ಲೇಖನ : ಮಹಿಳಾ ಸೇನೆ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮ

Must Read

ಬೆಳವಲ ಮತ್ತು ಮಲೆನಾಡಿನ ಸೆರಗಿಗೆ ಹೊಂದಿಕೊಂಡ ಐತಿಹಾಸಿಕ ಇವತ್ತಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮ. ಶೂರರ ವೀರರ ಯೋಧರ ತವರೂರು. ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ.

ಬೆಳವಡಿ ಮಲ್ಲಮ್ಮ
ಜನನ
ಆಗಸ್ಟ್ 18, 1624
ಮರಣ. 1678

ತನ್ನ ಬದುಕಿನ 53 ವರ್ಷಗಳಲ್ಲಿ ಮಹಿಳೆಯರಲ್ಲಿ ಸ್ವಾವಲಂಬನೆ ಮನೋಧೈರ್ಯ ಮತ್ತು ಪರಾಕ್ರಮದ ಯುದ್ಧ ತರಬೇತಿ ನೀಡಿದ ವಿಶ್ವದ ಮೊಟ್ಟ ಮೊದಲ ಮಹಾರಾಣಿ ದಂಡನಾಯಕಿ ಎಂದು ಹೆಸರುವಾಸಿಯಾದಳು. ಬೆಳವಡಿ ಪ್ರಾಂತ್ಯದ ಭೂಪಟ ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮ.

ಬೆಳವಡಿ ಮಲ್ಲಮ್ಮನ ಬಾಲ್ಯ ಮತ್ತು ಜೀವನ ಚರಿತ್ರೆ

ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ನಡುವೆ ನಡೆದ ಯುದ್ಧದ ಐತಿಹಾಸಿಕ ದಾಖಲೆಗಳ ಪಟ್ಟಿ.

1. ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠಿ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಈಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರನ್ನು ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.

2. ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ.

3 ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪುಸ್ತಕದಲ್ಲಿ ಮಲ್ಲಮ್ಮಳನ್ನು ‘ಸಾವಿತ್ರಿ ಬಾಯಿ’ ಎಂದು ಕರೆದಿದ್ದಾರೆ. ಮಲ್ಲಮ್ಮ ಮತ್ತು ಶಿವಾಜಿಯ ನಡುವಿನ ಯುದ್ದ 27 ದಿನಗಳ ಕಾಲ ನಡೆದಿತ್ತು ಎಂದು ಬರೆದಿದ್ದಾರೆ

4.ಶಿವಾಜಿ ಮತ್ತು ಮಲ್ಲಮ್ಮ ನಡುವೆ ನಡೆದ ಯುದ್ದದಲ್ಲಿ ಶಿವಾಜಿ ಮಹಾರಾಜರು ಭಾಗವಹಿಸಲಿರಲಿಲ್ಲ.

ಕೆಲವರು ಶಿವಾಜಿ ಬೆಳವಡಿ ಮಲ್ಲಮ್ಮನ ಎದುರು ಸೋತು ಕ್ಷಮೆ ಕೇಳಿದರು ಎಂದು ಸುಳ್ಳು ಇತಿಹಾಸ ಪ್ರಚಾರ ಮಾಡುತ್ತಾರೆ. ಕ್ಷಮೆ ಕೇಳಿದ್ದು ನಿಜ ಆದರೆ ಬೇರೆ ಕಾರಣಕ್ಕೆ. ಶಿವಾಜಿ ಸೇನೆಯ ಕಮಾಂಡರ್ ಹಾಗೂ ಶಿವಾಜಿ ಬಗ್ಗೆ ಗೌರವ ಹೊಂದಿದ್ದ ಮಲ್ಲಮ್ಮನ ಪತಿ ಈಶಪ್ರಭು ನಡುವೆ ದಾಳಿಗೆ ಕಾರಣದ ಬಗ್ಗೆ ಸರಿಯಾದ ದಾಖಲೆ ಇಲ್ಲ. ಕದನದಲ್ಲಿ ಈಶಪ್ರಭು ಮೃತಪಡುತ್ತಾರೆ. ನಂತರ ವೀರಾವೇಶದಿಂದ ಹೋರಾಡಿದ ಮಲ್ಲಮ್ಮ ಇಡೀ ದಕ್ಷಿಣ ಭಾರತ ಗೆದ್ದಿದ್ದ ಶಿವಾಜಿ ಸೇನೆಯನ್ನು ಬೆಚ್ಚಿ ಬೀಳಿಸಿ ಹಿಮ್ಮೆಟ್ಟಿಸುತ್ತಾರೆ. ಆದರೆ 27 ದಿನಗಳ ನಂತರ ಕಮಾಂಡರ್ ಮಲ್ಲಮ್ಮನನ್ನು ಸೆರೆ ಹಿಡಿದು ಶಿವಾಜಿ ಮುಂದೆ ಹಾಜರುಪಡಿಸುತ್ತಾನೆ.

