ಸಹಕಾರ ಸಂಘಗಳು ತಮ್ಮ ನೈಜ ಆಡಿಟ್ ವರದಿಯನ್ನು ಬಹಿರಂಗಪಡಿಸಬೇಕು

Must Read

ಸಹಕಾರ ಸಂಘಗಳು ಪ್ರತಿ ವರ್ಷಕ್ಕೊಮ್ಮೆ ತಮ್ಮ ವಾರ್ಷಿಕ ಅಢಾವೆ ಪತ್ರಿಕೆಯನ್ನು ಪ್ರಕಟಪಡಿಸುತ್ತವೆ. ಅದರಲ್ಲಿ ಸಂಘದ ದುಡಿಯುವ ಬಂಡವಾಳ, ಠೇವಣಿಗಳು, ಸಾಲಗಳು, ನಿಧಿಗಳು ಲಾಭ-ಹಾನಿ ಪತ್ರಿಕೆ ಮುಂತಾದವುಗಳ ವಿವರ ನೀಡುತ್ತವೆ. ಈ ಅಢಾವೆ ಪತ್ರಿಕೆಯನ್ನು ಸಂಘದ ಶೇರುದಾರರಿಗೆ ಹಂಚಿ ಅವರನ್ನು ಸರ್ವ ಸಾಧಾರಣ ಸಭೆಗೆ ಕರೆದು ಅಢಾವೆ ಪತ್ರಿಕೆಯಲ್ಲಿ ಇರುವಂಥ ಅಂಕಿ ಸಂಖ್ಯೆಗಳನ್ನೇ ಮತ್ತೊಮ್ಮೆ ಓದಿ ತಮ್ಮ ಸೊಸಾಯಟಿಯ ಬಗ್ಗೆ ತುತ್ತೂರಿ ಊದುತ್ತವೆ.

ಇದೊಂದು ಹಬ್ಬದಂತೆ ಇರುತ್ತದೆ. ಸೊಸಾಯಿಟಿಯ ಕಚೇರಿಯನ್ನು ಕಬ್ಬು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ. ಆಡಳಿತ ಮಂಡಳಿ ಸದಸ್ಯರು, ಕಾರ್ಯದರ್ಶಿ ಸಿಬ್ಬಂದಿ ವರ್ಗದವರು ಸಂಘದ ಗೇಟಿಗೆ ನಿಂತು ಸಭೆಗೆ ಬರುವ ಶೇರುದಾರರನ್ನು ನಗನಗುತ್ತ ಸ್ವಾಗತಿಸುತ್ತಾರೆ. ಒಳಗೆ ಹೋದ ಕೂಡಲೇ ನಾಷ್ಟಾ, ಚಹಾ ವ್ಯವಸ್ಥೆ ಇರುತ್ತದೆ. ಪ್ರತಿಯೊಬ್ಬರನ್ನೂ ನಾಷ್ಟಾ ಮಾಡಲು ಪ್ರೀತಿಯಿಂದ ಒತ್ತಾಯಿಸುತ್ತಾರೆ, ಸಭೆ ಮುಗಿದ ನಂತರ ಪ್ರೀತಿಯ ಭೋಜನ ಮಾಡಿ ಹೋಗಲೂ ಹೇಳಲಾಗುತ್ತದೆ.
ಸಭೆಯಲ್ಲಿ ಶೇರುದಾರರನ್ನು ಅತ್ಯಂತ ಆತ್ಮೀಯವಾಗಿ ಕಾರ್ಯದರ್ಶಿ ಸ್ವಾಗತಿಸುತ್ತಾನೆ. ಸಂಘದ ಅಧ್ಯಕ್ಷರು ವರದಿ ವಾಚನ ಎಂಬ ಬೊಗಳೆ ಕಾರ್ಯಕ್ರಮದಲ್ಲಿ ತಮ್ಮ ಸಂಘ ಅಷ್ಟು ಬಂಡವಾಳ ಹೆಚ್ಚಿಸಿಕೊಂಡಿದೆ, ಇಷ್ಟು ಸದಸ್ಯರ ಸಂಖ್ಯೆ ಹೆಚ್ಚಿದೆ, ಸಂಘದ ಶಾಖೆಗಳ ಸಂಖ್ಯೆ ಇಷ್ಟು ಹೆಚ್ಚಾಗಿದೆ, ಸಂಘಕ್ಕೆ ಮೈಸೂರು ಅರಮನೆಯಂಥ ಕಟ್ಟಡ ಕಟ್ಟಲಾಗಿದೆ ಎಂದೆಲ್ಲ ಬಡಾಯಿ ಕೊಚ್ಚುತ್ತ ಇಷ್ಟೆಲ್ಲ ನಾನೇ ಮಾಡಿದ್ದು, ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಆಯಿತು ಎಂದು ಎದೆ ತಟ್ಟಿಕೊಂಡು ಹೇಳುತ್ತಾರೆ ಕೊನೆಗೆ ಸಂಪ್ರದಾಯ ಎಂಬಂತೆ ಸಂಘದ ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲ ಕಟ್ಟಿದ್ದರಿಂದ, ಠೇವಣಿದಾರರು ವಿಶ್ವಾಸವಿಟ್ಟು ಠೇವಣಿ ಇಟ್ಟಿದ್ದರಿಂದ ಇಷ್ಟೆಲ್ಲ ಬೆಳವಣಿಗೆಯಾಯಿತು ಎಂದು ಅತ್ಯಂತ ವಿನಯದಿಂದ ಹಲ್ಲುಗಿಂಜಿ ಭಾಷಣ ಮುಗಿಸುತ್ತಾರೆ.
ನಂತರ ಸಭೆಯಲ್ಲಿ ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಸಾಹಿತಿ, ಸಾಧಕರಿಗೆ ಸನ್ಮಾನದಂಥ ಕಾರ್ಯಕ್ರಮ ಹಾಕಿಕೊಂಡು ಸಂಘವು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಬಿಂಬಿಸಿ ಶೇರುದಾರರ ಕಣ್ಣಿಗೆ ತಂಪು ಕನ್ನಡಕ ಇಟ್ಟು, ಕಿವಿಯಲ್ಲಿ ಹೂವಿಟ್ಟು, ಬೂರಿ ಭೋಜನ ವ್ಯವಸ್ಥೆ ಮಾಡಿ ಕಳಿಸಿಬಿಡುತ್ತಾರೆ.

