ಮೈಸೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಾಲೋಚನಾ ಸಭೆ
ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಶಾಖೆಗಳ ಸಿಬ್ಬಂದಿಗಳು ಹೊರ ರಾಜ್ಯದವರೇ ಆಗಿದ್ದು ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲ.ಇದರಿಂದಾಗಿ ಗ್ರಾಮೀಣ ಪ್ರದೇಶಗಳ ರೈತರು ,ಮಹಿಳೆಯರು, ಕೃಷಿ ಕಾರ್ಮಿಕರಿಗೆ ಬ್ಯಾಂಕ್ ವ್ಯವಹಾರ ನಡೆಸಲು ತೀವ್ರ ತೊಂದರೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.
ಇಂದು ಮೈಸೂರಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ನಡೆಸಿದ ಕನ್ನಡ ಚಳುವಳಿಗಾರರು ಹಾಗೂ ಕನ್ನಡಪರ ಚಿಂತಕರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಬಹುತೇಕ ಬ್ಯಾಂಕ್ ಗಳ ಚಲನ್ ಗಳು, ಚೆಕ್ ಗಳು ಕನ್ನಡೇತರ ಭಾಷೆಯಲ್ಲಿವೆ. ಬ್ಯಾಂಕ್ ಸಿಬ್ಬಂದಿಗಳು ಬಳಸುವ ಆಂಗ್ಲ ಭಾಷೆ ಹಾಗೂ ಹಿಂದಿ ಭಾಷೆ ನಮ್ಮ ಗ್ರಾಮೀಣ ಜನರಿಗೆ ತಿಳಿಯುವುದಿಲ್ಲ.ಆದ್ದರಿಂದ ಬ್ಯಾಂಕ್ ವ್ಯವಹಾರಗಳಲ್ಲಿ ಜನರಿಗೆ ನೋಡ ಉಂಟಾಗುವ ಸಾಧ್ಯತೆಗಳೂ ಇವೆ ಎಂದು ದೂರಿದರು.
ಮೈಸೂರು ನಗರ ಹಾಗೂ ಜಿಲ್ಲೆಯ ಹಲವು ಖಾಸಗಿ ಶಾಲಾ ಕಾಲೇಜುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸಲಾಗಿಲ್ಲ.ಕೆಲವು ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಬಳಸುವ ಮಕ್ಕಳಿಗೆ ದಂಡ ಹಾಕುತ್ತಿರುವ ಬಗ್ಗೆಯೂ ದೂರುಗಳಿವೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಗಮನ ಹರಿಸಬೇಕು.ಕನ್ನಡೇತರ ಬ್ಯಾಂಕ್ ಸಿಬ್ಬಂದಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕು.ಇಲ್ಲವೇ ಕರ್ನಾಟಕ ರಾಜ್ಯದಿಂದ ಹೊರಹೋಗಬೇಕು.ಈ ಬಗ್ಗೆ ಪ್ರಾಧಿಕಾರ ಶಿಸ್ತಿನ ಆದೇಶ ಹೊರಡಿಸಬೇಕು ಎಂದವರು ಆಗ್ರಹ ಪಡಿಸಿದರು.
ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ತ್ರಿಭಾಷಾ ಸೂತ್ರದಂತೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಬಳಸಬೇಕು. ಎಲ್ಲ ಖಾಸಗಿ ಶಾಲಾಕಾಲೇಜುಗಳು ತಮ್ಮ ನಾಮ ಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತೆ. ಸೂಚಿಸಬೇಕು.ಕನ್ನಡ ಮಾತನಾಡಿದರೆ ದಂಡ ವಿಧಿಸುವ ಶಾಲೆಗಳ ಅನುಮತಿ ರದ್ದುಪಡಿಸಬೇಕು ಎಂದು ಡಾ.ಭೇರ್ಯ ರಾಮಕುಮಾರ್ ಆಗ್ರಹಪಡಿಸಿದರು.
ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ನುಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ,ಕನ್ನಡ ಸಂಸ್ಕೃತಿ ಇಲಾಖೆಯ ಸಹನಿರ್ದೇಶಕರಾದ ಸುದರ್ಶನ್ ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯರಾದ ಟಿ.ಗುರುರಾಜ್ ಸಭೆಯಲ್ಲಿ ಮಾತನಾಡಿದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮದ್ದಿಕೆರೆ ಗೋಪಾಲ್,ಕನ್ನಡ ಚಳುವಳಿಗಾರ ರಾದ ಅರವಿಂದ್ ಶರ್ಮಾ, ಸ. ರ.ಸುದರ್ಶನ್,ಶಿವಶಂಕರೆಗೌಡ, ಯಮುನಾ ಮೊದಲಾದವರು ಮಾತನಾಡಿ ಆಡಳಿತದಲ್ಲಿ, ಜನಜೀವನದಲ್ಲಿ ಕನ್ನಡ ಭಾಷೆಯ
ಬಳಕೆ ಕುರಿತಂತೆ ಹಲವು ಸಲಹೆಗಳನ್ನು ನೀಡಿದರು.