ಮೂಡಲಗಿ – ಬೃಹತ್ ಹಿಂದೂ ಸಮ್ಮೇಳನವು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ ಇದು ಹಿಂದೂ ಹಿತಕ್ಕಾಗಿ ನಡೆಯುತ್ತಿರುವ ಕಾರ್ಯಕ್ರಮ.ಆರೆಸ್ಸೆಸ್ ನಲ್ಲಿ ಅನೇಕ ಬದಲಾವಣೆಗಳಾಗಿವೆ ಆದರೆ ಹಿಂದುತ್ವ ಮಾತ್ರ ಬದಲಾಗಿಲ್ಲ. ನಮ್ಮಲ್ಲಿ ದೈವಭಕ್ತಿಗೆ ಕೊರತೆಯಿಲ್ಲ ಆದರೆ ಕೊರತೆ ಇರುವುದು ದೇಶಭಕ್ತಿಯದು. ಎಲ್ಲರಲ್ಲಿ ದೇಶಭಕ್ತಿ ಹೆಚ್ಚಾದರೆ ಹಿಂದೂಗಳ ವಿರುದ್ಧ ಮಾತನಾಡಲು ಯಾರಿಗೂ ಧೈರ್ಯವಾಗಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಜಯ ನಾಯಕ ಹೇಳಿದರು.
ನಗರದ ಬಸವಮಂಟಪದಲ್ಲಿ ಹಿಂದೂ ಸಂಚಾಲನಾ ಸಮಿತಿಯ ವತಿಯಿಂದ ನಡೆದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು
ನಮ್ಮ ಮಕ್ಕಳಿಗೆ ಸಿನಿಮಾ ನಟರು ಆದರ್ಶವಾಗದೇ ಸ್ವಾತಂತ್ರ್ಯ ಹೋರಾಟಗಾರರು ಆದರ್ಶವಾಗಬೇಕು. ಕುಟುಂಬ ಪ್ರಬೋಧನಾ ಎಂಬ ಅಂಶದ ಅಡಿಯಲ್ಲಿ ಪ್ರತಿಯೊಂದು ಕುಟುಂಬವೂ ಹಿಂದೂ ಕುಟುಂಬವಾಗಬೇಕು ಎಂದರು.
ಇನ್ನೊಬ್ಬ ಅತಿಥಿ ಕಿರಣ ರಾಮ್ ಅವರು ಮಾತನಾಡಿ, ನಿರಂತರ ೧೫೦೦ ವರ್ಷಗಳ ಕಾಲ ದಾಳಿ ನಡೆದರೂ ನಮ್ಮ ಸನಾತನ ಹಿಂದೂ ಧರ್ಮ ಇನ್ನೂ ಜ್ವಲಂತವಾಗಿದೆಯೆಂದರೆ ಅದೇ ನಮ್ಮ ಪೂರ್ವಜರ ಶಕ್ತಿ. ಆದರೆ ನಮ್ಮ ಪೂರ್ವಜರ ಸಾಮರ್ಥ್ಯದ ಇತಿಹಾಸವನ್ನು ಮುಚ್ಚಿಟ್ಟು ನಮ್ಮ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಲಾಗಿದೆ. ಧರ್ಮ ರಕ್ಷಣೆಗಾಗಿ ಅನೇಕ ಹಿಂದೂ ಸಾಮ್ರಾಟರು ಅನುಭವಿಸಿದ ನೋವು, ಹಿಂಸೆ, ಪರಾಕ್ರಮಗಳನ್ನು ಹೇಳಿ ಭಾರತದ ಪೂರ್ವದ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಈರಣ್ಣ ಕೊಣ್ಣೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಸಾಕಷ್ಟು ಶ್ರೀಮಂತವಾಗಿದ್ದ ನಮ್ಮ ದೇಶವನ್ನು ಪರಕೀಯರು ದಾಳಿ ಮಾಡಿ ಲೂಟಿ ಹೊಡೆಯುತ್ತ ಬರಲಾಗಿದೆ. ಎಷ್ಟು ಸಲ ನಮ್ಮ ಸಂಸ್ಕೃತಿಯನ್ನು ಹತ್ತಿಕ್ಕುತ್ತ ಬಂದರೂ ಅಷ್ಟು ನಮ್ಮ ಸಂಸ್ಕೃತಿ ಬಲವಾಗುತ್ತಲೇ ಬಂದಿದೆ. ನಾವು ಕೂಡ ನಮ್ಮ ಸಂಸ್ಕೃತಿಯ ನ್ನು ನಮ್ಮ ಮುಂದಿನ ಪೀಳಿಗೆಗೆ ನೀಡಬೇಕು ಎಂದರು.
