spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಪ್ರಕೃತಿಯ ಆರಾಧಕಳು ಅಕ್ಕ

ಈಳೆ ನಿಂಬೆ ಮಾವು ಮಾದಲಕೆ ಹುಳಿನೀರನೆರೆದವರಾರಯ್ಯ?
ಕಬ್ಬು ಬಾಳೆಹಲಸು ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯ? ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲವು ಒಂದೆ, ನೆಲನು ಒಂದೆ,
ಆಕಾಶವು ಒಂದೆ
ಜಲವು ಹಲವು ದ್ರವ್ಯಂಗಳ ಕೂಡಿ ತನ್ನ ಪರಿ ಬೇರಾಗಿಹ ಹಾಗೆ,
ಎನ್ನದೇವಾ ಚೆನ್ನಮಲ್ಲಿಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡಿರ್ದಡೇನು? ತನ್ನ ಪರಿ ಬೇರೆ.

12ನೇ ಶತಮಾನದಲ್ಲಿ ಆಗಿ ಹೋದ ದಿಟ್ಟ
ಮಹಿಳೆ. ಕನ್ನಡದ ಮೊಟ್ಟಮೊದಲ ಕವಯತ್ರಿ. ಭಾವಗೀತಾತ್ಮಕತೆಯನ್ನು ತನ್ನ ರಚನೆಗಳಲ್ಲಿ ಮೂಡಿಸಿದ ಭಾವಗೀತಗಾರ್ತಿ. ಪ್ರಕೃತಿಯ ವೈವಿಧ್ಯತೆಯನ್ನು ತನ್ನ ವಚನಗಳಲ್ಲಿ ತಂದ ವಚನಗಾರ್ತಿ. ವೀರವಿರಾಗಿಣಿ ಅಕ್ಕ ಅಕ್ಕ ಮಹಾದೇವಿ.

- Advertisement -

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಜನಿಸಿದ ಮಹಾದೇವಿ ಬಸವಾದಿ ಪ್ರಮಥರಿಂದ ಹಿಡಿದು ಇಂದಿನ ಪುಟ್ಟ ಮಗುವಿನವರೆಗೂ ಅವರೆಲ್ಲರಿಗೂ ಅವರು ಅಕ್ಕ. ಅನುಭವ ಮಂಟಪದಲ್ಲಿ ಕಲ್ಯಾಣದ ಅಲ್ಲಮಪ್ರಭುದೇವರಾದಿಯಾಗಿ ಎಲ್ಲ ಶರಣ-ಶರಣೆಯರಿಂದ ‘ಅಕ್ಕ’ ಎಂದು ಕರೆಯಿಸಿಕೊಂಡು ಅಕ್ಕಮಹಾದೇವಿ ಆದರು.

ಉಡುತಡಿಯ ಸುಮತಿ – ನಿರ್ಮಲಶೆಟ್ಟಿ ದಂಪತಿಗಳ ಮಗಳಾಗಿ ಜನಿಸಿದರು. ಬಾಲ್ಯದಿಂದಲೂ ಶಿವಪೂಜೆ ಶಿವಧ್ಯಾನಗಳಲ್ಲಿಯೇ ಆಸಕ್ತಿ ಹೊಂದಿದ್ದರು. ಲಿಂಗಪೂಜೆ-ಇಷ್ಟಲಿಂಗ ಆರಾಧನೆ ಎಂದರೆ ಮಹಾದೇವಿ ಅವರಿಗೆ ಪಂಚಪ್ರಾಣ. ಇವುಗಳ ಜೊತೆಗೆ ಮಹಾದೇವಿಯವರಿಗೆ ಪ್ರಕೃತಿಯ ಮಡಿಲಿನಲ್ಲಿ ಕಾಲಕಳೆಯುವುದು ಎಂದರೆ ಹರುಷದ ಸಂಗತಿ.

