ಸಿಂದಗಿ- ಸುದೀರ್ಘವಾದ ೭೮ವರ್ಷದ ಪಯಣದಲ್ಲಿ ಈ ಭಾರತ ಮಾತೆಯನ್ನು ಅತ್ಯಂತ ಪ್ರಗತಿಯತ್ತ ಕೊಂಡೊಯ್ಯಬೇಕು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಜಗತ್ತಿನಲ್ಲಿ ಅತ್ಯಂತ ಮುನ್ನಡೆ ಸಾಧಿಸಬೇಕು ಎಂದು ನಮ್ಮ ಹಿರಿಯರ ತ್ಯಾಗ-ಬಲಿದಾನ, ಹೋರಾಟದ ಪ್ರತಿಫಲವಾಗಿ ಈ ೭೮ನೇ ಸ್ವತಂತ್ರೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಗುರುವಾರ ತಾಲೂಕ ಆಡಳಿತ ಹಮ್ಮಿಕೊಂಡ ೭೮ ನೇ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಸುಧೀರ್ಘವಾದ ೩೦೦ ವರ್ಷಗಳ ಐತಿಹಾಸಿ ಹೋರಾಟದ ಫಲವಾಗಿ ಈ ಭಾರತದೇಶಕ್ಕೆ ೧೯೪೭ ಅಗಷ್ಟ ೧೫ ರಂದು ನಮಗೆ ಸ್ವಾತಂತ್ರ್ಯ ಸಿಕ್ಕಿತು. ಸ್ವತಂತ್ರ ಪೂರ್ವದಲ್ಲಿ ಈ ದೇಶದ ಸ್ವತಂತ್ರಕ್ಕಾಗಿ ಲಕ್ಷಾನುಗಟ್ಟಲೆ ಯೋಧರು, ನಮ್ಮ ರಾಷ್ಟ್ರೀಯ ನಾಯಕರುಗಳು ಬ್ರಿಟಿಷರಿಂದ ಸ್ವಾತಂತ್ರ್ಯ ವನ್ನು ಪಡೆದುಕೊಂಡಿದ್ದು ಕೇವಲ ಮಾತುಕತೆಯಿಂದ ಅಲ್ಲ ಹೋರಾಟ, ಸತ್ಯಾಗ್ರಹ, ಕ್ರಾಂತಿಗಳ ಮೂಲಕ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಿರಂಗ ಹಾರಾಡುತ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ದೇಶಕ್ಕೆ ೧೯೪೮ರಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರು ರಚಿಸಿದ ಸಂವಿದಾನದ ಅಡಿಯಲ್ಲಿ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ವ್ಯವಸ್ಥೆಯನ್ನು ತರುವ ಮೂಲಕ ಈ ದೇಶದಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಒಬ್ಬ ಕಟ್ಟಕಡೆಯ ವ್ಯಕ್ತಿಗೂ ಸರಕಾರಿ ಸೌಲಭ್ಯ ಸಿಗಬೇಕು ಎಲ್ಲರೂ ಪ್ರಗತಿ ಹೊಂದಬೇಕು ಅತ್ಯಂತ ಅಭಿಮಾನದಿಂದ ಸ್ವಾತಂತ್ರ್ಯೋತ್ಸ ವವನ್ನು ಗೌರವದಿಂದ ಆಚರಿಸುತ್ತೇವೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಶಾಸಕನಾಗಿ ಆಯ್ಕೆಯಾದ ೧೫ ತಿಂಗಳ ಅವಧಿಯಲ್ಲಿ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಅತ್ಯಂತ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಈ ಸಂಧರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪವಿತ್ರಾ ದೇವರಮನಿ, ಶೃಷ್ಠಿ ರೋಟ್ಟಿ, ಸ್ನೇಹಾ ಬಂಡೆ, ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶರಣಮ್ಮ ಬಿರಾದಾರ, ಭಾರತಿ ಬಸ್ತಿಹಾಳ, ಆಯಿಷಾ ನದಾಫ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ ಇಲಾಖೆ, ಅಗ್ನಿಶಾಮಕ, ಅಬಕಾರಿ ಸಿಬ್ಬಂದಿ ಹಾಗೂ ಎನ್ ಎಸ್‌ಎಸ್, ಸ್ಕೌಟ್ಸ ಮತ್ತು ಗೈಡ್ಸ್, ಪ್ರೇರಣಾ ಪಬ್ಲೀಕ ಶಾಲೆ, ಜ್ಞಾನಭಾರತಿ ವಿದ್ಯಾಮಂದಿರ, ಆದರ್ಶ ವಿದ್ಯಾಲಯ, ಡಾ.ಅಂಬೇಡ್ಕರ ಪ್ರೌಡಶಾಲೆ, ಶ್ರೀ ಚೆನ್ನವೀರ ಸ್ವಾಮಿಜಿ, ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ಬಾಲಕಿಯರ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಕವಾಯತ ಜನಮನ ಸೂರೆಗೊಂಡವು.
ಕಾರ್ಯಕ್ರಮಕ್ಕೂ ಮುನ್ನ ಶಾಸಕ ಅಶೋಕ ಮನಗೂಳಿ ಹಾಗೂ ಅಧಿಕಾರಿಗಳು ತೆರೆದ ವಾಹನದಲ್ಲಿ ಧ್ವಜವಂಧನೆ ಸಲ್ಲಿಸಿದರು.
ವೇದಿಕೆ ಮೇಲೆ ಸಿಪಿಆಯ್ ನಾನಾಗೌಡ ಪೊಲೀಸಪಾಟೀಲ, ತಾಪಂ ಇಓ ರಾಮು ಅಗ್ನಿ, ಕರ್ನಾಟಕ ರಾಜ್ಯ ನೌಕರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಬಿಇಓ ಆರೀಫ ಬಿರಾದಾರ, ಸೇರಿದಂತೆ ಅನೇಕರು ಇದ್ದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿದರು. ದೈಹಿಕ ನಿರ್ದೇಶಕ ರವಿ ಗೋಲಾ, ಮುಖ್ಯೋಪಾಧ್ಯಯ ಸಂಗನಬಸವ ಬಿರಾದಾರ ನಿರೂಪಿಸಿದರು, ಬಿಇಓ ಆರೀಫ ಬಿರಾದಾರ ವಂದಿಸಿದರು.