ಗಜಲ್-೧
ರೂಪಕವಿಲ್ಲದ ರೂಪ ನನ್ನ ಕಾವ್ಯ
ಬಡವನ ಹಸಿ ಕೋಪ ನನ್ನ ಕಾವ್ಯ
ಸಂಕೇತವಿಲ್ಲದ ಭೂಪ ನನ್ನ ಕಾವ್ಯ
ಕತ್ತಲು ಲೋಕದ ದೀಪ ನನ್ನ ಕಾವ್ಯ
ಪ್ರತಿಮೆಯಿಲ್ಲದ ವಿಶ್ವರೂಪ ನನ್ನ ಕಾವ್ಯ
ಬೆಂಕಿಯಲರಳಿದ ವಿಶಾಪ ನನ್ನ ಕಾವ್ಯ
ದೈವಕು ಮಿಗಿಲು ಅಮ್ಮ ಅಪ್ಪ ನನ್ನ ಕಾವ್ಯ
ನೊಂದವರ ಕಣ್ಣೀರಿನ ತಾಪ ನನ್ನ ಕಾವ್ಯ
ಅಕ್ಕತಂಗಿಯರಿಗೆ ಮಿಡಿವ ಸಂತಾಪ ನನ್ನ ಕಾವ್ಯ
“ಜಾಲಿ” ದಲಿತ ಅಜೆಂಡಾದ ಅನುರೂಪ ನನ್ನ ಕಾವ್ಯ
ಗಜಲ್-೨
ಸೋಲಿಗೆ ಹೆದರುವ ಸರದಾರನಾಗಬೇಡ ನೀನು
ಗೆಲುವಿಗೆ ಬೀಗುವ ಸರದಾರನಾಗಬೇಡ ನೀನು
ನೆನ್ನೆಯ ಕಥೆ ಇಂದಿಲ್ಲ ನಾಳೆಯ ಕಥೆ ಇನ್ಹೇಗೋ
ನಿಂತಲ್ಲೇ ನಿಲ್ಲುವ ಸರದಾರನಾಗಬೇಡ ನೀನು
ಮರದ ನೆರಳಿಗೆ ನಿಂತರೂ ಮಾತು ಬರುವುದು
ಸುಳ್ಳಿಗೆ ಕಿವಿಗೊಡುವ ಸರದಾರನಾಗಬೇಡ ನೀನು
ಗುಡ್ಡಬೆಟ್ಟಗಳನು ಮತ್ತೆ ಮತ್ತೆ ನೋಡು ಕೇಳು
ಆಡಂಬರ ನೋಡುವ ಸರದಾರನಾಗಬೇಡ ನೀನು
ಜಾತ್ರೆಯಲಿ ಯಾರೂ ನಿನ್ನನು ನೋಡರು “ಜಾಲಿ”
ಸುಮ್ಮನೆ ಹುಡುಕುವ ಸರದಾರನಾಗಬೇಡ ನೀನು
ಗಜಲ್-೩
ಮನುಷ್ಯ ಮಾತಾಡಿದರೆ ಕಾಗೆಗಳು ಸಿಟ್ಟಾಗುತ್ತಿವೆ
ಮನುಜ ಬಾಯ್ತೆರೆದರೆ ಹಾವುಗಳು ಸಿಟ್ಟಾಗುತ್ತಿವೆ
ರೂಪದಲ್ಲಿ ಆಗಲಿಲ್ಲ ಬದಲಾವಣೆ ಮನಸಗಾಯ
ಕೀವು ಒಡೆದರೆ ಕಾಡು ಪ್ರಾಣಿಗಳು ಸಿಟ್ಟಾಗುತ್ತಿವೆ
ಪ್ರೀತಿಯ ಮಾತುಗಳು ದ್ವೇಷದಲಿ ಬದಲಾಗಿವೆ
ತಿರುಗುವ ಧರೆ ನಿಂತರೆ ಜೀವಗಳು ಸಿಟ್ಟಾಗುತ್ತಿವೆ
ನಗುವ ಹಾಗೆಯೇ ಇಲ್ಲ ಇನ್ನು ಮುಂದೆ ಕತ್ತಲು