ಸಹಕಾರ ಸಂಘದವರು ಅಢಾವೆ ಪತ್ರಿಕೆಯನ್ನೇನೋ ಕೊಡುತ್ತಾರೆ ಆದರೆ ಅದರಲ್ಲಿ ಸಂಘದ ಒಳಹೂರಣ ಇರುವುದಿಲ್ಲ. ಸಂಘದಲ್ಲಿ ಸಹಕಾರ ನಿಯಮಗಳನ್ನು ಪಾಲಿಸಲಾಗಿದೆಯೇ, ಸಾಲ ಕೊಡುವಾಗ ಎಲ್ಲ ನಿಯಮಗಳನ್ನು ಪಾಲಿಸಲಾಗಿದೆಯೇ, ಕಟ್ಟಡ ಕಟ್ಟುವಾಗ ನಿಯಮಗಳನ್ನು ಪಾಲಿಸಲಾಗಿದೆಯೇ, ನಿಧಿಗಳನ್ನು ಬೇರೆ ಸಹಕಾರ ಸಹಕಾರ ಸಂಘಗಳಲ್ಲಿ, ಬ್ಯಾಂಕುಗಳಲ್ಲಿ ಠೇವಣಿ ಇಡಬೇಕಾದರೆ ಯಾವ ನಿಯಮಗಳಿವೆ, ಸಹಕಾರ ಶಿಕ್ಷಣ ನಿಧಿ ಹಂಚಿಕೆ ಯಾವ ರೀತಿ ಇದೆ ಎಂಬ ಬಗ್ಗೆ ಒಟ್ಟಾರೆ ಸಂಘವು ಕಾನೂನು ಪ್ರಕಾರ ನಡೆದು ಶೇರುದಾರರ ಹಿತಾಸಕ್ತಿಯಂತೆ ಇದೆಯೇ ಎಂಬ ಬಗ್ಗೆ ಸಂಘದ ಲೆಕ್ಕ ಪರಿಶೋಧಕರು ಒಂದು ಆಡಿಟ್ ವರದಿಯನ್ನು ನೀಡಿರುತ್ತಾರೆ ಅದನ್ನು ಬಹಿರಂಗಪಡಿಸಬೇಕಾದದ್ದು ಸಂಘದ ಕರ್ತವ್ಯ. ಅದನ್ನು ತಿಳಿಯಬೇಕಾದದ್ದು ಸಂಘದ ಶೇರುದಾರರ ಹಕ್ಕು.