ಮಲ್ಲಮ್ಮನ ಪತಿಯ ಸಾವಿಗೆ ಹಾಗೂ ಕಮಾಂಡರ್ ಅಸಭ್ಯ ವರ್ತನೆ ಬಗ್ಗೆ ಶಿವಾಜಿ ಕ್ಷಮೆ ಕೇಳುತ್ತಾರೆ (ಕಮಾಂಡರ್ ಕಣ್ಣು ಕೀಳಿಸುತ್ತಾರೆ ಎಂದು ಉಲ್ಲೇಖ ಇದೆ). ಮಲ್ಲಮ್ಮನ ಶೌರ್ಯ ಮೆಚ್ಚಿ ಆಕೆಯನ್ನು ತಂಗಿ ಎಂದು ಸ್ವೀಕರಿಸಿ ಸನ್ಮಾನ ಮಾಡಿ ಆಕೆಯ ಕೋಟೆ ವಾಪಸ್ ಕೊಟ್ಟು ಹಾನಿಗೆ ಪರಿಹಾರವನ್ನೂ ನೀಡುತ್ತಾರೆ. ಶಿವಾಜಿ ಮಹಾರಾಜರು ಮಲ್ಲಮ್ಮನ ಮಗುವಿಗೆ ಹಾಲು ಕುಡಿಸುವ ಶಿಲ್ಪ ಹಾಗೂ ಮಲ್ಲಮ್ಮ ಶಿವಾಜಿ ಮಹಾರಾಜರನ್ನು ಹೊಗಳಿ ಬರೆಸಿದ ವೀರಗಲ್ಲು ಯಾದವಾಡ ಎಂಬಲ್ಲಿ ಇಂದಿಗೂ ಇದೆ.

5. ಮರಾಠಿ ಇತಿಹಾಸಕಾರರಲ್ಲಿ ಅನೇಕ ಗೊಂದಲಗಳು ಇರುವ ಬಗ್ಗೆ ಪುಣೆ ವಿಶ್ವವಿದ್ಯಾಲಯದವರು ಸಾಬೀತು ಮಾಡಿದ್ದಾರೆ. ಅವಳು ಶತ್ರು ಪಡೆಗಳ ಜತೆ ಕುದುರೆ ಮೇಲೆ ಸೀರೆಯಲ್ಲಿ ವೀರಗಚ್ಚೆ ಹಾಕಿ ಹೋರಾಡಿದಳು.

6 ಬೆಳವಡಿಯ ಮಲ್ಲಮ್ಮನ ಆಯುಧಗಳು : ಬಿಲ್ಲು ಬಾಣ, ಕಾವಲಿ ಇವರ ಸೈನ್ಯದ ಆಯುಧಗಳಾಗಿದ್ದವು

ವಿದ್ವಾಂಸರಾದ ಶೇಷೊ ಶ್ರೀನಿವಾಸ್ ಮುತಾಲಿಕ್ ಅವರು ಕ್ರಿ. ಶ. 1704-05 ರಲ್ಲಿ ಮಧುಲಿಂಗ ನಾಯಕರ ಅರಮನೆ ಜೀವನವನ್ನು ಮರಾಠಿ ಭಾಷೆಯಲ್ಲಿ ದಾಖಲಿಸಿದ್ದಾರೆ.

