ಸೆಂಟರ್ ಫಾರ್ ಸಸ್ಟೈನೆಬಲ್ ಡೆವಲಪ್ಮೆಂಟ್ ಮತ್ತು ಐಎಎಸ್ ಅಧಿಕಾರಿಗಳ ಸಂಘ ಸಹಯೋಗದಲ್ಲಿ ಏರ್ಪಡಿಸಿರುವ ಈ ಸಮಾರಂಭದ ಅಧ್ಯಕ್ಷತೆಯನ್ನು ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್ ಶಿವರಾಜ ವಿ ಪಾಟೀಲ ವಹಿಸಿ ಕೃ ತಿ ಲೋಕಾರ್ಪಣೆ ಮಾಡುವರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶರವರು ಕೃತಿ ಕುರಿತು ಮಾತನಾಡುವರು .
ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ ಪ್ರಾಸ್ತಾವಿಕ ನುಡಿಗಳನ್ನಾಡುವರು ಎಂದು ಆಯೋಜಕರಾದ ಸೆಂಟರ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್ ನ ವ್ಯವಸ್ಥಾಪಕ ನಿರ್ದೇಶಕ ಆರ್ ಶ್ರೀನಿವಾಸ್ ಮತ್ತು ಐಎಎಸ್ ಅಧಿಕಾರಿಗಳ ಸಂಘದ ವ್ಯವಸ್ಥಾಪಕ ಗಣೇಶ ತಿಳಿಸಿರುತ್ತಾರೆ.
ಡಾ.ಎ ರವೀಂದ್ರ – ಕಿರು ಪರಿಚಯ
ಮೂಲತಃ ಆಂಧ್ರ ರಾಜ್ಯದ ಕಡಪ ಜಿಲ್ಲೆಯ ಮನೆ ಮಾತಿನ ಡಾ. ಎ.ರವೀಂದ್ರ ಸ್ನಾತಕೋತ್ತರ ಪದವಿ ಮುಗಿಸಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಭಾರತೀಯ ಆಡಳಿತ ಸೇವೆಗೆ ಪ್ರವೇಶ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಬಿಡಿಎ ಅಧ್ಯಕ್ಷರಾಗಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ, ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿರುತ್ತಾರೆ.
ನಿವೃತ್ತಿಯ ನಂತರ ಕರ್ನಾಟಕ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ, ಸುಸ್ಥಿರ ಅಭಿವೃದ್ಧಿ ಕೇಂದ್ರ ಸಂಸ್ಥೆಯನ್ನು ಸ್ಥಾಪಿಸಿ ಪರಿಸರ ಮತ್ತು ಅಭಿವೃದ್ಧಿ ವಿಷಯಗಳ ಬಗ್ಗೆ ಸಂಶೋಧನೆ ಹಾಗೂ ತರಬೇತಿ ನೀಡುತ್ತಿದ್ದು, ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
ಕಾಲೇಜು ದಿನಗಳಿಂದ ಸಾಹಿತ್ಯ ಮತ್ತು ಸಾರ್ವಜನಿಕ ವಿಷಯಗಳಲ್ಲಿ ಆಸಕ್ತಿ. ಸಂಗೀತಪ್ರಿಯರಾಗಿ ಸಂಗೀತ ಪ್ರಚಾರದಲ್ಲಿ ನಿರತ ಬೆಂಗಳೂರು ಚಾಮರಾಜಪೇಟೆಯ ರಾಮಸೇವಾ ಮಂಡಳಿ ಟ್ರಸ್ಟ್ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.
ನಿವೃತ್ತಿಯ ನಂತರ ಆಂಗ್ಲ ಪತ್ರಿಕೆಗಳಲ್ಲಿ ಹಲವು ಲೇಖನಗಳು ಪ್ರಕಟವಾಗಿವೆ. ಬೆಂಗಳೂರಿನ ಆಡಳಿತಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ನಡೆಸಿ ಬರೆದ ಪುಸ್ತಕಗಳು ಸೇರಿದಂತೆ ಅನೇಕ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
‘ಸದ್ಧರ್ಮಗೀತ’ ಕೃತಿಯ ಕುರಿತು
ಕಾವ್ಯಕ್ಕೆ ಚುಂಬಕ ಶಕ್ತಿ ಉಂಟು. ಅದು ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೆ. ಭಾವಯತ್ರಿ ಪ್ರತಿಭೆವುಳ್ಳವರು ಕೂಡ ಕಾವ್ಯ ರಚನೆಗೆ ಕೈ ಹಾಕಿದವರುಂಟು, ಅಂತಹವರು ಕಾರಯಿತ್ರಿಯ ಕೈಯನ್ನು ಹಿಡಿಯುತ್ತಾರೆ. ಡಾ.ಎ ರವೀಂದ್ರರವರು ಈ ಸಾಲಿಗೆ ಸೇರಿದವರು. ಲೌಕಿಕ ಜ್ಞಾನ ಭಾಷೆ ಇಂಗ್ಲಿಷ್, ಮಾತೃಭಾಷೆ ತೆಲುಗು, ಹೃದಯದ ಭಾಷೆಯಾಗಿ ಕನ್ನಡದಲ್ಲಿ ಕಾವ್ಯ ಸಂವೇದನೆ ಇರುವ ವೈಚಾರಿಕ ಕಾವ್ಯ ‘ಸದ್ಧರ್ಮ ಗೀತ’ ನಮ್ಮ ಮುಂದೆ ಇಟ್ಟಿದ್ದಾರೆ.
ಇದು ಭಗವದ್ಗೀತೆಯಲ್ಲ ಬದಲಾಗಿ ಜೀವನದ ಆಕೃತಿಯ ಧರ್ಮ ವಿಚಾರಕ್ಕೆ ಸಂಬಂಧಿಸಿದ್ದು ಇಲ್ಲಿ ಬುದ್ಧ ಧರ್ಮ, ಬಸವ ಧರ್ಮ ಮತ್ತು ಅಂಬೇಡ್ಕರ್ ಧರ್ಮ ಒಂದಲ್ಲೊಂದು ತಳಕು ಹಾಕಿಕೊಂಡಿದೆ . ಸರಳವೂ ಅರ್ಥ ಗುಂಫನವು ಆದ ಗಪದ್ಯವೆಂಬ ಕಥನದಲ್ಲಿ ತಮ್ಮ ಕಾವ್ಯ ರಚನೆಯನ್ನು ಹೆಣೆದಿದ್ದಾರೆ ಎಂದು ಕೃತಿಗೆ ಮುನ್ನುಡಿ ಬರೆದಿರುವ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.