ಉಡುತಡಿ ಮಲೆನಾಡಿನ ರಮ್ಯತಾಣ ಅಲ್ಲಿಯೇ ಹುಟ್ಟಿದ ಮಹಾದೇವಿ ಅವರ ಜೀವನದಲ್ಲಿ ನಿಸರ್ಗ ಹಾಸು ಹೊಕ್ಕಾಗಿದೆ. ಅಂತೆಯೇ ಅವರ ರಚನೆಗಳಲ್ಲಿ ನಿಸರ್ಗದ ಕುರಿತಾದ ವರ್ಣನೆಗಳನ್ನು ಕಾಣುತ್ತೇವೆ. ಸೃಷ್ಟಿಯ ರಹಸ್ಯದ ಕುರಿತಾದ ವಿಚಾರಗಳನ್ನು  ನೋಡುತ್ತೇವೆ. ಮೇಲಿನ ವಚನ ನೋಡಿದಾಗ ತಿಳಿದು ಬರುವ ಅಂಶವೆಂದರೆ ಪ್ರಕೃತಿಯಿಂದ ಉದಿಸಿ ಬಂದ ಈ ವೈಚಿತ್ರ್ಯಗಳ ಚಿತ್ರಣವನ್ನು ಕಾಣುತ್ತೇವೆ.  ಹುಳಿಯ ಅಂಶವುಳ್ಳ ಕಾಯಿಗಳನ್ನು ಹೆಸರಿಸಿ ಅವುಗಳಿಗೆ ಹುಳಿ ನೀರು ಎರೆದವರು ಯಾರು?  ರುಚಿಯನ್ನು ಹೊಂದಿರುವ ಹಣ್ಣುಗಳಿಗೆ  ಸಿಹಿಯನ್ನು ತುಂಬಿದವರು ಯಾರು ಎಂದು ಪ್ರಶ್ನಿಸುವ ಅವರಿಗೆ ಉತ್ತರ ಗೊತ್ತಿಲ್ಲ ಅಂತ ಅಲ್ಲ.  ಇಲ್ಲಿ ಅಕ್ಕನವರು ಹೇಳ ಹೊರಟಿರುವ ವಿಷಯ ಯಾವುದೆಂದರೆ ಸೃಷ್ಟಿಯಲ್ಲಿರುವ ವೈವಿಧ್ಯಮಯ ವಿಚಾರಗಳು. ಜೀವಜಾಲದ ವಿವಿಧ ಬಗೆಯ ವೈಶಿಷ್ಟ್ಯ ದ ಬಗೆಗಿನ ಅಚ್ಚರಿಯು  ಇಲ್ಲಿದೆ.  ಲೋಕದ ಜನರೊಂದಿಗೆ ಬದುಕುತ್ತಿದ್ದರೂ ತನ್ನ, ಚೆನ್ನಮಲ್ಲಿಕಾರ್ಜುನನ ಸಂಬಂಧವೆ ಬೇರೆ.

