಯಗಳನ್ನು ನೀಡಲು ಯೋಜನೆ ರೂಪಿಸಿಕೊಂಡಿದ್ದು ಅದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆಯೆಂದು ಸಹ ಚರ್ಚಿಸಲಾಯಿತು.