ಉದಾಹರಣೆಗೆ ಮೂಡಲಗಿಯ ಕುರುಹಿನಶೆಟ್ಟಿ ಕೋ ಆಪ್ ಸೊಸಾಯಿಟಿಯ ಸನ್ ೨೦೨೧-೨೨, ೨೦೨೨-೨೩ ಹಾಗೂ ೨೦೨೩-೨೪ ರ ನಿಜವಾದ ಆಡಿಟ್ ವರದಿಗಳನ್ನು ಜಿಲ್ಲಾ ಲೆಕ್ಕ ಪರಿಶೋಧಕರ ಕಚೇರಿಯಿಂದ ಪಡೆಯಲಾಗಿದೆ. ಅವುಗಳನ್ನು ಪರಿಶೀಲಿಸಲಾಗಿ ಸನ್ ೨೦೨೩-೨೪ ರ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಂಘದ ಲೆಕ್ಕ ಪರಿಶೋಧಕ ಮಠದ & ಕೋ. ರವರು ಅನೇಕ ತಪ್ಪುಗಳನ್ನು ದಾಖಲಿಸಿ ತಿದ್ದಿಕೊಳ್ಳಲು ಹೇಳಿದ್ದಾರೆ.

ಸಂಘದಿಂದ ೫೦ ಲಕ್ಷದ ಮಧ್ಯಮಾವಧಿ ಸಾಲದ ಮಿತಿಯನ್ನು ಮೀರಿ ಸಾಲ ನೀಡಲಾಗಿದೆ, ದಾಖಲೆಗಳನ್ನು ಪಡೆಯದೇ ಸಾಲ, ಜಾಮೀನುದಾರರ/ಅಧ್ಯಕ್ಷರ/ಕಾರ್ಯದರ್ಶಿಯ ಸಹಿ ಇಲ್ಲದೆ ಸಾಲ ನೀಡಲಾಗಿದೆ ಇದಕ್ಕೆ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿ ಹೊಣೆಗಾರರಾಗುತ್ತಾರೆ ಎಂದು ಉಲ್ಲೇಖಿಸಿ ವರದಿ ನೀಡಿದ್ದಾರೆ.

ಸಂಘದಿಂದ ಡಿವಿಡೆಂಡ್ ನೀಡಿಲ್ಲ. ಶೇರುದಾರರನ್ನು ಸಭೆಯಲ್ಲಿ ಹಾಡಿ ಹೊಗಳುವ ಇವರು ಡಿವಿಡೆಂಡ್ ಪಡೆದುಕೊಳ್ಳಿ ಅಂತ ಒಂದು ನೋಟೀಸ್ ಕೂಡ ಕಳಿಸುವುದಿಲ್ಲ ! ಯಾಕೆ ? ಶೇರುದಾರರಿಗೆ ಸರ್ಟಿಫಿಕೇಟ್ ನೀಡಿಲ್ಲ, ಅದಿಲ್ಲ, ಇದಿಲ್ಲ ಇದನ್ನೆಲ್ಲ ತಿದ್ದುಪಡಿ ಮಾಡಿಕೊಳ್ಳಿ ಎಂದು ವರದಿ ನೀಡಿದ್ದಾರೆ.