- Advertisement -

ಪ್ರತಿನಿತ್ಯ ನಾವು ನೋಡುವ ಹಣ್ಣುಗಳು ಹೂವುಗಳು, ಅನೇಕ ಸಸ್ಯ ಸಂಕುಲಗಳು ಅಗಾಧವಾದ ಶಕ್ತಿಯನ್ನು ತಮ್ಮಲ್ಲಿ ಅಡಗಿಸಿಕೊಂಡಿವೆ. ಅವುಗಳಿಗೆ ಆ ವಿಶೇಷತೆ ಎಲ್ಲಿಂದ ಬಂತು? ಎಂದು ಪ್ರಶ್ನಿಸುವ ಅಕ್ಕ ತಮ್ಮದೇ ಪ್ರಶ್ನೆಗೆ ತಾವೇ ಉತ್ತರ ಹುಡುಕುವ ಧಾವಂತಲ್ಲಿರುವುದನ್ನು ಕಾಣುತ್ತೇವೆ. ಅವರಲ್ಲಿ ಹೊಸ ವಿಚಾರ ತಿಳಿದುಕೊಳ್ಳುವ ಕುತೂಹಲ, ಹೊಸದನ್ನು  ಹುಡುಕುವ ಇಚ್ಛೆ ಇದೆ. ಕೆಲವು ಪದಾರ್ಥಗಳು ಸಿಹಿ, ಇನ್ನೂ ಕೆಲವು ಹುಳಿ, ಮತ್ತೆ ಕೆಲವು ಪದಾರ್ಥಗಳು ಸುವಾಸನೆಯಿಂದ ಕೂಡಿವೆ. ಕುಸುಮಗಳಲ್ಲಿ ಪರಿಮಳ ಬೀರುವ ಕುಸುಮಗಳನ್ನು ಹೆಸರಿಸುತ್ತಾರೆ. ಆಹಾರದ  ಪದಾರ್ಥಗಳಲ್ಲಿ ಆ ವಿಶೇಷವಾದ ಅನ್ನದ ಗುಣ ಇರಿಸಿದವರು ಯಾರು? ಇವೆಲ್ಲದರ ಹಿಂದಿನ ಶಕ್ತಿ ಆ ಭಗವಂತನದ್ದಾಗಿದೆ. ಒಂದೆ ನೆಲದಲ್ಲಿ ಬೆಳೆಯುವ, ಒಂದೆ ಜಲ ಕುಡಿಯುವ ಈ ಎಲ್ಲ ವಸ್ತುವಿನ ಗುಣ ಮಾತ್ರ ಬೇರೆ. ಆದರೆ ಇವೆಲ್ಲವೂ ಜೀವಸಂಕುಲದ ಉಳಿವಿಗಾಗಿ ಜನ್ಮ ತಳೆದಿವೆ.  ಈ ವನಪ್ರೇಮಿ ಆಗಿರುವ ಅಕ್ಕಮಹಾದೇವಿಯವರು ಈ ವಚನದಲ್ಲಿ ನೀರು,ಭೂಮಿ, ಆಕಾಶ  ಎಲ್ಲವೂ ಒಂದೆ ಆಗಿದ್ದರೂ ಅವುಗಳ ಶಕ್ತಿಯಿಂದ ಬೆಳೆಯುವ ಬೆಳೆಗಳು ವಿಭಿನ್ನ ರೀತಿಯ ಗುಣಗಳನ್ನು ಹೊಂದಿವೆ. ಅದರಂತೆ ಚೆನ್ನಮಲ್ಲಿಕಾರ್ಜನನ್ನು ಜಗತ್ತೆಲ್ಲ ಒಂದೆ ರೀತಿಯಲ್ಲಿ ಕಂಡರೆ  ನಾನು ಆತನನ್ನು ಅರಿತಿರುವ ರೀತಿಯೆ ಬೇರೆಯಾಗಿದೆ.

ಅಕ್ಕನ ಅನೇಕ ವಚನಗಳಲ್ಲಿ ಪ್ರಕೃತಿಯ ಕುರಿತಾದ ವಿಚಾರ ನೋಡಿದಾಗ ಕುತೂಹಲ, ಬೆರಗು, ಉತ್ಸಾಹ, ಗೌರವ ಸ್ಥಾಯೀಭಾವ ಗುರುತಿಸುತ್ತೇವೆ. ಈ ವಚನ ಭಾವಗೀತೆಯಂತಿರುವುದು ವಿಶೇಷ.

ನೆಲದ ಮರೆಯ ನಿಧಾನದಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಫಲದ ಮರೆಯ ರುಚಿಯಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜನನ ನಿಲವನಾರ ಅರಿಯರು.

ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನೆ ನನಗೆ ಸರ್ವಸ್ವ. ಆತನ ಇರುವಿಕೆಯನ್ನು  ಸೃಷ್ಟಿಯ ರಹಸ್ಯದ ಮೂಲಕ ಹೇಳುತ್ತಾರೆ. ಇಲ್ಲಿ ಇವರು ಐದು ಉಪಮೆಗಳನ್ನು ನೀಡಿದ್ದಾರೆ.  ನಮಗೆ ಭೂಮಿಯಲ್ಲಿನ ಸಂಪತ್ತು ಕಾಣುವುದಿಲ್ಲ. ಇಲ್ಲಿ ಭೂಮಿಯ ಕೆಳಗೆ ನಿಧಿಯಿದೆ ಎಂದರ್ಥವಲ್ಲ. ಭೂಮಿಯನ್ನು ಹರಗಿದಾಗ, ಉಳುಮೆ ಮಾಡಿದಾಗ ಹೊರಬರುವ ಸಿರಿ ಎಂದರ್ಥ. ಚಿನ್ನದ ನಿಕ್ಷೇಪಗಳಿರುವ ಸ್ಥಳದ ಕುರಿತು ಹೇಳುತ್ತಾರೆ. ಬಂಗಾರ ನಮಗೆ ಅನಾಯಾಸವಾಗಿ ಸಿಗಲಾರದು. ಚಿನ್ನದ ಗಣಿಯಿಂದ ಅಗೆಯ ಬೇಕು. ಎಳ್ಳಿನೊಳಿಗಿನ ಎಣ್ಣೆ ಹೊರ ಬರಬೇಕಾದರೆ ಗಾಣದಲ್ಲಿ ಎಳ್ಳು ಸಿಕ್ಕು ಸಣ್ಣಾಗಬೇಕು. ಮೇಲ್ನೋಟಕ್ಕೆ ಯಾವುದೇ ಹಣ್ಣಿನೊಳಗಿನ ರುಚಿ ನಮಗೆ ಗೊತ್ತಾಗುವುದಿಲ್ಲ. ಹಣ್ಣು ತಿಂದು ನೋಡಿದಾಗ ಮಾತ್ರ ಗೊತ್ತಾಗವುದು. ಅಂದರೆ ಸಿಹಿ ಎಂಬುದು ಅನುಭವಿಸಿದಾಗ ಗೊತ್ತಾಗುತ್ತದೆ. ಹಾಗೆ ಬದುಕು ಜೀವನ ಕೂಡಾ.  ಈ ಎಲ್ಲ ಉದಾಹರಣೆಗಳನ್ನು  ನೋಡಿದಾಗ ಅಕ್ಕ ಹೇಳ ಹೊರಟಿರುವ ವಿಷಯ ಸ್ಪಷ್ಟ ಆಗುತ್ತದೆ. ದೇವರು ನಮಗೆ ಯಾವಾಗ ಬೇಕು  ಅವಾಗ ಕಾಣುವುದಿಲ್ಲ. ಆತನು  ನಮ್ಮ ಭಕ್ತಿಯಲ್ಲಿ ಅಡಗಿರುತ್ತಾನೆ.  ಯಾರಿಗೂ ಕಾಣದಂತಿರುವ ಆತನ ಅಸ್ತಿತ್ವವನ್ನು , ಆತನ ಇರುವಿಕೆಯನ್ನು ನಾವು ಅನುಭವಿಸಿಯೇ ನೋಡಬೇಕು ಎಂಬ ಭಾವವನ್ನು ಅಕ್ಕನವರ ಈ ವಚನದಲ್ಲಿ ಗುರುತಿಸುತ್ತೇವೆ.  ಹಣ್ಣಿನೊಳಗಿನ ರುಚಿ ತಿಂದವರಿಗೆ ಗೊತ್ತು ಹಾಗೆಯೇ ತನ್ನ  ಭಾವದೊಳಗೆ ಅಡಗಿದ  ಚೆನ್ನಮಲ್ಲಿಕಾರ್ಜುನನ ನಿಲುವನ್ನು ಬೇರೆ ಯಾರೂ ತಿಳಿಯಲಾರರು.  ತನ್ನೊಳಗಿನ ಭಕ್ತಿ ಭಾವವನ್ನು  ನೆಲದ ಮರೆಯ ನಿಧಾನ, ಫಲದ ಮರೆಯ ರುಚಿ,  ತಿಲದ  ಮರೆಯ ತೈಲ, ಶಿಲೆಯ ಮರೆಯ ಹೇಮ  ಇವುಗಳಿಗೆ  ಹೊಲಿಸಿದ್ದಾರೆ.  ಇಂತಹ ನೂರಾರು ಅಕ್ಕನವರ ವಚನಗಳು  ಪ್ರಕೃತಿಯಲ್ಲಿ  ಇರುವ ರಹಸ್ಯದೊಂದಿಗೆ  ಆಧ್ಯಾತ್ಮದ ಆಳವನ್ನು ತಿಳಿಸಿಕೊಡುತ್ತವೆ.  ಹೀಗೆ ಮಲೆನಾಡಿನ ರಮ್ಯತಾಣದಲ್ಲಿ ಹುಟ್ಟಿದ ಮಹಾದೇವಿಯವರು  ಚೆನ್ನಮಲ್ಲಿಕಾರ್ಜುನನ ಭಕ್ತಿಯಲ್ಲಿ  ಮಿಂದು ಕೌಶಿಕನನ್ನು ತ್ಯಜಿಸಿ ಬಸವ ಕಲ್ಯಾಣದ ಕಡೆಗೆ ಸಾಗುತ್ತಾಳೆ.

