ಗೋಕಾಕ ಜಿಲ್ಲೆ ಹೋರಾಟಕ್ಕೆ ಮೂಡಲಗಿ-ಗೋಕಾಕ ತಾಲೂಕುಗಳ ಜನತೆ ಬೆಂಬಲಿಸಿ – ಮುರುಘರಾಜೇಂದ್ರ ಶ್ರೀ

Must Read

ಗೋಕಾಕ : ಗೋಕಾಕ ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ನಾಳೆ ಬುಧವಾರದಂದು “ಗೋಕಾಕ ಬಂದ್” ಗೆ ಕರೆ ನೀಡಲಾಗಿದ್ದು, ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಅರ್ಪಿಸಲಾಗುತ್ತಿದೆ. ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಂದ್ ಯಶಸ್ವಿಗೊಳಿಸಲು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ನೇತೃತ್ವ ವಹಿಸಿಕೊಂಡಿರುವ ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಕೋರಿದರು.

ಮಂಗಳವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ನಿಯೋಜಿತ ಗೋಕಾಕ ಜಿಲ್ಲಾ ಚಾಲನಾ ಹೋರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೋಕಾಕನ್ನು ಜಿಲ್ಲಾ ಕೇಂದ್ರವನ್ನು ಮಾಡುವ ಹೋರಾಟಕ್ಕೆ ಉಭಯ ತಾಲ್ಲೂಕಿನ ಎಲ್ಲ ಮಹಾಜನತೆಯು ಬೆಂಬಲವನ್ನು ನೀಡಿ ಹೋರಾಟಕ್ಕೆ ಶಕ್ತಿಯನ್ನು ತುಂಬುವಂತೆ ಅವರು ಹೇಳಿದರು.

ಕಳೆದ ನಾಲ್ಕು ದಶಕಗಳಿಂದ ಗೋಕಾಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಗೋಕಾಕ ಜಿಲ್ಲಾ ಕೇಂದ್ರ ರಚನೆ ಮಾಡಲು ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ನಿಯೋಗವೊಂದನ್ನು ಕರೆದುಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಅರ್ಪಿಸಲಾಗುವುದು. ಬೆಳಗಾವಿಯಲ್ಲಿ ಇದೇ ಡಿ. 8 ರಿಂದ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಗೋಕಾಕದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅದಕ್ಕೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಜನರು ಬೆಂಬಲಿಸಿ, ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು

ನಾಳೆ ನಡೆಯುವ ಬಂದ್ ನಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಚುನಾಯಿತ ಸದಸ್ಯರು, ವರ್ತಕರು, ವಕೀಲರು, ರಾಜಕೀಯ ಮುಖಂಡರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಾಳೆ ಬುಧವಾರದಂದು ಮುಂಜಾನೆ 10 ಘಂಟೆಗೆ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟವನ್ನು ಬೆಂಬಲಿಸಬೇಕು ಎಂದು ಮಹಾಸ್ವಾಮಿಗಳು ಹೇಳಿದರು.

ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ದೊಡ್ಡ ಜಿಲ್ಲೆಗಳಿಗೂ ಅಷ್ಟೇ ಅನುದಾನ. ಸಣ್ಣ ಜಿಲ್ಲೆಗಳಿಗೂ ಅಷ್ಟೇ ಅನುದಾನ ಬರುತ್ತದೆ. ಇದು ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಹೀಗಾಗಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕು. ಗೋಕಾಕ ಜಿಲ್ಲೆಯನ್ನು ಹೊಸ ಜಿಲ್ಲೆಯನ್ನಾಗಿ ಮಾಡಲು ನಮ್ಮ ಜಾರಕಿಹೊಳಿ ಕುಟುಂಬವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಬಂದಿದೆ. ಆದಷ್ಟು ಬೇಗ ಗೋಕಾಕವು ನೂತನ ಜಿಲ್ಲೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಕಾಕ ವಕೀಲರ ಸಂಘದ ಅಧ್ಯಕ್ಷ ಸುಭಾಸಗೌಡ ಬಿರಾದಾರ ಪಾಟೀಲ ಮಾತನಾಡಿ, ವಕೀಲರ ಸಂಘದಿಂದ ಹಲವು ರೀತಿಯ ಚಳವಳಿಗಳನ್ನು ಹಮ್ಮಿಕೊಂಡು ಸರಕಾರದ ಗಮನ ಸಳೆಯಲಾಗುತ್ತಿದೆ. ವರ್ತಕರು, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡಬೇಕು. ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ನಾವು ಜಿಲ್ಲಾ ಹೋರಾಟಕ್ಕೆ ಸದಾ ಬೆಂಬಲವನ್ನು ಕೊಡುತ್ತೇವೆ ಎಂದರು.

