ನವೋದಯ ಸಾಹಿತ್ಯ ಸಾಹಿತ್ಯ ತನ್ನ ತೀವ್ರತೆಯನ್ನು ಕಳೆದುಕೊಂಡು ನವ್ಯಕ್ಕೆ ಜಾರುತ್ತಿರುವಾಗ ಗೋಪಾಲ ಕೃಷ್ಣ ಅಡಿಗ ಪ್ರಾರಂಭವಾದ ಚಂಡ ಮದ್ದಳೆ ಮತ್ತು ಭೂಮಿಗೀತ ಕೃತಿಗಳ ಮೂಲಕ ಪ್ರೇರಣೆಗೊಂಡು ಅನೇಕ ಯುವ ಸಾಹಿತಿಗಳ ಹೊಸ ತಲೆಮಾರಿನ ಪರಂಪರೆ ಹುಟ್ಟಿಕೊಂಡಿತು.
ಉತ್ತರ ಕರ್ನಾಟಕದಲ್ಲಿ ಕಂಬಾರ ಚಂಪಾ ಗಿರಡ್ಡಿ
ಸಿದ್ಧಲಿಂಗ ಪಟ್ಟಣಶೆಟ್ಟಿ ಮಾಲತಿ ಪಟ್ಟಣಶೆಟ್ಟಿ ಮುಂತಾದ ಯುವ ಪಡೆ ನಿರ್ಮಾಣಗೊಂಡಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿನ ಜೆ ಪಿ ಚಳವಳಿ ನಂತರ ಗೋಕಾಕ ವರದಿ ನರಗುಂದ ನವಲಗುಂದ ರೈತರ ಬಂಡಾಯ ಹೀಗೆ ಕವಿಗೆ ತಾನು ಸಮಾಜ ಮುಖಿಯಾಗಿ ಬರೆಯ ಬೇಕೆನ್ನುವ ನೈತಿಕ ಜವಾಬ್ದಾರಿ ಹೆಚ್ಚಾಯಿತು.
ಮೈಸೂರು ಬೆಂಗಳೂರು ಭಾಗದಲ್ಲಿ ಲಂಕೇಶ್ ಪೂರ್ಣ ಚಂದ್ರ ತೇಜಸ್ವಿ ದೇವನೂರು ಮಹಾದೇವ ಮುಂತಾದವರು ಬಂಡಾಯ ಸಾಹಿತ್ಯ ನೊಗಕ್ಕೆ ಹೆಗಲು ಕೊಟ್ಟರು. ಇಂತಹ ತಂಡದಲ್ಲಿ ವೈಚಾರಿಕ ನೆಲೆಯಲ್ಲಿ ರೂಪಗೊಂಡ ಅಪ್ಪಟ ದೇಸಿ ಪ್ರತಿಭೆ ಹಾಗೂ ಪರಿವರ್ತನೆಯ ಗಟ್ಟಿ ಧ್ವನಿ ಪ್ರೊ ಮಾಲತಿ ಪಟ್ಟಣಶೆಟ್ಟಿ.
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಇವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸುತ್ತಿರುವ ಹಿರಿಯ ಲೇಖಕಿ. ಇವರು 1940 ಡಿಸೆಂಬರ್ 26 ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದರು. ಇವರ ತಾಯಿ ಶಿವಗಂಗೆ ತಂದೆ ಶಾಂತೇಶ ಕೋಟೂರ. ಧಾರವಾಡದ ಹೆಣ್ಣು ಮಕ್ಕಳ ತರಬೇತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ. ಎ) ಪಡೆದರು.
ಬೆಳಗಾವಿಯ ರಾಣಿ ಪಾರ್ವತಿದೇವಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ಅವರು ನಂತರ ಧಾರವಾಡದ ಜೆ. ಎಸ್. ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1998 ರಲ್ಲಿ ನಿವೃತ್ತರಾದರು.
ಸಾಹಿತ್ಯ ಕೃತಿಗಳು
ಪ್ರೊ ಮಾಲತಿ ಪಟ್ಟಣಶೆಟ್ಟಿಯವರ ಸಾಹಿತ್ಯ ಕೃಷಿಯ ಅತ್ಯಂತ ವಿಶಾಲ ಹಾಗೂ ಮೌಲ್ಯಯುತ.
ಬಾ ಪರೀಕ್ಷೆಗೆ,
ಗರಿಗೆದರಿ ತಂದೆ ಬದುಕು,
ಗುಲಾಬಿ, ದಾಹತೀರ,
ಮೌನ ಕರಗುವ ಹೊತ್ತು,
ಇತ್ತೀಚಿನ ಕವಿತೆಗಳು,
ಹೋದಂಡಿ, ಮುಂತಾದವು
ಕಾವ್ಯ ಸಂಕಲನಗಳು.