ಬೀದರ ಜಿಲ್ಲೆಯ ಬಸವಕಲ್ಯಾಣವೂ ನಿಸರ್ಗದ ಮಡಿಲಲ್ಲಿ ಇದೆ. ಬೀದರ ಜಿಲ್ಲೆಯು ಬಿಸಿಲಿನ ನಾಡಾಗಿದ್ದರೂ, ಬಸವಕಲ್ಯಾಣದಲ್ಲಿ  ಅನೇಕ ಸಸ್ಯ ಸಂಕುಲ ಕಾಣುತ್ತೇವೆ.  ಅಲ್ಲಿಂದ ಅಕ್ಕಮಹಾದೇವಿಯವರು ಚೆನ್ನಮಲ್ಲಿಕಾರ್ಜುನನ ಹುಡುಕುತ್ತ ಹೊರಟದ್ದು ಶ್ರೀಶೈಲದ ಕದಳಿವನಕ್ಕೆ.  ಅವರ ಜೀವನದ ಮಹತ್ತರ ಸಂಗತಿಗಳೆಲ್ಲ ಸೃಷ್ಟಿಯ ಸೋಬಗಿನ ತಾಣಗಳಲ್ಲಿಯೇ ನಡೆದಿವೆ.  ಅದರಿಂದ ಅವರ  ರಚನೆಗಳಲ್ಲಿ ನಿಸರ್ಗದ ಕುರಿತಾದ ವಿಚಾರ ಅಪಾರ ಪ್ರಮಾಣದಲ್ಲಿದೆ.    ಪ್ರಕೃತಿಯ ಕುರಿತಾದ ಅವರ ವಚನಗಳನ್ನು ಓದಿ ನಾವೆಲ್ಲ ಪರಿಸರ ಸಂರಕ್ಷಣೆಯನ್ನು ಮಾಡೋಣ.  ಪ್ರಕೃತಿಯೇ ನಮ್ಮನ್ನು ಕಾಯುವ ದೈವ. ಆ ದೈವವನ್ನು ರಕ್ಷಿಸುವ ಮೂಲಕ ಅಕ್ಕಮಹಾದೇವಿಯರ ವಿಚಾರಗಳನ್ನು ಅರ್ಥಪೂರ್ಣವಾಗಿ ಪಾಲಿಸೋಣ .

ಡಾ.ಪ್ರಿಯಂವದಾ ಮ. ಹುಲಗಬಾಳಿ, ಅಥಣಿ          9448921097.                                                       ಅಕ್ಕನ ಅರಿವು, ವಚನ ಅಧ್ಯಯನ ವೇದಿಕೆ,                  ಬಸವಾದಿ ಶರಣರ ಚಿಂತನ ಕೂಟ

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group