*ಇತಿಹಾಸದ ಪುಟ ಸೇರದ ಮಲ್ಲಮ್ಮನ ಪರಾಕ್ರಮ*

ನಮ್ಮ ಕನ್ನಡ ನಾಡಿನಲ್ಲಿ ಜನಿಸಿ, ನಾಡಿನ ಕೀರ್ತಿಪತಾಕೆಯನ್ನು ದೇಶಾದ್ಯಂತ ಪಸರಿಸಿದ ವೀರ ಮಾತೆಯರಲ್ಲಿ ಸಾವಿತ್ರಿ ಭಾಯಿ ಅಥವಾ ಬೆಳವಡಿ ಮಲ್ಲಮ್ಮ ಪ್ರಮುಖರು. ಇವರು ಸೋದೆಯ ಮಹಾರಾಜ ಮಧುಲಿಂಗ ನಾಯಕರ ಸುಪುತ್ರಿ.ಐದನೇ ವಯಸ್ಸಿನಲ್ಲಿ ಮಲ್ಲಮ್ಮನಿಗೆ ವಯಸ್ಸಿಗೆ ಮೀರಿದ ಧೈರ್ಯ, ಕ್ಷಾತ್ರ ತೇಜಸ್ಸು ಮುಖದಲ್ಲಿ ರಾರಾಜಿಸುತ್ತಿತ್ತಂತೆ. ತನ್ನ ಊರಿನ ಜನರ ಮೇಲೆ ಬಹಳ ವಾತ್ಸಲ್ಯ ಇಟ್ಟುಕೊಂಡಿದ್ದಳು. ಆ ಚಿಕ್ಕ ವಯಸ್ಸಿನಲ್ಲೇ ಎಲ್ಲ ನಾಯಕತ್ವದ ಗುಣಗಳು ಬೆಳೆಸಿಕೊಂಡಿದ್ದರು. ಇಂತಹ ಸಂಗತಿಗಳನ್ನು ತಿಳಿದ ತಂದೆ ಮಧುಲಿಂಗ ನಾಯಕ, ಮಲ್ಲಮ್ಮ ಮತ್ತು ಸಹೋದರ ಸದಾಶಿವ ನಾಯಕನನ್ನು ಹೆಚ್ಚಿನ ಕಲಿಕೆಗಾಗಿ ಗುರುಕುಲದಲ್ಲಿ ಇಡಲಾಯಿತು. ಮಲ್ಲಮ್ಮ ಸಂಸ್ಕೃತ, ಕನ್ನಡ, ಉರ್ದು, ಮರಾಠಿ ಭಾಷೆಗಳು ಸುಲಲಿತವಾಗಿ ಓದಲು, ಬರೆಯಲು, ಮಾತನಾಡಲು ಕಲಿತಿದ್ದರು. ಸಹೋದರ ಸದಾಶಿವ ನಾಯಕ ವಿದ್ವಾಂಸನಾಗಿ ಹೊರಬಂದ.

ಮಲ್ಲಮ್ಮನಿಗೆ ಸಾಹಿತ್ಯಾಸಕ್ತಿಯು ಅತಿಯಾಗಿತ್ತು. ರಾಜ್ಯದ ಪ್ರಮುಖ ವಿದ್ವಾಂಸರಿಂದ ಸಾಹಿತ್ಯ ಬಗೆಗಿನ ಉನ್ನತ ಜ್ಞಾನವನ್ನು ಪಡೆದು ಎಲ್ಲ ವಿಭಾಗಗಳಲ್ಲೂ ಪರಿಣಿತಿ ಪಡೆದಳು.ಮಲ್ಲಮ್ಮ ಹದಿನಾರು ವರ್ಷದಲ್ಲಿದ್ದಾಗ ಬೆಳಗಾವಿಯ ಬೈಲುಹೊಂಗಲದ ಈಶಪ್ರಭು ಮಹಾರಾಜರ ಜೊತೆ ಲಿಂಗಾಯತ ಮಠಾಧೀಶರ ಸಮ್ಮುಖದಲ್ಲಿ ಬಸವ ತತ್ವದ ಪ್ರಕಾರವಾಗಿ ಪಾಣಿ ಗ್ರಹಣವಾಯಿತು. ಮಹಾರಾಜ ಈಶಪ್ರಭುವೂ ಅಪ್ರತಿಮ ಪರಾಕ್ರಮಿಯಾಗಿದ್ದನು. ಇವರಿಗೆ ನಂತರದ ದಿನದಲ್ಲಿ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ನಾಗಭೂಷಣ ಎಂದು ನಾಮಕರಣ ಮಾಡಲಾಯಿತು.