ಇಂದು ನಿನ್ನಿನ ಕತೆಗಳು, ಸೂರ್ಯ ಮುಳುಗುವುದಿಲ್ಲ ಇವು ಕಥಾಸಂಕಲನಗಳು.
*ವಿಮರ್ಶೆ*
ಬಸವರಾಜ ಕಟ್ಟೀಮನಿಯವರ ಬದುಕು ಬರಹ ಕುರಿತಾಗಿ ಮಾಡಿದ್ದು ಅಪರೂಪದ ವಿಮರ್ಶೆ.
*ಇತರ ಸಂಪಾದನಾ ಪ್ರಕಟಣೆಗಳು*
ಕಾವ್ಯ96 (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆ),
ಪ್ರಶಾಂತ (ಶ್ರೀಮತಿ ಶಾಂತಾದೇವಿ ಮಾಳವಾಡ ಇವರ ಷಷ್ಟ್ಯಬ್ದಿ ಸಮಾರೋಹ ಅಭಿನಂದನ ಗ್ರಂಥ
ಸಮತಾ (ಸಮುದಾಯ ಸಂಸ್ಥೆಯ ಪ್ರಕಟಣೆ) ಮುಂತಾದವು ಮಾಲತಿ ಪಟ್ಟಣಶೆಟ್ಟಿಯವರ ಸಂಪಾದನೆಗಳು.
ಬಸವರಾಜ ಕಟ್ಟೀಮನಿ ಅವರ “ಮಾಡಿ ಮಡಿದವರು” ಕೃತಿಯ ಕುರಿತಾಗಿ ಮಾಲತಿ ಪಟ್ಟಣಶೆಟ್ಟಿಯವರ ‘ಸಾರ ಸಂಗ್ರಹವೂ ಪ್ರಕಟಗೊಂಡಿದೆ.
ಸಾಹಿತ್ಯಿಕ ಸಾಂಸ್ಕೃತಿಕ ಕ್ರಿಯಾಶೀಲತೆ
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ಚಿಂತನ, ಭಾಷಣ, ನಾಟಕ ರಚನೆ, ರೂಪಕ ರಚನೆ, ಪಾತ್ರ ನಿರ್ವಹಣೆ, ಚರ್ಚೆ, ಕಥಾವಾಚನ, ಮುಂತಾದ ಅನೇಕ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಸುಮಾರು 1970 ರಿಂದಲೇ ಭಾಗವಹಿಸುತ್ತಿದ್ದಾರೆ. ದೂರದರ್ಶನದಲ್ಲಿಯೂ ಸಹ ಇವರ ಸಂದರ್ಶನ, ಕಾವ್ಯ ವಾಚನ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಜರುಗಿವೆ.
ಬಹುಮುಖ ವ್ಯಕ್ತಿತ್ವ
ಮಾಲತಿ ಪಟ್ಟಣಶೆಟ್ಟಿಯವರು ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಾಧ್ಯಕ್ಷೆಯಾಗಿ, ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ಸದಸ್ಯರಾಗಿ, ಎಲ್. ಐ. ಸಿ. ಯ ಧಾರವಾಡ ಮಹಿಳಾ ಉದ್ಯೋಗಿಗಳ ದೌರ್ಜನ್ಯ ನಿಯಂತ್ರಕ ಸಮಿತಿಯ ಸದಸ್ಯರಾಗಿ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ, ಹೀಗೆ ವಿವಿಧ ರೀತಿಯ ಕಾರ್ಯನಿರ್ವಹಿಸುವುದರ ಜೊತೆಗೆ 2017 ರ ಅವಧಿಯಲ್ಲಿ ಕರ್ಣಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೂಡ ಕಾರ್ಯ ನಿರ್ವಹಿಸಿದರು. ಹಲವಾರು ವರ್ಷಗಳ ಕಾಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಕಟಣೆಗಳು ಸ್ಥಗಿತಗೊಂಡಿದ್ದ ಸಮಯದಲ್ಲಿ ಎಲ್ಲವನ್ನು ಅತಿ ಶೀಘ್ರದಲ್ಲಿ ಇತ್ಯರ್ಥಗೊಳಿಸುವ ವ್ಯವಸ್ಥೆಯನ್ನು ಮಾಲತಿ ಪಟ್ಟಣಶೆಟ್ಟಿಯವರು ತಮ್ಮ ಕಾರ್ಯಾಧ್ಯಕ್ಷತೆಯ ಅವಧಿಯಲ್ಲಿ ಮಾಡಿಸಿದರು.