ತಾ ಅತೀಂದ್ರಿಯನೆಂದು ಬೀಗಿದರೆ ದೇವತೆಗಳು ಸಿಟ್ಟಾಗುತ್ತಿವೆ
ಇದು ಭೂಲೋಕ ಮಾಯಾಲೋಕವಲ್ಲ “ಜಾಲಿ”
ಸತ್ಯ ಬಿಚ್ಚಿಟ್ಟರೆ ಅಸತ್ಯದ ಮೊಳೆಗಳು ಸಿಟ್ಟಾಗುತ್ತಿವೆ
ಗಜಲ್-೪
ಪ್ರಶಸ್ತಿಗಾಗಿ ಬರೆಯುವವರಲ್ಲ ನಾವು
ಹೆಸರಿಗಾಗಿ ಬರೆಯುವವರಲ್ಲ ನಾವು
ನಮ್ಮ ಸುತ್ತ ಹೊಗಳುಭಟ್ಟರನು ಇಟ್ಟಿಲ್ಲ
ಮೆಚ್ಚುಗೆಗಾಗಿ ಬರೆಯುವವರಲ್ಲ ನಾವು
ಲಾಬಿ ಮಾಡುವ ಕಾಯಕ ನಮ್ಮಲಿಲ್ಲ
ಮರ್ಜಿಗಾಗಿ ಬರೆಯುವವರಲ್ಲ ನಾವು
ಅಧಿಕಾರದ ಗಾದಿ ಮೆತ್ತಗೆ ಕೋಮಲ
ರಾಜನಿಗಾಗಿ ಬರೆಯುವವರಲ್ಲ ನಾವು
ಗುಲಾಬಿ ಮರೆಯಲಿ ಅಳುವ ಮುಳ್ಳು
“ಜಾಲಿ” ಮೋಜಿಗಾಗಿ ಬರೆಯುವವರಲ್ಲ ನಾವು
ಗಜಲ್-೫
ಬಡತನ ಬವಣೆ ಬರಿಗೈಯನು ಬಿಟ್ಟು ನಮ್ಮಲ್ಲಿ ಏನೂ ಇಲ್ಲ
ಕನಸು ಆಕ್ರೋಶ ಪದವಿಯನು ಬಿಟ್ಟು ನಮ್ಮಲ್ಲಿ ಏನೂ ಇಲ್ಲ
ಹಿಂದಿನಿಂದಲೂ ಬರಿ ಹೊಟ್ಟೆಬಟ್ಟೆಗೆ ಹೋರಾಡಿದ್ದೇವೆ
ಈಗಲೂ ಅದೇ ದಾರಿಯನು ಬಿಟ್ಟು ನಮ್ಮಲ್ಲಿ ಏನೂ ಇಲ್ಲ
ಹರಿದ ಅಂಗಿ ಚಪ್ಪಲಿಗಳು ಕೆದರಿದ ಕೂದಲು ಮೈಯೆಲ್ಲ ಧೂಳು
ಕಂಡರೂ ಕಾಣದ ಮುಖವನು ಬಿಟ್ಟು ನಮ್ಮಲ್ಲಿ ಏನೂ ಇಲ್ಲ
ನಮ್ಮನು ಸದಾ ಕಾಡುವ ಸೋಲುಗಳು ನಿದ್ದೆ ಮಾಡಲು ಬಿಟ್ಟಿಲ್ಲ
ಆಸೆ ಹತಾಶೆ ಅವಮಾನವನು ಬಿಟ್ಟು ನಮ್ಮಲ್ಲಿ ಏನೂ ಇಲ್ಲ
ಕೇಳಿಸದಂತೆ ನಮ್ಮ ಗೋಳು ಎಲ್ಲಿಯವರೆಗೋ ಹೇಗೋ ಸಾಗಿದೆ
“ಜಾಲಿ” ಆತ್ಮಾಭಿಮಾನವನು ಬಿಟ್ಟು ನಮ್ಮಲ್ಲಿ ಏನೂ ಇಲ್ಲ.
-ವೇಣು ಜಾಲಿಬೆಂಚಿ
ರಾಯಚೂರು.
ಅಭಿನಂದನೆಗಳು ಸರ್ ಗಜಲ್ಗಳು ಸೊಗಸಾಗಿ ಮೂಡಿ ಬಂದಿವೆ..