ವಿಚಿತ್ರ ವೆಂದರೆ ಈ ರೀತಿ ಲೆಕ್ಕ ಪರಿಶೋಧಕರು ಕಳೆದ ಮೂರು ವರ್ಷಗಳಿಂದ ಸಲಹೆ ಹಾಗೂ ದೂರು ನೀಡಿ ವರದಿ ಕೊಟ್ಟಿದ್ದಾರೆ ಆದರೆ ಕುರುಹಿನಶೆಟ್ಟಿ ಸಂಘದವರು ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡಿದ್ದಾರೆ ! (ಅದರ ಹಿಂದಿನ ಆಡಿಟ್ ವರದಿಗಳ ಪರಿಸ್ಥಿತಿಯನ್ನು ದೇವರೇ ಬಲ್ಲ! ) ಸರ್ವ ಸಾಧಾರಣ ಸಭೆಯಲ್ಲಿ ಮಾತ್ರ ತಾವೇ ಸಾಧಕರು ಎಂಬ ತುತ್ತೂರಿ ಊದುತ್ತಾರೆ. ಏನಾದರೂ ಪ್ರಶ್ನೆ ಮಾಡಿದರೆ ಗೂಂಡಾಗಳಂತೆ ಹೊಡೆಯಲು ಬರುತ್ತಾರೆ. ಆದರೆ ಶೇರುದಾರರೂ ಸಂಘದ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದಾರೆ ಎಂಬುದನ್ನು ಪ್ರತಿಯೊಬ್ಬ ಶೇರುದಾರ ಅರಿತಿರಬೇಕು. ಕುರುಹಿನಶೆಟ್ಟಿ ಸಂಘದ ಲೆಕ್ಕ ಪರಿಶೋಧಕರು ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ ಅದರ ಬಗ್ಗೆ ಮುಂದೆ ಬರೆಯಲಾಗುವುದು. ಇದು ಸಂಕ್ಷಿಪ್ತವಾಗಿ ಬರೆದದ್ದು ಹೆಚ್ಚಿನ ಮಾಹಿತಿ ಬೇಕಾದವರು ನನ್ನನ್ನು ಸಂಪರ್ಕಿಸಬಹುದು.

ಸಂಘದ ವ್ಯವಹಾರ ನೂರಾರು ಕೋಟಿಯಷ್ಟಾದಾಗ ಕೆಲವು ತಪ್ಪುಗಳು ಮರೆಮಾಚಿ ಹೋಗುತ್ತವೆ ಆದರೆ ಅದೇ ದೊಡ್ಡದಾದಾಗ ಸಂಘದ ಶೇರುದಾರರ, ಠೇವಣಿದಾರರ ಹಣ ಮುಳುಗಿಹೋಗುವಾಗ ಈ ಆಡಳಿತ ಮಂಡಳಿಯವರಾಗಲಿ, ಕಾರ್ಯದರ್ಶಿಯಾಗಲಿ ಬರುವುದಿಲ್ಲ. ಹಾಗೆ ಆಗಬಾರದೆಂದರೆ ಲೆಕ್ಕ ಪರಿಶೋಧಕರ ಈ ನಿಜವಾದ ವರದಿಯನ್ನು ಸರ್ವ ಸಾಧಾರಣ ಸಭೆಯಲ್ಲಿ ತೋರಿಸಬೇಕು. ಹಿಂದಿನ ವರ್ಷದ ತಪ್ಪುಗಳಿದ್ದರೆ ತಿದ್ದಿಕೊಂಡಿದ್ದಾಗಿ ಹೇಳಬೇಕು. ಶೇರುದಾರರು ಈ ಸಂಗತಿಯನ್ನು ಅರಿತಿರಬೇಕು ಹಾಗೂ ಕೇಳಬೇಕು.

ನೀವು ಯಾವುದಾದರೂ ಸಂಘದಲ್ಲಿ ಶೇರುದಾರರಾಗಿದ್ದರೆ ವಾರ್ಷಿಕ ಅಢಾವೆ ವರದಿಯನ್ನು ಕೇಳುವ ಹಕ್ಕು ನಿಮ್ಮದಾಗಿದೆ. ಸಂಘದ ಕಚೇರಿಗೆ ಬರೆದು ಕಾರ್ಯದರ್ಶಿಯಿಂದ ಕೇಳಬಹುದು ಆತ ಕೊಡದಿದ್ದರೆ ಜಿಲ್ಲಾ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕೇಳಬಹುದು ಅಥವಾ ಮಾಹಿತಿ ಹಕ್ಕು ಅಡಿಯಲ್ಲಿ ಕೇಳಬಹುದು ಅಥವಾ ನನ್ನನ್ನು ಸಂಪರ್ಕಿಸಬಹುದು.

ಉಮೇಶ ಮ. ಬೆಳಕೂಡ
ಮೊ. 9448863309

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...

More Articles Like This

error: Content is protected !!
Join WhatsApp Group