ಪ್ರೊ ಮಾಲತಿ ಪಟ್ಟಣಶೆಟ್ಟಿಯವರ ಸಾಹಿತ್ಯ ಕೃಷಿಗೆ ಸಂದ ಪ್ರಶಸ್ತಿ ಬಹುಮಾನಗಳು
ಇವರಿಗೆ ಅನೇಕ ಸಾಹಿತ್ಯಿಕ ಪ್ರಶಸ್ತಿಗಳು
ಸಂದಿವೆ. ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ,
ಗೀತಾ ದೇಸಾಯಿ ಕಾವ್ಯ ಪ್ರಶಸ್ತಿ,
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ 2000 ದ ಇಸವಿಯ ಗೌರವ ಪ್ರಶಸ್ತಿ,
ಬೆಳಗಾವಿಯ ನಾಡೋಜ ಪತ್ರಿಕೆಯ ಕಾತ್ಯಾಯಿನಿ ಸಾಹಿತ್ಯ ಪ್ರಶಸ್ತಿ,
ಸರಸ್ವತಿ ಚಿಮ್ಮಲಗಿ ಪ್ರಶಸ್ತಿ,
ಡಿ.ಎಸ್. ಕರ್ಕಿ ಪ್ರಶಸ್ತಿ, ಹಾಗೂ ಅನೇಕ ಕಾವ್ಯ ಗೋಷ್ಠಿ ಅಧ್ಯಕ್ಷತೆಗಳು, ಅನೇಕ ಗೌರವಗಳು ಲಭಿಸಿವೆ.
ಪ್ರಶಸ್ತಿ ಹಾಗೂ ಸನ್ಮಾನಗಳಲ್ಲದೆ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೆಲವು ಕವಿತೆಗಳು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಕನ್ನಡ ಪಠ್ಯಗಳಲ್ಲಿ ಆಯ್ಕೆಯಾಗಿವೆ. ಮಹಾರಾಷ್ಟ್ರ ರಾಜ್ಯದ ಹನ್ನೆರಡನೆಯ ತರಗತಿಯ ಕನ್ನಡ ಪಠ್ಯಗಳಲ್ಲಿಯೂ ಕೂಡ ಇವರ ಕವಿತೆ ಆಯ್ಕೆಯಾಗಿದೆ ಎಂಬುದು ಹೆಮ್ಮೆಯ ವಿಷಯ.
ಒಬ್ಬ ಧೀಮಂತ ದಿಟ್ಟ ಮಹಿಳೆಯಾದ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ಮಹಿಳಾ ಸಾಹಿತ್ಯದ ಮುಂಚೂಣಿಯ ಲೇಖಕಿಯಾಗಿ ನಾವೆಲ್ಲ ಹೆಮ್ಮೆ ಪಡುವಂಥ ಸಾಧನೆಯನ್ನು ಮಾಡಿದ್ದಾರೆ. ಅವರು ಮಹಿಳೆಯರು ತಮ್ಮ ಅಸಹಾಯಕತೆ, ನಿರಾಸೆಗೆ ಕಣ್ಣೀರು ಹಾಕದೆ ಅದನ್ನು ಸಾಹಿತ್ಯ ರೂಪಕ್ಕೆ ಮಾರ್ಪಡಿಸಿದರೆ ಅದೇ ಒಂದು ಸಾಧನೆಯಾಗಬಲ್ಲದು ಎಂದು ಹೇಳುತ್ತಾರೆ.
ಅವರು ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಏರ್ಪಡಿಸಿದ “ಮಕ್ಕಳ ಕಥಾ ಕಮ್ಮಟ” ಶಿಬಿರದ ಇಂದಿಗೂ ಅವಿಸ್ಮರಣೀಯ ಅಭಿನಂದನಾ ಪತ್ರವನ್ನು
ಇಂಥ ಹೆಸರಾಂತ ಶ್ರೇಷ್ಠ ಸಾಹಿತಿಯ ನಮ್ಮವರು ಎನ್ನುವ ಹೆಮ್ಮೆಯ ಮಾತು ನಮ್ಮದು. ಹಿರಿ ಕಿರಿಯರೆನ್ನದೆ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಪ್ರೋತ್ಸಾಹಿಸುವ ಗುಣ ನಿಜಕ್ಕೂ ತುಂಬಾ ದೊಡ್ಡದು. ಇವರಿಗೆ ಈಗ 84 ವರ್ಷ ಆದರೂ ಪಾದರಸದಂತೆ ಓಡಾಡುವ ಸೃಜನಶೀಲ ಸಾಹಿತಿ ಜನಾನುರಾಗಿ ಕವಯಿತ್ರಿ ನೂರ್ಕಾಲು ಬಾಳಲಿ ಎಂದು ಹಾರೈಸುತ್ತೇನೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 9552002338

