ಅಕ್ಷರ ಕಿಚ್ಚಿನ ಹುಚ್ಚರು
ಬರಹಗಾರರೆಲ್ಲಾ
ಬಲು ಹುಚ್ಚರು!
ಯಾಕೆಂದರೆ…
ಹರಿಯುವ ನದಿ,
ಅಲೆವ ಕಡಲಿನ
ಆಳವ ಬರಿದು ಮಾಡಿ
ತಮ್ಮ ಭಾವದ ಮಳೆಯಲಿ
ಮತ್ತೆ ತುಂಬಿಸಿಬಿಡುತ್ತಾರೆ.
ಭುವಿ, ಭಾನು, ಭಾಸ್ಕರನನ್ನೂ
ತಮ್ಮ ಕಲ್ಪನೆಯ ಬಂಜರು ಭೂಮಿಗೆ ತಂದು,
ಮತ್ತೆ ಅಕ್ಷರಗಳ ಒರತೆಯಲಿ
ಜೀವ ಚೇತರಿಕೆ ನೀಡುತ್ತಾರೆ.
ಹೆಣ್ಣು, ಕಣ್ಣು, ಹಣ್ಣು, ಮಣ್ಣನ್ನೆಲ್ಲಾ
ಸವಿದು ಸಂಭ್ರಮಿಸಿ,
ಶಬ್ದಗಳಲಿ ಬರಿದು ಮಾಡಿ
ಮತ್ತೆ ಹೊಸ ಅಕ್ಷರಗಳಿಗಾಗಿ
ಹಗಲಿರುಳು ಅರಸುತ್ತಾರೆ.
ಸಿಟ್ಟು, ಸೆಡವು, ಕೋಪ, ತಾಪಗಳ
ಮೌನದ ಕುಂಚದಲಿ ಅದ್ದಿ,
ಭಾವಗಳ ಬಣ್ಣ ಬಳಿದು
ಓದುಗರ ಮನದಂಗಳದಿ
ಅಚ್ಚಳಿಯದೆ ಉಳಿದು ಬಿಡುತ್ತಾರೆ.
ಬಾಲ್ಯದ ನಗು, ಯೌವ್ವನದ ಸೊಬಗು
ಮುಪ್ಪಿನ ನೆಮ್ಮದಿಯನು ಅಕ್ಷರವಾಗಿಸಿ,
ದೇಹದ ಬೆವರಿಗೆ ಪದಗಳ
ಹೊಗೆ ವಾಸನೆ ಬೆರೆಸಿಬಿಡುತ್ತಾರೆ.
ಬರಹಗಾರರೆಲ್ಲಾ
ದೊಡ್ಡ ಹುಚ್ಚರು!
ಬರಹದಲಿ ತಮ್ಮನ್ನು ತಾವು ಕಳೆದುಕೊಳ್ಳುತ್ತಾ
ಲೋಕದ ಮೈಮರೆವಿಗೆ
ಅಕ್ಷರದ ಕಿಚ್ಚು ಹಚ್ಚಿಬಿಡುತ್ತಾರೆ.
••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಬರಹಗಾರ ಎಂದರೆ ಬರೀ ಪದಗಳನ್ನು ಜೋಡಿಸುವವನಲ್ಲ; ಪ್ರಕೃತಿಯ ಸೊಬಗನ್ನು ಅಕ್ಷರಗಳಲ್ಲಿ ಬರಿದು ಮಾಡಿ, ಮತ್ತೆ ತನ್ನ ಭಾವನೆಗಳ ಮೂಲಕ ಅದಕ್ಕೆ ಮರುಜೀವ ನೀಡುವವನೆ ಮಾಂತ್ರಿಕ. ಅಕ್ಷರಗಳ ಬೆನ್ನತ್ತಿ ಹೋಗುವ ಈ ‘ಹುಚ್ಚು’ ಮನಸ್ಸಿನ ಹಂಬಲವೇ ಬರಹ”
”ಲೋಕದ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಂಡು, ಶಬ್ದಗಳಲಿ ಕಡೆದು, ಮನದಂಗಳದಲ್ಲಿ ಅಕ್ಷರದ ಕಿಚ್ಚು ಹಚ್ಚುವವನೆ ಬರಹಗಾರ.
”ಶಬ್ದಗಳ ಹುಡುಕಾಟ, ಭಾವಗಳ ಬಣ್ಣಗಾರಿಕೆ ಮತ್ತು ಅಕ್ಷರಗಳ ಅಮಲು! ಬರಹಗಾರರ ಈ ವಿಶಿಷ್ಟ ಲೋಕದ ಬಗ್ಗೆ
ಹಾಗೆ ಸುಮ್ಮನೆ