ಕೆಲವು ನಾರಿಯರು ಕೇವಲ ರಾಜಭವನದಲ್ಲಿ ಮಾತ್ರ ಇರುತ್ತಾರೆ, ಆದರೆ ಮಲಮ್ಮ ಕುಳಿತುಕೊಂಡಿರುವ ರಾಣಿ ಅಗಿರಲಿಲ್ಲ. ಬೆಳವಾಡಿಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಹಿಳೆಯರ ಸೇನಾತಂಡವನ್ನು ಕಟ್ಟಿ, ಅದಕ್ಕೆ ಬೇಕಾದ ತರಬೇತಿ ಮತ್ತು ಸಹಕಾರವನ್ನು ನೀಡಿದರು ಮಲ್ಲಮ್ಮ. ಯಾವುದೇ ಸಮಯದಲ್ಲೂ ರಾಜ್ಯಭಾರ ಮಾಡಬೇಕೆನ್ನುವ ಪರಿಸ್ಥಿತಿ ಒದಗಿ ಬಂದರೆ ಎಲ್ಲದಕ್ಕೂ ತಯಾರಾಗಿದ್ದಳು. ಮಲ್ಲಮ್ಮ ಯುದ್ಧ ವಿದ್ಯೆಗಳಾದ ಕುಸ್ತಿ, ಧನುರ್ವಿದ್ಯೆ, ಕತ್ತಿ ವರಸೆ, ಕುದುರೆ ಸವಾರಿ ಇವುಗಳಲ್ಲಿ ಬಹಳ ಪ್ರವೀಣೆಯಾಗಿದ್ದಳು. ಇದರ ಜೊತೆ ಜೊತೆಗೆ ರಾಜನೀತಿ ಮತ್ತು ಅದರ ಸಾಧಕ ಬಾಧಕಗಳನ್ನು ಚೆನ್ನಾಗಿ ಅರಿತಿದ್ದರು.

ನಂತರದ ದಿನಗಳಲ್ಲಿ, ರಾಜ್ಯ ವಿಸ್ತರಿಸುವ ಕಾರ್ಯದಲ್ಲಿ ಮರಾಠರ ಚಕ್ರವರ್ತಿ ಶಿವಾಜಿ ಮಹಾರಾಜರು ತೊಡಗಿದ್ದರು. ದಕ್ಷಿಣ ಭಾರತದಿಂದ ಉತ್ತರದ ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಸಮಯವದು. ಆಗ ಅವರ ಸೈನ್ಯ ಬೆಳವಡಿಯ ಪಕ್ಕದಲ್ಲಿ ತಂಗಿತ್ತು. ಮರಾಠರು ರಾಜ್ಯ ವಿಸ್ತಾರದ ಬಯಕೆಯಿಂದ, ಬೆಳವಡಿಗೆ ಒತ್ತಡ ಹಾಕಲು ಪ್ರಯತ್ನಿಸಿದರು. ಮಲಮ್ಮಳ ಸ್ವಾಭಿಮಾನ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಮರಾಠರಿಗೆ ತಲೆ ಬಾಗದೆ ಯುದ್ಧಕ್ಕಾದರೂ ಸೈ ಆದರೆ ತಲೆ ತಗ್ಗಿಸಿ ಮಾತ್ರ ನಿಲ್ಲಲ್ಲ ಎಂದು ತೀರ್ಮಾನಿಸಿದರು.

ನಂತರ ಒಂದು ದಿನ ಮರಾಠಾ ಸೈನಿಕರು ಪ್ರಯಾಣದ ದಾಹದಿಂದ ಅಲ್ಲಿಯ ಗೊಲ್ಲರ ಬಳಿ ಸ್ವಲ್ಪ ಹಾಲನ್ನು ನೀಡಲು ಹೇಳಿದರು. ಮರಾಠರು ಬೆಳವಡಿಗೆ ನೀಡುತ್ತಿದ್ದ ಅಲ್ಪ ಸ್ವಲ್ಪ ತೊಂದರೆಯನ್ನು ತಿಳಿದ ಗೊಲ್ಲರು, ಹಾಲು ನೀಡಲು ನಿರಾಕರಿಸಿದರು. ಅದನ್ನು ನೋಡಿ ಮರಾಠರು ಸಿಟ್ಟಿಗೇರುತ್ತಾರೆ. ನಂತರ ಆ ಪ್ರಕರಣ ದೊಡ್ಡ ಮಟ್ಟಕ್ಕೆ ತಿರುಗಿ ಮಲಮ್ಮ ತನ್ನ ಸೈನ್ಯದ ಜೊತೆಗೆ ಮುಂದಾಳತ್ವ ವಹಿಸಿಕೊಂಡು ಹೊರಾಟಕ್ಕೆ ಸಜ್ಜಾಗುತ್ತಾಳೆ. ಸುಮಾರು ನೂರಕ್ಕು ಅಧಿಕ ಮರಾಠಾ ಸೈನಿಕರನ್ನು ಸೆದೇ ಬಡಿಯುತ್ತಾಳೆ. ಮರಾಠಾ ಸೈನಿಕರು ಮೋಸದಿಂದ ಮಲ್ಲಮ್ಮನ ಕುದುರೆಯ ಕಾಲು ಕಡಿದು ಬೀಳಿಸುತ್ತಾರೆ. ಆಗ ಕೆಳಗಿಳಿದ ಮಲ್ಲಮ್ಮ ಕತ್ತಿ ಗುರಾಣಿಯ ಸಹಾಯದಿಂದ ಹೊರಾಡುತ್ತಾಳೆ. ಆದರೆ ವಿಧಿಯಾಟ ಬೇರೆಯೇ ಇದೆ, ಆ ಸೈನಿಕರು ಮಲ್ಲಮ್ಮನನ್ನು ಸೆರೆ ಹಿಡಿದು ಶಿವಾಜಿ ಮಹಾರಾಜರ ಎದುರು ಕರೆದೊಯ್ದು ನಿಲ್ಲಿಸುತ್ತಾರೆ.

