ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ ಹಬ್ಬದ ಮಾರನೇ ದಿನ ಕೆ.ಆರ್.ನಗರ ತಾಲ್ಲೂಕು ಚುಂಚನಕಟ್ಟೆಯಲ್ಲಿ ನಡೆಯುವ ಶ್ರೀ ಕೋದಂಡರಾಮ ಬ್ರಹ್ಮ ರಥೋತ್ಸವವು ಬಹಳ ಪ್ರಸಿದ್ಧವಾಗಿದೆ. ನಾನು ಚುಂಚನಕಟ್ಟೆಗೆ ಹೋಗಿರುವೆನಾದರೂ ರಥೋತ್ಸವಕ್ಕೆ ಯಾವತ್ತೂ ಹೋಗಿರಲಿಲ್ಲ. ಈ ವರ್ಷ ಜಾತ್ರೆಗೆ ಹೋಗಿ ಬರೋಣವೆಂದು ಹೋಗಿದ್ದೆವು.
ಐದು ಅಂಕಣದ ಬ್ರಹ್ಮರಥವು ದೇವಸ್ಥಾನದ ಮುಂಭಾಗ ಸಿದ್ಧವಾಗಿ ನಿಂತಿತು. ಅತ್ತ ತೇರು ಹರಿದಂತೆ ಇತ್ತ ನಾವು ದೇವರ ದರ್ಶನಕ್ಕಾಗಿ ಕ್ಯೂನಲ್ಲಿ ಮುಂದೆ ಸಾಗಿದೆವು. ದೇವರಿಗೆ ಕೈಮುಗಿದು ಹೊರ ಬರುವಷ್ಟರಲ್ಲಿ ದೇವಸ್ಥಾನ ಒಂದು ಸುತ್ತು ತಿರುಗುವ ರಥವು ಅರ್ಧ ಸುತ್ತು ಹರಿದು ಬರುತ್ತಿತ್ತು. ಸನಿಹದಲ್ಲೇ ನಿಂತು ರಥ ಹರಿಯುವುದನ್ನು ಕಣ್ತುಂಬಿಕೊಂಡೆವು. ಮಳೆಗಾಲದಲ್ಲಿ ಇಲ್ಲಿ ಕಾವೇರಿ ನದಿ ೬೫ ಅಡಿ ಎತ್ತರದಿಂದ ಬಂಡೆಗಳ ಮೇಲಿಂದ ಬೋರ್ಗರೆಯುತ್ತಾ ದುಮ್ಮಿಕ್ಕಿ ಜಲಪಾತ ಸೃಷ್ಟಿಸುವ ದೃಶ್ಯ ರಮಣೀಯವಾದುದು.
ಇದು ಕಾವೇರಿ ನದಿಯ ಮೊದಲ ಜಲಪಾತವೂ ಹೌದು. ಈ ಜಲಪಾತದ ಬಂಡೆಗಳು ಒಡೆದು ಪದರ ಪದರವಾಗಿದ್ದು ಲಕ್ಷ್ಮಣನು ತೃಣಮುನಿಗಳ ಕೋರಿಕೆಯಂತೆ ಬಾಣದಿಂದ ಬಂಡೆಯನ್ನು ಬೇಧಿಸಿದ ಬಂಡೆಯ ಮೇಲಿನ ಪಾದದ ಗುರುತು ತೃಣಬಿಂದು ಮಹಾಮುನಿಗಳ ಪಾದವೆಂದು ಹೇಳುವರು. ಸೀತಾದೇವಿ ಸ್ನಾನ ಮಾಡಿದ ಸ್ಥಳವೆಂಬ ನಂಬಿಕೆಯಲ್ಲಿ ಹಳದಿ ಬಣ್ಣದ ನೀರು ಬೀಳುವ ಜಾಗವನ್ನು ಸೀತೆಮಡು ಎಂದು ಜಲಪಾತದ ಶಬ್ಧವನ್ನು ಸೀತೆಮೊರೆವು ಎನ್ನುವರು. ಒಂದು ವಿಶೇಷವೆಂದರೆ ಜಲಪಾತ ದುಮ್ಮಿಕ್ಕುವ ರಭಸದ ಸದ್ದು ಸುತ್ತಲ ಹಳ್ಳಿಗಳಿಗೆ ಕೇಳುತ್ತದೆಯಾದರೂ ಶ್ರೀ ಕೋದಂಡರಾಮ ದೇವಾಲಯದ ಗರ್ಭಗುಡಿಯ ಒಳಗೆ ಕೇಳುವುದಿಲ್ಲ. ಸ್ಥಳ ಪುರಾಣದಂತೆ ರಾಮ ಸೀತೆ ಲಕ್ಷ್ಮಣರು ಇಲ್ಲಿ ಕೆಲವು ಕಾಲ ತಂಗಿದ್ದು ಆ ವೇಳೆ ಚುಂಚ ಚುಂಚಿ ಎಂಬ ರಾಕ್ಷಸರು ಈ ಪ್ರದೇಶದ ಜನರಿಗೆ ನೀಡುತ್ತಿದ್ದ ಹಿಂಸೆಯಿಂದ ಮುಕ್ತಿ ನೀಡಲು ರಾಮನು ಈ ರಾಕ್ಷಸರ ವಧೆ ಮಾಡಿ ಆ ರಾಕ್ಷಸರು ನಮ್ಮ ಹೆಸರು ಇಲ್ಲಿಗೆ ಕೊನೆಯಾಗುವುದು ಎಂದು ದುಃಖಿಸಲು ರಾಮನು ಈ ಪ್ರದೇಶಕ್ಕೆ ಚುಂಚಾರಣ್ಯ ಎಂದು ನಾಮಕರಣ ಮಾಡಿದನೆಂದು ಅದು ಕ್ರಮೇಣ ಚುಂಚನಕಟ್ಟೆ ಆಯಿತ್ತೆಂದು ಇಲ್ಲಿ ವಾಸ್ತವ್ಯ ಮಾಡಿ ಸೀತೆ ವಿಶ್ರಾಂತಿ ಪಡೆಯುವ ವೇಳೆ ಆಕೆಗೆ ತೊಂದರೆ ಆಗಬಾರದೆಂದು ರಾಮನು ಕಾವೇರಿ ಹರಿಯುವ ಹಾದಿಗೆ ಅಡ್ಡಲಾಗಿ ಬಾಣ ಬಿಟ್ಟು ನೀರು ಹರಿಯುವ ಸದ್ದು ನನ್ನ ಸೀತೆ ಇರುವಲ್ಲಿಗೆ ಕೇಳಕೂಡದು ಎಂದು ಆಜ್ಞಾಪಿಸಿದನೆಂದು ಅಂತೆಯೇ ಕಾವೇರಿ ಹರಿಯುವ ಶಬ್ಧ ಕೋದಂಡರಾಮ ದೇವಾಲಯದ ಒಳಭಾಗದಲ್ಲಿ ಕೇಳುವುದಿಲ್ಲ ಎಂದೂ ಹೇಳುತ್ತಾರೆ.
ಕಾವೇರಿ ನದಿ ದಂಡೆಯ ಚುಂಚನಕಟ್ಟೆಯಲ್ಲಿ ತೃಣ ಮುನಿಗಳು ತಪಸ್ಸನ್ನಾಚರಿಸಿದರೆಂದು ರಾವಣನ ವಧೆ ನಂತರ ರಾಮನು ಅಯೋಧ್ಯೆಗೆ ಹಿಂತಿರುಗುವಾಗ ಇಲ್ಲಿರುವ ತೃಣಬಿಂದು ಮುನಿಗಳ ಆಶ್ರಮಕ್ಕೆ ಭೇಟಿ ಕೊಟ್ಟಿದ್ದಾಗಿ ಪ್ರತೀತಿ ಇದೆ. ಚುಂಚ ಮತ್ತು ಚುಂಚಿ ಎಂಬ ಬೇಡ ದಂಪತಿಗಳು ಮಹಾಕ್ರೂರಿಗಳಾಗಿ ಸಾಧು ಸಜ್ಜನರಿಗೆ ತೊಂದರೆ ಕೊಡುತ್ತಿದ್ದ ಕಾಲಕ್ಕೆ ತೃಣಬಿಂದು ಮುನಿಗಳಿಂದಾಗಿ ಕಾಡುಮೃಗಗಳಿಗೆ ತಾವು ಬಿಟ್ಟ ಬಾಣಗಳು ಫಲಿಸದೆ ಇರಲು ಈ ಮುನಿಗಳ ತಪಶಕ್ತಿ ಕಾರಣ ಎಂದು ತಿಳಿದು ಬೇಡ ದಂಪತಿಗಳ ಮನ ಪರಿವರ್ತನೆಯಾಗಿ ಮುನಿಗಳಿಗೆ ಶರಣಾಗಿ ತಮ್ಮ ಪೂರ್ವಜನ್ಮ ವೃತ್ತಾಂತವನ್ನು ಮುನಿಗಳಿಂದ ತಿಳಿದು ಮುನಿಗಳ ಹಿತವಚನದಂತೆ ತಮ್ಮ ಶಾಪ ವಿಮೋಚನೆಗಾಗಿ ಆಶ್ರಮವಾಸಿಗಳಾದರೆಂದು ಈಗ ಶ್ರೀರಾಮ ದೇವಾಲಯದ ಮುಂದೆ ಕಾವಲುಗಾರರಾಗಿ ಇರುವ ವಿಗ್ರಹಗಳನ್ನು ಚುಂಚ ಚುಂಚಿಯರ ವಿಗ್ರಹಗಳೆಂದು, ಇವರಿಂದಾಗಿಯೇ ಈ ಕ್ಷೇತ್ರಕ್ಕೆ ಚುಂಚನಕಟ್ಟೆ ಎಂಬ ಹೆಸರು ಬಂದಿದೆ ಎಂಬ ಕಥೆಯೂ ಇದೆ.
