ಸವದತ್ತಿ: ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಸವದತ್ತಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ “ಪರಿಷತ್ತಿನ ನಡಿಗೆ ಶಾಲೆಯ ಕಡೆಗೆ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸವದತ್ತಿ ತಾಲೂಕಾ ಕ್ಷೇತ್ರ ಸಮನ್ವಯಾಧಿಕಾರಿಗಳಾದ
ಬಸವರಾಜ ಬ್ಯಾಳಿಯವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಮಕ್ಕಳಲ್ಲಿ ಹುದುಗಿರುವ ಸಾಹಿತ್ಯಿಕ ಪ್ರತಿಭೆಯನ್ನು ಹೊರ ತರುವಲ್ಲಿ ಇಂತಹ ಕಾರ್ಯಕ್ರಮವನ್ನು ಸಾಹಿತ್ಯಪರಿಷತ್ತು ಆಯೋಜಿಸಿದ್ದು ಉಚಿತವಾದುದು” ಎಂದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ವೈ.ಎಂ.ಯಾಕೊಳ್ಳಿ ಯವರು “ಪ್ರತಿವಾರಕ್ಕೊಂದರಂತೆ ಒಂದೊಂದು ಶಾಲೆಗೆ ಪರಿಷತ್ತು ಶಾಲೆಗೊಂದು ಕಾರ್ಯಕ್ರಮ ಆಯೋಜಿಸುವ ಯೋಚನೆ ಹೊಂದಿದ್ದು ಪ್ರತಿ ಶಾಲೆಯ ಮಕ್ಕಳಿಂದ ಕವಿತೆ ವಾಚಿಸುವ ಅವಕಾಶ ಕೊಡುವ ಯೋಚನೆ ಯಿದೆ” ಎಂದರು.
ಇದೇ ಸಂದರ್ಭದಲ್ಲಿ ಪ್ರತಿ ಕಾರ್ಯಕ್ರಮದಲ್ಲಿ ಒಬ್ಬ ಕವಿಯ ಸನ್ಮಾನ ಮಾಡುವ ಯೋಜನೆಯ ಅಂಗವಾಗಿ ಕವಿ ಸಾಹಿತಿ ವೈ.ಬಿ.ಕಡಕೋಳ ಅವರನ್ನು
ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವೈ ಬಿ ಕಡಕೋಳ ಬರವಣಿಗೆ ತಮ್ಮಲ್ಲಿ ಮೂಡಿಬಂದ ಬಗೆಯನ್ನು ತಿಳಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯ ಶ್ಲಾಘನೀಯ ಎಂದರು
ನಂತರದಲ್ಲಿ ಶಾಲೆಯ ನಾಲ್ಕು ಮಕ್ಕಳು ಸ್ವರಚಿತ ಕವಿತೆ ಓದಿದರು.ಅವರಿಗೆ ಪರಿಷತ್ತಿನ ಪ್ರಮಾಣಪತ್ರ ಪುಸ್ತಕ ಕಾಣಿಕೆ ಸಮರ್ಪಿಸಲಾಯಿತು.
ನಿಕಟಪೂರ್ವ ಕ.ಸಾ.ಪ.ತಾಲೂಕಾ ಅಧ್ಯಕ್ಷರಾದ ಸಿ ಬಿ ದೊಡಗೌಡರ,ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೀರಯ್ಯ ಹಿರೇಮಠ ಸಮೂಹ ಸಂಪನ್ಮೂಲ ವ್ಯಕ್ತಿಯವರಾದ ರಾಮಚಂದ್ರಪ್ಪ ಸವದತ್ತಿ ತಾಲೂಕಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ
ಲಕ್ಷ್ಮೀ ಆರಿಬೆಂಚಿ , ಕೀರ್ತಿ ಕರೋಸಿ,ಶಾಲೆಯ ಇನ್ನುಳಿದ ಗುರು ಬಳಗ ಎಂ ಜಿ ದೊಡಮನಿ, ಆರ್ ಬಿ ಐಹೊಳೆ, ಶಶಿಕಲಾ ಮಿರ್ಜಿ, ಕಾವೇರಿ ಅಂಬ್ರಿ, ವೀಣಾ ಗೊರಗುದ್ದಿ, ಮಂಜುಳಾ ಸಂಕನ್ನವರ, ಮಹೇಶ್ವರಿ ಉಪ್ಪಾರ, ಶೃತಿ ಜೋಷಿ, ಸವಿತಾ ಪಾಟೀಲ, ರಾಧಾ ಇಂಚಲ, ಎಸ್ ವ್ಹಿ ಚಚಡಿ ಹಾಜರಿದ್ದರು.
ಲಕ್ಷ್ಮೀ ಅರಿಬೆಂಚಿ ಮಾತನಾಡಿ “ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ-ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ.ಎಂದು ತಿಳಿಸಿ ತಾಯಂದಿರು ಹಾಡುತ್ತಿದ್ದ ಜೋಗುಳ ಹಾಡುಗಳನ್ನು ಉದಾಹರಿಸಿ ದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಮಂಜುನಾಥ ಕಮ್ಮಾರ ಮಾತನಾಡಿ ತಮ್ಮ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಈ ಕಾರ್ಯವನ್ನು ಜರುಗಿಸುವಂತೆ ಮಾಡಿದ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮವನ್ನು ಪೂರ್ಣಿಮಾ ತಾರಿಹಾಳ ನಡೆಸಿಕೊಟ್ಟರು.ಕಾವೇರಿ ಅಂಬ್ರಿ ಸ್ವಾಗತ ಗೀತೆ ಹೇಳಿದರು. ಜಿ. ಸಿ. ಗುಂಡಾರ ವಂದಿಸಿದರು.