ನಮ್ಮ ಬದುಕು ಸಮಾಜಕ್ಕೆ ಮಾದರಿಯಾಗುವಂತಿರಬೇಕು – ಶ್ರೀದೇವಿ ಸಿ.ರಾವ್

Must Read

ಮುಂಬಯಿ: ದಿ. ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದಿನಾಂಕ 11.01.2025 ರ ಶನಿವಾರ ಸಂಜೆ 4 ಗಂಟೆಗೆ ದಿ. ಚಂದ್ರಶೇಖರ್ ರಾವ್ ಅವರ ಜನ್ಮದಿನ ಸ್ಮರಣಾರ್ಥ ಭಾಂಡುಪ್, ಮುಂಬಯಿ ಅವರ ನಿವಾಸದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅಂದು ಕವಿ ಕಾವ್ಯ ವಾಚನದ ಜೊತೆಗೆ ಧಾರಾವಿ ಕನ್ನಡ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಸಿ. ರಾವ್ ಅವರು, ಕಳೆದ ಹಲವಾರು ವರ್ಷಗಳಿಂದ ಟ್ರಸ್ಟ್ ವತಿಯಿಂದ ಪ್ರತೀ ವರ್ಷವೂ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಎಲ್ಲ ಸಾಹಿತ್ಯಾಭಿಮಾನಿಗಳ, ಹಿತೈಷಿಗಳ ಸಹಕಾರ, ಪ್ರೋತ್ಸಾಹದಿಂದ ಇದು ಸಾಗುತ್ತಿದೆ ಹೊರತು ನನ್ನೊಬ್ಬಳಿಂದ ಮಾತ್ರ ಅಲ್ಲ.ಸಮಾಜಕ್ಕೆ ನಮ್ಮಿಂದಾದ ಸಹಾಯ ನಾವು ಖಂಡಿತ ಮಾಡಬೇಕು ಎಂದು ನನ್ನ ಪತಿ ಚಂದ್ರಶೇಖರ ರಾವ್ ಅವರು ಸದಾ ಹೇಳುತ್ತಿದ್ದರು. ಅವರ ಮಾರ್ಗದರ್ಶನ, ಅವರು ಹೇಳಿಕೊಟ್ಟ ಸ್ಫೂರ್ತಿಯ ನುಡಿಗಳಂತೆ ನಾನು ಮುನ್ನಡೆಯುತ್ತಿದ್ದೇನೆ. ಅವರು ನಮ್ಮನ್ನಗಲಿ ಎಲ್ಲಿಯೂ ಹೋಗಿಲ್ಲ.ಇಲ್ಲಿಯೇ ಇದ್ದು ಸದಾ ನನಗೆ ಪ್ರೇರಣೆ ನೀಡುತ್ತಿದ್ದಾರೆ.ನಮ್ಮಬದುಕು ಸಮಾಜಕ್ಕೆ ಮಾದರಿಯಾಗಬೇಕು.ಜೀವನ ಸಾರ್ಥಕತೆಯನ್ನು ಹೊಂದಬೇಕಾದರೆ ನಮ್ಮನ್ನು ನಾವು ಒಳ್ಳೆಯ ಕಾರ್ಯಗಳಲ್ಲಿ ಯಾವಾಗಲೂ ತೊಡಗಿಸಿಕೊಳ್ಳಬೇಕು ಎಂದು ನುಡಿದರು.

ಕವಿ, ಲೇಖಕ, ಕಥೆಗಾರ ಚುಕ್ಕಿ ಸಂಕುಲದ ಗೋಪಾಲ ತ್ರಾಸಿ ಅವರು, ಚಂದ್ರಶೇಖರ ರಾವ್ ಅವರು ಸದಾ
ನಮ್ಮೆಲ್ಲರ ಬರಹಗಳನ್ನು ಓದಿ ಹುರಿದುಂಬಿಸುತ್ತಿದ್ದರು. ಅವರೊಬ್ಬ ಸಹೃದಯ ಬರಹಗಾರ ಮತ್ತು ಓದುಗ ಎಂದು ಅವರೊಂದಿಗಿನ ಒಡನಾಟ ನೆನಪಿಸಿಕೊಂಡರು.ಬರೆಯುತ್ತ ಹೋದಂತೆ ನಮ್ಮ ಕವಿತೆ ಹಿಂದಿನ ಕವಿತೆಗಿಂತ ಉತ್ತಮವಾಗಿ, ಅರ್ಥಪೂರ್ಣವಾಗಿರಬೇಕು. ನೂರು ಕವಿತೆ ಬರೆಯುವುದಕ್ಕಿಂತ ಒಂದು ಅತ್ಯುತ್ತಮ ಕವಿತೆ ಬರೆಯುವುದು ಒಳ್ಳೆಯದು ಎಂದರು. ಶ್ರೀದೇವಿ ರಾವ್ ಮೇಡಮ್ ಅವರ ಈ ಸಮಾಜಪರ ಕೆಲಸ ನಿಜಕ್ಕೂ ಶ್ಲಾಘನೀಯವಾದುದು ಎಂದು ನುಡಿದರು.