ಸಭೆಯಲ್ಲಿ ಜಿಲ್ಲಾ ರಚನಾ ಹೋರಾಟ ಸಮಿತಿ ಸದಸ್ಯರು, ವಕೀಲರ ಸಂಘದ ಪದಾಧಿಕಾರಿಗಳು, ನಗರಸಭೆ ಸದಸ್ಯರು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಚುನಾಯಿತ ಸದಸ್ಯರು, ಸಹಕಾರಿ ಮುಖಂಡರು, ವರ್ತಕರು, ವಿವಿಧ ಸಂಘ- ಸಂಸ್ಥೆಗಳ ಪ್ರಮುಖರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಚಾಲನಾ ಸಮಿತಿಯಿಂದ ಹಲವು ರೂಪದ ಉಗ್ರ ಪ್ರಮಾಣದಲ್ಲಿ ಹೋರಾಟಗಳು ನಡೆದಿವೆ.ಹಾಗೆ ಪ್ರಸ್ತುತ ದಿನಮಾನಗಳಲ್ಲಿ ಉಗ್ರ ಸ್ವರೂಪದ ಹೋರಾಟಗಳನ್ನು ಮಾಡಬೇಕು.ಜೆ.ಎಚ್. ಪಟೇಲರು ಗೋಕಾಕ ಜಿಲ್ಲೆ ಮಾಡಿದರು ಆಗ ಹಲವರು ವಿರೋಧ ಮಾಡಿದ್ದರ ಪರವಾಗಿ ಗೆಜೆಟ್ ತಡೆ ಹಿಡಿದಿದ್ದಾರೆ. ಗೋಕಾಕ ಜಿಲ್ಲೆ ಆದರೂ ಜಾರಕಿಹೊಳಿ ಸಹೋದರರಿಂದ. ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾರಕಿಹೊಳಿ ಸಹೋದರರು ಕೂಡಿಕೊಂಡು ಗೋಕಾಕ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸಬೇಕು.

-ಬಸಗೌಡಾ ಪಾಟೀಲ
ಜಿ.ಪಂ. ಮಾಜಿ ಅಧ್ಯಕ್ಷರು

ಗೋಕಾಕ ಜಿಲ್ಲೆ ಮಾಡಲಿಕ್ಕೆ ಸರಕಾರದ ಇಚ್ಚಾಶಕ್ತಿ ಕೊರತೆಯಿದೆ. ರಾಜ್ಯದಲ್ಲಿ ಬಹಳ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದರೂ ಕೂಡ ಕಳೆದ 4 ದಶಕಗಳಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಜಿಲ್ಲೆ ಮಾಡಲಿಲ್ಲ. ಹಲವು ತಾಲೂಕುಗಳು ಜಿಲ್ಲೆ ಬೇಡಿಕೆ ಇಟ್ಟಿವೆ. ಆದರೆ ಸರಕಾರ ಯಾವ ತಾಲೂಕನ್ನು ಜಿಲ್ಲೆ ಮಾಡಿದರೆ ಸೂಕ್ತ ಎಂಬುದನ್ನು ವಿಚಾರ ಮಾಡಿ ನಿಯೋಗಗಳ ವರದಿ ಆಧರಿಸಿ ನೂತನ ಜಿಲ್ಲೆ ಮಾಡಬೇಕು. ಗೋಕಾಕ ಜಿಲ್ಲೆಯಾಗಲಿ ಎಂಬುದು ನಮ್ಮ ಮಹಾದಾಸೆ.

ಅಶೋಕ ಪೂಜೇರಿ
ರಾಜಕೀಯ ಮುಖಂಡರು

ಗೋಕಾಕ ಜಿಲ್ಲೆ ಆಗಿ ನಾವೆಲ್ಲರೂ ವಿಜಯೋತ್ಸವ ಮಾಡಿದ್ದೇವು. ಆದರೆ ಕೆಲವರ ಬಲವಾದ ವಿರೋಧದ ನಡುವೆ ಸರಕಾರ ಅದನ್ನು ಹಿಂದಕ್ಕೆ ಪಡೆಯಿತು. ಜಾರಕಿಹೊಳಿ ಸಹೋದದರು ಮನಸ್ಸು ಮಾಡಿದರೆ ಗೋಕಾಕ ಜಿಲ್ಲೆ ಆಗುವದರಲ್ಲಿ ಎರಡು ಮಾತಿಲ್ಲ. ಅವರು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕು.

ರಾಜೇಂದ್ರ ಸಣ್ಣಕ್ಕಿ
ಪ್ರದೇಶ ಕುರುಬರ ಸಂಘದ ನಿರ್ದೇಶಕರು

LEAVE A REPLY

Please enter your comment!
Please enter your name here

Latest News

ಲೇಖನ : ಜೀವನವನ್ನು ಉನ್ನತೀಕರಿಸಿಕೊಳ್ಳಬೇಕೇ ಹೊರತು ಜೀವನಶೈಲಿಯನ್ನಲ್ಲ

ಬದುಕೆಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಒಂದೇ ರೀತಿ ಕಾಣುತ್ತದೆ. ಆದರೆ ಕೆಲವರ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳದೇ ಕೇವಲ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗುತ್ತದೆ. ಹಗಲು ರಾತ್ರಿ...

More Articles Like This

error: Content is protected !!
Join WhatsApp Group