ಪರಾಕ್ರಮಿ ಯೋಧ ಶಿವಾಜಿ ಮಹಾರಾಜರನ್ನು ನೋಡಿದ ಮಲ್ಲಮ್ಮ ಕಿಂಚಿತ್ತೂ ಹೆದರದೆ ಧೈರ್ಯದಿಂದ ತಲೆ ಎತ್ತಿಕೊಂಡು ನಿಂತಿರುತ್ತಾಳೆ. ಒಳ್ಳೆಯ ಸಂಸ್ಕಾರವಂತರಾದ ಶಿವಾಜಿ ಮಹಾರಾಜರು ಆ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು, ನಂತರ ಹೇಳ್ತಾರೆ “ಅಮ್ಮ ನಾವು ಇನ್ನು ಮೇಲೆ ನಿಮಗೆ ಯಾವುದೇ ತೊಂದರೆ ನೀಡುವುದಿಲ್ಲ”. ಎಂದು ಹೇಳಿ ಮಲ್ಲಮ್ಮನ ಕಾಲಿಗೆ ಬಿದ್ದು ಅಶೀರ್ವಾದ ಪಡೆದುಕೊಳ್ಳುತ್ತಾರೆ. ನಮ್ಮ ಕನ್ನಡನಾಡಿನ ಸ್ತ್ರೀ ಒಬ್ಬಳು ಅಂತಹ ಮಹಾತ್ಮ ಛತ್ರಪತಿ ಶಿವಾಜಿ ಮಹಾರಾಜರ ಮನಸ್ಸನ್ನು ಗೆದ್ದು “ಮಾತೆ” ಎಂದು ಕರೆಸಿಕೊಂಡ ಧೈರ್ಯವಂತೆ ಮಲ್ಲಮ್ಮ. ಶಿವಾಜಿ ಮಹಾರಾಜರ ಸೈನಿಕರಿಂದ ಸಕಲ ಮರ್ಯಾದೆಯೊಂದಿಗೆ ತನ್ನ ರಾಜ್ಯಕ್ಕೆ ಮರಳಿದ ಸ್ವಾಭಿಮಾನಿ ವೀರ ವನಿತೆ ಬೆಳವಡಿ ಮಲ್ಲಮ್ಮರಿಗೆ ಶತ ಶತ ಪ್ರಣಾಮಗಳು.

ಶಿವಾಜಿ ಮಹಾರಾಜರು ಮತ್ತು ವೀರರಾಣಿ ಬೆಳವಡಿ ಮಲ್ಲಮ್ಮ ಅವರ ಯುದ್ಧ ಸೋಲು ಗೆಲುವಿನ ಬಗ್ಗೆ ಅನೇಕ ಗೊಂದಲಗಳೂ ಇದ್ದರೂ ಸಹಿತ ಪರಾಕ್ರಮಿ ಬೆಳವಡಿಯ ಮಲ್ಲಮ್ಮಳ ಶೌರ್ಯ ಮತ್ತು ಸಾಹಸಕ್ಕೆ ಶಿವಾಜಿ ಶರಣಾಗತನಾದನು ಎಂಬುದು ಸ್ಪಷ್ಟವಾಗಿ ಉಲ್ಲೇಖವಾಗಿದೆ.
ಮಹಾರಾಷ್ಟ್ರದ ಪಠ್ಯ ಪುಸ್ತಕದಲ್ಲಿ ಬೆಳವಡಿ ಮಲ್ಲಮ್ಮ ಅವರ ಚರಿತ್ರೆ ಇದೆ.

ಇಂತಹ ಒಬ್ಬ ದಿಟ್ಟ ರಾಣಿ ವೀರ ವನಿತೆ ಬೆಳವಡಿ ಮಲ್ಲಮ್ಮ ಅವರ ಪರಾಕ್ರಮಕ್ಕೆ ಶತಕೋಟಿ ನಮನಗಳು.

_________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group