ಮೂಡಲಗಿಯ ಪೀಠಾಧಿಪತಿ ಶ್ರೀ ಶ್ರೀಧರಬೋಧ ಸ್ವಾಮೀಜಿ ಮಾತನಾಡಿ, ಯಾವ ಸಂಸ್ಕೃತಿಯ ಆರಂಭ ಹುಡುಕಿದರೂ ಸಿಗುವುದಿಲ್ಲವೋ ಅದು ಸನಾತನ ಸಂಸ್ಕೃತಿ. ಎಲ್ಲ ಪಂಥದವರ ಮಾರ್ಗದರ್ಶನದಲ್ಲಿ ಸುವ್ಯವಸ್ಥಿತವಾಗಿ ನಡೆಯುತ್ತಿರುವಾಗಲೇ ಅನೇಕ ದಾಳಿಗಳು ಸನಾತನ ಧರ್ಮದ ಮೇಲೆ ನಡೆದವು. ಇಂಥ ಕಾರ್ಯಕ್ರಮ ಗಳ ಮೂಲಕ ನಮ್ಮ ಸಂಸ್ಕೃತಿಯನ್ನು ನಾವು ಮರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಶ್ರೀ ಮ ನಿ ಪ್ರ ಅಡವಿ ಸಿದ್ಧರಾಮ ಮಹಾಸ್ವಾಮಿಗಳು ಶಿವಾಪೂರ, ಶ್ರೀ ಬಿಳಿಯಾನ ಸಿದ್ದ ಸ್ವಾಮೀಜಿ ಜೊಕ್ಕಾನಟ್ಟಿ, ಶ್ರೀ ಡಾ. ಮುರುಘರಾಜೇಂದ್ರ ಸ್ವಾಮೀಜಿ ಬಾಗೋಜಿಕೊಪ್ಪ, ಶ್ರೀ ದತ್ತಾತ್ರಯಬೋಧ ಸ್ವಾಮೀಜಿ, ಶ್ರೀ ಲಕ್ಷ್ಮಣ ದೇವರ, ಮುನ್ಯಾಳ, ಶ್ರೀ ಶಿವಾನಂದ ಮಹಾಸ್ವಾಮಿಗಳು ಸುಣಧೋಳಿ ಉಪಸ್ಥಿತರಿದ್ದರು. ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಪ್ರತಿಜ್ಞಾವಿಧಿ ಬೋಧಿಸಿದರು.
ಮಲ್ಲಪ್ಪ ಮದಗುಣಕಿ ವಂದನಾರ್ಪಣೆ ಮಾಡಿದರು
ಕಾರ್ಯಕ್ರಮದ ಮುಂಚೆ ಶ್ರೀ ಶಿವಬೋಧರಂಗನ ಮಠದಿಂದ ಹಿಂದೂ ಶೋಭಾಯಾತ್ರೆ ನಡೆಯಿತು ಸಾವಿರಾರು ಜನರು ಕೇಸರಿ ಶಾಲಿನೊಂದಿಗೆ ಭಾಗವಹಿಸಿದರು. ಕಾರ್ಯಕ್ರಮದ ಕೊನೆಗೆ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು.

