ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಕಮ್ಮಟ
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಸ್ಥಾಪಿತವಾಗಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕಳೆದ ಎರಡು ದಶಕಗಳಿಂದ ಅನುವಾದ ಪ್ರಕ್ರಿಯೆಯ ಮೂಲಕ ವಿವಿಧ ಭಾಷಿಕ ಹಾಗೂ ಸಾಂಸ್ಕೃತಿಕ ಸಮುದಾಯಗಳ ಮಧ್ಯ ಸೌಹಾರ್ದತೆಯ ಬೆಸುಗೆ ಹಾಕುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ೧೨, ೧೩ ಜನವರಿ ೨೦೨೬ ರಂದು ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಎರಡು ದಿವಸಗಳ ಭಾಷಾಂತರ ಕಮ್ಮಟ ತುಂಬಾ ಅರ್ಥಪೂರ್ಣವಾದದ್ದಾಗಿದೆ.
ಹಿಂದಿಯ ಶ್ರೇಷ್ಠ ಕತೆಗಾರರ ಇಪ್ಪತ್ತೆರಡು ಕಥೆಗಳನ್ನು ಅನುವಾದಿಸಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಪರಿಷ್ಕರಣಗೊಳಿಸುತ್ತಿರುವುದು ಶ್ಲಾಘನೀಯವಾದುದು. ಕಥೆಗಳು ಮುಳಗಿಹೋದವರ ಬದುಕನ್ನು ಅಂತಃಕರಣದಿಂದ ದಾಖಲಿಸುವ ಕೆಲಸವನ್ನು ಮಾಡುತ್ತವೆ. ಕುವೆಂಪು ಅವರ ಒಟ್ಟು ಬರಹದ ಆಶಯವೂ ಅದೇ ಆಗಿದೆ. ಇಂಥದ್ದೇ ಆಶಯದ ಹಿಂದಿ ಕತೆಗಳು ಇಲ್ಲಿ ಅನುವಾದಗೊಂಡಿರುವುದು ನಿಜವಾಗಿಯೂ ಸ್ವಾಗತಾರ್ಹವಾಗಿದೆ. ಇಂತಹ ಕಮ್ಮಟಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಆಯೋಜಿಸುವ ಯೋಜನೆ ಇದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಡಾ.ಚನ್ನಪ್ಪ ಕಟ್ಟಿ ಅವರು ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಅನುವಾದ ಎರಡು ಸಂಸ್ಕೃತಿಗಳನ್ನು ಬೆಸೆಯುವ ಕೆಲಸವನ್ನು ಮಾಡುತ್ತದೆ. ಓಂದು ಭಾಷೆಯ ಸಾಹಿತ್ಯವು ಅನ್ಯ ಭಾಷೆಯ ಸಾಹಿತ್ಯದಲ್ಲಿ ರೂಪುಗೊಂಡಾಗ ವಿಷಯದೊಂದಿಗೆ ಸಂಸ್ಕೃತಿಯೂ ಕೂಡ ಮತ್ತೊಂದು ಭಾಷೆಗೆ ವಿಲೀನಗೊಳ್ಳುತ್ತದೆ. ಎರಡು ಸಾಹಿತ್ಯಗಳ ಪ್ರಕೃತಿಯನ್ನು ಅರ್ಥ ಮಾಡಿಕೊಂಡು ಅದರ ಮೂಲವನ್ನು ಆತ್ಮಸತಗೊಳಿಸಿಕೊಂಡು ಬೇರೊಂದು ಸಾಹಿತ್ಯವನ್ನು ಕೊಡುವಂತಹ ಕಮ್ಮಟ ಇದಾಗಿದೆ ಎಂದು ಪ್ರಾಸ್ತಾವಿಕ ನುಡಿಯೊಂದಿಗೆ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಷೆಕಿರಾ ಖಾನಂ ರವರು ಅಭಿಪ್ರಾಯ ಪಟ್ಟರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವೀಕ ವಿಭಾಗದ ಡೀನರಾದ ಡಾ. ಗೋಪಕುಮಾರ್ ಎ. ವಿ ರವರು ಹಿಂದಿ ವಿಭಾಗದ ಕಾರ್ಯವೈಖರಿಯನ್ನು ಶ್ಲಾಘಿಸುತ್ತ, ಅನುವಾದ ಕಾರ್ಯವು ಹಲವು ಸಂದರ್ಭದಲ್ಲಿ ವಿಚಾರಗಳ ಪುನರ್ ಮಂಡನೆ ಮಾಡುವ ಸಾಧನ ಮತ್ತು ಲಿಪ್ಯಾಂತರದ ರೂಪವಾಗಿದೆ ಎಂದು ಹೇಳುತ್ತ ಇದು ಅನುವಾದದ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಪಿ. ಡಿ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನು ಸ್ವಾಗತಿಸಿ ಅನುವಾದದ ಅವಶ್ಯಕತೆ ಮತ್ತು ಪ್ರಯೊಜನವನ್ನು ತಿಳಿಸುತ್ತ ಈಗಿನ ಸಂದರ್ಭದಲ್ಲಿ ಅನುವಾದ ಕೃಷಿ ಎಂಬುದು ವೃತ್ತಿಯಾಗಿ ಪರಿಣಮಿಸಿದೆ ಎಂದು ಮಾತನಾಡಿದರು. ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣಾ ಡಿ. ಲಮಾಣಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಹಿಂದಿ ಪ್ರಾಧ್ಯಪಕರಾದ ಡಾ. ವಿನೋದ ಬಾಬುರಾವ್ ಮೇಘಶಾಮ ರವರು ಕರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ದನ್ಯವಾದ ಅರ್ಪಿಸಿದರು. ಡಾ. ಎಮ್. ನಯಾಜ ಪಾಷಾ, ಡಾ. ಮುಸ್ಲಿಂ ಅಬ್ದುಲ ರಜಾಕ ಮತ್ತು ಡಾ. ಗಣಶೆಟವಾರ ಸಾಯಿನಾಥ ನಾಗನಾಥ ರವರು ಉಪಸ್ಥಿತರಿದ್ದರು.