ಡಾ. ಜಿ. ಪಿ ಕುಸುಮ ಅವರು ಮಾತನಾಡುತ್ತಾ ಚಂದ್ರಶೇಖರ ರಾವ್ ಅವರ ಬರಹಗಳನ್ನು ಓದುವಾಗ ಅವರ ಕವಿತೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಸೂಕ್ಷ್ಮ ದೃಷ್ಟಿಯಿಂದ ಬರೆದಂತ ಅವರj ಕವಿತೆಗಳು ಸಮಾಜದ ಪ್ರಸ್ತುತ ಸಮಸ್ಯೆಗಳನ್ನು, ಪರಿಸ್ಥಿತಿಗಳನ್ನು, ಆಗುಹೋಗುಗಳನ್ನು ವಿಶಿಷ್ಟ ರೀತಿಯಲ್ಲಿ ನಮ್ಮ ಮುಂದೆ ಇಟ್ಟಂತಿವೆ ಎಂದರು.

ಸೋಮನಾಥ್ ಕರ್ಕೇರ ಅವರು ಚಂದ್ರಶೇಖರ ರಾವ್ ಅವರು ಮುಂಬಯಿ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಗ್ರಂಥಾಲಯದ ನಿರ್ವಹಣೆ ಮತ್ತು ಕರ್ನಾಟಕ ಸರಕಾರದಿಂದ ಸಂಘಕ್ಕೆ ಧನ ಸಹಾಯ ದೊರಕುವುದಕ್ಕೆ ಬಹಳಷ್ಟು ಶ್ರಮಿಸಿದ್ದನ್ನು ಸ್ಮರಿಸಿಕೊಂಡರು.

ಅಂದು ನೆರೆದವರಲ್ಲಿ ಗಾಯತ್ರಿ ನಾಗೇಶ್, ಲಲಿತಾ ಅಂಗಡಿ, ದೀಪಾ ಶೆಟ್ಟಿ, ಸರೋಜಾ ಅಮಾತಿ, ಚುಕ್ಕಿ ಸಂಕುಲದ ಗೋಪಾಲ ತ್ರಾಸಿ, ಡಾ. ಜಿ.ಪಿ. ಕುಸುಮಾ, ಸೋಮನಾಥ ಕರ್ಕೇರ ಮತ್ತು ರಜನಿ ಪೈ ಅವರು ಸ್ವರಚಿತ ಕವನಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಡಾ.ಜಿ.ಪಿ.ಕುಸುಮಾ ಚಂದ್ರಶೇಖರ್ ರಾವ್ ಅವರ ಎರಡು ಕವನಗಳನ್ನು ಪ್ರಸ್ತುತ ಪಡಿಸಿದರು.ಬೆಂಗಳೂರಿನ  ಸಂದೀಪ್ ಅರ್ಪಿತಾ ದಂಪತಿಗಳು ಮತ್ತು ಅವರ ಎರಡೂವರೆ ವರ್ಷದ ಮುದ್ದು ಮಗಳು ಆರನಾ ಎಸ್. ಭಟ್ ರವರ ಕನ್ನಡ ಹಾಡು, ಛದ್ಮವೇಷ ಎಲ್ಲರ ಮನಸೂರೆಗೊಂಡಿತು. ಶ್ರೀಕಾಂತ್ ಅಮಾತಿಯವರು ಹಾಡೊಂದನ್ನು ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ರಾವ್ ಅವರ ಅಭಿಮಾನಿಗಳು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

ಬಳಿಕ ಧಾರಾವಿ ಕನ್ನಡ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಟ್ರಸ್ಟಿನ ಅಧ್ಯಕ್ಷೆ ಶ್ರೀದೇವಿ ರಾವ್ ಅವರು ವಿದ್ಯಾರ್ಥಿ ವೇತನ ಮತ್ತು ನೆನಪಿನ ಕಾಣಿಕೆಯನ್ನು ವಿತರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಲಲಿತಾ ಅಂಗಡಿ ಅವರು ಪ್ರಾರ್ಥನಾ ಗೀತೆ ಹಾಡಿದರು. ಇತ್ತೀಚೆಗೆ ಅಗಲಿದ ಟ್ರಸ್ಟ್ ನ ಸದಸ್ಯರಾದ ದಿ.ಕೆ. ನಾರಾಯಣ, ಭದ್ರಾವತಿ ಅವರಿಗೆ ಒಂದು ನಿಮಿಷದ ಮೌನಾಚರಣೆ ಆಚರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.

ಶ್ರೀ ಭೀಮರಾಯ ಚಿಲ್ಕ್ ಮತ್ತು  ಚಿದಾನಂದರವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸರೋಜಾ ಎಸ್.ಅಮಾತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group