ಇಲ್ಲಿನ ಶ್ರೀ ಕೋದಂಡರಾಮ ದೇವಾಲಯವು ಬಹಳ ಸುಂದರವಾದ ರಚನೆಯನ್ನು ಕೂಡಿ ಪ್ರಸಿದ್ದಿ ಪಡೆದಿದೆ. ವಿಶೇಷವೆಂದರೆ ಗರ್ಭಗುಡಿಯಲ್ಲಿ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ. ಶ್ರೀರಾಮನ ಬಲಗಡೆ ಸೀತೆ ಎಡಗಡೆ ಲಕ್ಷ್ಮಣ ವಿಗ್ರಹವಿದ್ದು ಶ್ರೀಮನ್ನಾರಾಣನ ದಶಾವತಾರದ ಚಿತ್ರಗಳನ್ನು ದೇವಾಲಯದ ಹೊರಾಂಗಣ ಗೋಡೆಯಲ್ಲಿ ಚಿತ್ರಿಸಲಾಗಿದೆ. ದೇವಾಲಯದ ಮಹಾದ್ವಾರದ ರಾಜಗೋಪುರವು ದೇಗುಲದ ಸಹಜ ಸೌಂದರ್ಯ ಹೆಚ್ಚಿಸಿದೆ. ಇಲ್ಲಿ ರಥೋತ್ಸವ ಅಂಗವಾಗಿ ಸುಮಾರು ೧೫ ದಿನಗಳ ಕಾಲ ನಡೆಯುತ್ತಿದ್ದ ದನಗಳ ಜಾತ್ರೆ ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿತ್ತು. ಒಳ್ಳೆಯ ಎತ್ತುಗಳ ಜೋಡಿಗೆ ಚುಂಚನಕಟ್ಟೆ ಜೋಡಿ ಎಂದು ಕರೆಯುವರು. ಈಗ ಆ ವೈಭವ ಕಡಿಮೆಯಾಗಿದೆ. ಇಲ್ಲಿ ಬಸ್ ನಿಲ್ದಾಣ ಕೆಳಗೆ ವೃತ್ತದಲ್ಲಿ ಇರುವ ರಾಸುವಿನ ಪ್ರತಿಮೆ ಆಕರ್ಷಣೀಯವಾಗಿದೆ. ಇಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆಯನ್ನು ಕಟ್ಟಲಾಗಿದ್ದು ಇದನ್ನು ಹನುಮಂತಕಟ್ಟೆ ಎನ್ನುತ್ತಾರೆ.
ಈ ಕಟ್ಟೆಯನ್ನು ಮೈಸೂರು ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಕ್ರಿ.ಶ.೧೬೭೨ರಲ್ಲಿ ನಾಲೆ ನಿರ್ಮಿಸಲಾಗಿದೆ. ಮುಂದೆ ಇದು ಶಿಥಿಲವಾಗಿ ದಿವಾನ್ ಪೂರ್ಣಯ್ಯನವರು ದುರಸ್ತಿ ಮಾಡಿಸಿದ್ದಾರೆ. ಕಟ್ಟೆಯ ಹಿನ್ನೀರಿನಿಂದ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಲ್ಲಿ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖನೆ ಇದೆ. ಇಲ್ಲಿಯ ಶ್ರೀ ಕೋದಂಡರಾಮ ದೇವಸ್ಥಾನದ ಎದುರು ಎತ್ತರವಾದ ಭವ್ಯ ಹನುಮಂತನ ವಿಗ್ರಹವನ್ನು ಕಡೆದು ನಿಲ್ಲಿಸಿದ್ದು ದೇವಸ್ಥಾನಕ್ಕೆ ವಿಶೇಷವಾದ ಮೆರುಗು ತಂದಿದೆ. ಇಲ್ಲಿ ಸುತ್ತಲ ಪರಿಸರ ವೀಕ್ಷಿಸಲು ವೀಕ್ಷಣ ಗೋಪುರವಿದೆ.
ತೇರು ಹರಿಯುವ ವೇಳೆಗೆ ಜನಜಾತ್ರೆಯೇ ಸೇರಿತ್ತು. ಪುರಿ ಖಾರ ವಿಶೇಷವಾಗಿ ಖರ್ಜೂರದ ವ್ಯಾಪಾರ ಜೋರಿತ್ತು. ಕಬ್ಬಿನ ಹಾಲು ಕುಡಿದ ಜನ ಪ್ಲಾಸ್ಟಿಕ್ ಲೋಟ ರಸ್ತೆಯಲ್ಲಿ ಎಸೆದಿದ್ದರು. ನಾವು ಹೋದ ಮಾರ್ಗದಲ್ಲಿಯೇ ಹಾಸನಕ್ಕೆ ವಾಪಸ್ಸು ಬಂದಾಗ ಸಂಜೆ ಐದಾಗಿತ್ತು.

ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

