ಡಾ.ಎಸ್. ಎಲ್. ಭೈರಪ್ಪವರ ಕಾದಂಬರಿಗಳು ಕೇವಲ ಕಥೆಗಳಲ್ಲ, ಅವು ಸಮಾಜ, ಇತಿಹಾಸ ಮತ್ತು ಮಾನಸಶಾಸ್ತ್ರದ ಅಧ್ಯಯನವಾಗಿದ್ದವು.
‘ಪರ್ವ’, ‘ಸಾಕ್ಷಿ’, ‘ಅವರಣ’, ‘ತಂತು’, ‘ನಿರಾಕರಣ’,…. ಅವರು ಬರೆದ ಬಹುತೇಕ ಕೃತಿಗಳು ಸಾಹಿತ್ಯ ಪ್ರಪಂಚದಲ್ಲಿ ಅಮರ ಸ್ಥಾನ ಪಡೆದಿವೆ. ಅವರ ಬರಹದ ಶೈಲಿ ಸರಳವಾದರೂ ಅದರಲ್ಲಿ ತತ್ತ್ವಚಿಂತನೆ, ಗಂಭೀರ ವಿಚಾರಮಾಲೆಗಳು ತುಂಬಿಕೊಂಡಿದ್ದವು. ವೈಯಕ್ತಿಕ ಅನುಭವಗಳನ್ನೂ, ಸಮಾಜದ ಗಾಢ ವಾಸ್ತವಗಳನ್ನೂ ಅವರು ನಿಷ್ಠೆಯಿಂದ ಬರೆಯುತ್ತಿದ್ದರು.
ಸತ್ಯದ ಹುಡುಕಾಟವೇ ಅವರ ಜೀವನದ ಹಾಗೂ ಸಾಹಿತ್ಯದ ಕೇಂದ್ರಬಿಂದು. ಅವರು ಯಾವ ವಿಷಯವನ್ನು ಕೈಗೆತ್ತಿಕೊಂಡರೂ ಅದನ್ನು ಸಂಶೋಧನೆ, ಅಧ್ಯಯನ ಮತ್ತು ಅನುಭವಗಳಿಂದ ಸಮೃದ್ಧಗೊಳಿಸುತ್ತಿದ್ದರು. ಅವರು ಜನಪ್ರಿಯತೆಯಿಗಾಗಿ ಬರೆಯಲಿಲ್ಲ; ಸತ್ಯವನ್ನು ಹೇಳುವುದಕ್ಕಾಗಿ ಮಾತ್ರ ಬರೆಯುತ್ತಿದ್ದರು. ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಕನ್ನಡವನ್ನು ವಿಶ್ವಸಾಹಿತ್ಯದ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿತು. ಅವರ ಬದುಕು ಸರಳವಾಗಿದ್ದರೂ ಅವರ ಚಿಂತನೆ ಅಸಾಮಾನ್ಯವಾಗಿತ್ತು.
ನಮ್ಮ ಸಮಾಜದ ಬೆಳವಣಿಗೆಗೆ ಅವರು ತಂದುಕೊಟ್ಟ ಚಿಂತನೆಯ ಬೆಳಕು ಅಜರಾಮರ.
ಶ್ರೀಯುತ ಭೈರಪ್ಪನವರೇ, ಇದೇನು ಮಾಡಿಬಿಟ್ಟಿರಿ !
ಸಾಹಿತ್ಯ ಲೋಕದಲ್ಲಿ ‘ಭೀಮಕಾಯ’ ರಂತಿದ್ದ ತಮ್ಮನ್ನು ಇದ್ದಕ್ಕಿದ್ದಂತೆ ‘ದೂರ ಸರಿದರು’ ಅನ್ನೋದನ್ನು ಒಪ್ಪಲು ಆಗುತ್ತಲೇ ಇಲ್ಲ. ‘ತಬ್ಬಲಿಯು ನೀನಾದೆ ಮಗನೇ’ ಎಂಬ ಅನಾಥ ಭಾವನೆ ಮನಸ್ಸನ್ನು ಕಾಡುತ್ತಿದೆ. ನಿಮ್ಮ ಸುಸಂಸ್ಕೃತ ‘ವಂಶವೃಕ್ಷ’ ದ ಕುಡಿಗಳು ನಮ್ಮೊಂದಿಗೇ ನಮ್ಮ ಕಾಲೇಜಿನಲ್ಲೇ ಓದಿಕೊಂಡಿರುತ್ತಿದ್ದಾಗ ತುಂಬಾ ಹೆಮ್ಮೆ ಪಡುತ್ತಿದ್ದೆವು.
ಆಳವಾದ ‘ಅನ್ವೇಷಣೆ’ ಇಲ್ಲದೇ ನೀವು ಯಾವುದನ್ನೂ ಬರೆದವರಲ್ಲ. ಭವ್ಯ ‘ಜಲಪಾತ’ ದಂತೆ ಭೋರ್ಗರೆದ ನಿಮ್ಮ ಬರಹಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ತುಂಬಿಸಿದ ನಿಮ್ಮ ‘ಪರ್ವ’ ಮುಗಿಯಿತೆಂಬ ಸತ್ಯವನ್ನು ನಾವು ಹೇಗೆ ಜೀರ್ಣಿಸಿಕೊಳ್ಳಲಿ ?
ನಿಜವಾಗಿಯೂ ನಿಮ್ಮ ಅಭಿಮಾನಿಗಳಿಗೆಲ್ಲ ‘ಗ್ರಹಣ’ ಬಡಿದಂತಾಗಿದೆ. ನಿಮ್ಮ ಅಗಲಿಕೆಯಿದ ಗೋಚರಿಸಿದ ಈ ಅಗಾಧ ಕಂದರವನ್ನು ‘ದಾಟು’ ವುದು ಹೇಗೆ ? ‘ಆವರಣ’ ಗಳಿಲ್ಲದ ನಿಮ್ಮ ಅಗಾಧ ಪಾಂಡಿತ್ಯ, ‘ಕವಲು’ ಗಳಿಲ್ಲದ ನಿಮ್ಮ ನೇರ ನುಡಿಗಳ ‘ಅನ್ವೇಷಣೆ’ ಗೆ ಇನ್ನೆಲ್ಲಿಯ ಅವಕಾಶ ?
ಅಲ್ಲಲ್ಲಿ ಕಾಣಿಸಿದ ಅಪ್ರಬುದ್ಧ *ನಿರಾಕರಣೆ* ಗೆ ತಲೆ ಕೆಡಿಸಿಕೊಳ್ಳದೇ ಅತ್ಯಂತ *ಸಾರ್ಥ* ಕ ಬದುಕನ್ನು ಬಾಳಿದ ನಿಮ್ಮ ಅಭಿಮಾನ ಪೂರ್ವ ನೆನಪುಗಳು ನಿಮ್ಮೆಲ್ಲ ಅಭಿಮಾನಿಗಳ ಮನದಲ್ಲಿ *ಮಂದ್ರ* ಸ್ತರದಲ್ಲಿ ಎಂದೆಂದಿಗೂ ಗುoಯ್ಗುಡುತ್ತಿದ್ದು ಸ್ಥಿರವಾಗಿ *ನೆಲೆ* ನಿಂತಿರಲೆಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ.
ವಿದ್ಯಾ ರೆಡ್ಡಿ, ಗೋಕಾಕ

