ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ನಡೆದ ಹೊನ್ನಕುಸುಮ ಸಾಹಿತ್ಯ ವೇದಿಕೆಯ “ತಿಂಗಳ ಹೊನಲು -04ರಲ್ಲಿ ಕಾವ್ಯೋತ್ಸವ-2026 ಅತ್ಯಂತ ಅದ್ದೂರಿಯಾಗಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಮುಮ್ತಾಜಬೇಗಂ ಗಂಗಾವತಿ ಅವರು ಸಮಕಾಲೀನ ಕಾವ್ಯಗಳಲ್ಲಿ ಒದಗಿರುವ ಬಿಕ್ಕಟ್ಟುಗಳು ಹಾಗೂ ಕಾವ್ಯ ರಚನೆಯ ಸವಾಲುಗಳನ್ನು ಕುರಿತು ಮಾತನಾಡಿದರು. ಹಿರಿಯ ಹಾಗೂ ಕಿರಿಯ ಕವಿಗಳು ವಾಚಿಸಿದ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯದ ಕೆಲವು ಮಾದರಿ ಕವಿತೆಗಳ ಕುರಿತು ವಿಶ್ಲೇಷಿಸಿದರು.
ಕವಿತೆಯು ಬಿಂಬವೋ ಪ್ರತಿಬಿಂಬವೋ ಎಂದು ಪ್ರಶ್ನಿಸಿಕೊಳ್ಳುವ ಅಗತ್ಯವನ್ನು ಬಿಚ್ಚಿಟ್ಟು, ಹೆಣ್ಣಿನ ಭಾಷೆಯ ಕಾವ್ಯ ಒಟ್ಟು ಕಾವ್ಯ ಹಾಗೂ ಕನ್ನಡ ಕವಿಗಳು ಕಟ್ಟಿಕೊಟ್ಟ ಪರಿಯನ್ನು ವಿಶ್ಲೇಷಿಸಿದರು. ಭಾಷಿಕ, ಪ್ರಾಕೃತಿಕ, ಪದ್ಯ, ಗದ್ಯ ಹಲವು ಮಾದರಿಗಳಿದ್ದು ಅವುಗಳನ್ನ ಸೂಕ್ತವಾಗಿ ಸಮಕಾಲೀನ ಕವಿಗಳು ತಿಳಿಯಬೇಕಾಗಿದೆ. ಹೊರ ಹಾಗೂ ಒಳಲೋಕದ ಸಮಾಜವನ್ನು ಚೆನ್ನಾಗಿ ಗ್ರಹಿಸಿದಾಗ ಮಾತ್ರ ಒಳ್ಳೆಯ ಕಾವ್ಯ ಅಭಿವ್ಯಕ್ತಿ ಸಾಧ್ಯವೆಂದೂ, ಮಹಿಳೆಗೆ ಅಂತಹ ವಿಶಿಷ್ಟವಾದ ಭಾಷೆಯಿದೆ. ತನ್ನ ಭಾವನಾತ್ಮಕವಾಗಿರುವ ಸಂಗತಿಗಳನ್ನು ಅವಳಿಂದ ಮಾತ್ರ ಸಶಕ್ತವಾಗಿ ಅಭಿವ್ಯಕ್ತಿಗೊಳಿಸಲು ಸಾಧ್ಯವೆಂದರು. ಮಹಿಳೆಯಲ್ಲಿ ಹೆಚ್ಚು ಸೌಹಾರ್ದದ ಭಾವನೆಗಳಿರುವುದರಿಂದ ಅವಳ ಸಾಹಿತ್ಯ ಸೌಹಾರ್ದತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸ್ವರಚಿತ ಕವಿತೆಗಳನ್ನು ಹತ್ತು ಜನ ಕವಿಗಳು ವಾಚಿಸಿದರು. ಇವುಗಳ ಕುರಿತು ಮತ್ತೋರ್ವ ಅತಿಥಿಗಳಾದ ಡಾ ಶ್ರೀದೇವಿ ಕರ್ಜಗಿ ಅವರು ವಿಶ್ಲೇಷಣೆ ಮಾಡಿದರು. ಹುನಗುಂದದ ಪರಿಸರದಲ್ಲಿ ಗಟ್ಟಿಯಾಗಿ ಕಾವ್ಯ ಬರೆಯುವ ಬಹಳ ಕವಿಗಳಿದ್ದಾರೆಂಬುದಕ್ಕೆ ವಾಚಿಸಿದ ಕವಿತೆಗಳೆ ಸಾಕ್ಷಿ ಎಂದರು. ಕನ್ನಡ ನಾಡಿನಲ್ಲಿ ಸಾಮಾನ್ಯ ಜನರಿಗೂ ಕಾವ್ಯ ಭಾಷೆ ಇದ್ದು, ಯಾವಾಗ ಕವಿ ತನ್ನೊಳಗೆ ತಾನು ಜಗಳವಾಡುತ್ತಾನೋ ಆಗ ಕಾವ್ಯ ಉಕ್ಕುತ್ತದೆ.
ಪ್ರಸ್ತುತ ದಿನಮಾನಗಳಲ್ಲಿ ಕಾವ್ಯ ಅಲಂಕಾರ, ಛಂದಸ್ಸು ರಸ, ಪ್ರಾಸವಿಲ್ಲದೆ ಭಾವವೊಂದನ್ನು ಆವರಿಸಿ ನಿರಾಭರಣ ಸುಂದರಿಯಾಗಿದ್ದಾಳೆ. ಕಾವ್ಯವು ಸೃಜನಾತ್ಮಕವಾಗಿರುವುದರಿಂದ ಓದು ಹಾಗೂ ಅನುಭವದ ಮೂಲಕ ಪ್ರತಿಯೊಬ್ಬರಿಗೂ ವಿಭಿನ್ನವಾಗಿ ಗ್ರಹಿಕೆಯಾಗುತ್ತದೆ. ವಾಚ್ಯಾರ್ಥ ಕಾವ್ಯದ ಸೌಂದರ್ಯವಾದರೂ, ಅತಿಯಾದರೆ ಕೇಳುಗರಿಗೆ ಅಥವಾ ಓದುಗರಿಗೆ ನೀರಸವಾಗುತ್ತದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದೊಡ್ಡಬಸು ಒಡವಡಗಿ ಅವರು ನಮ್ಮ ಹೊನ್ನಕುಸುಮ ಸಾಹಿತ್ಯ ವೇದಿಕೆಯು ವಿಶ್ವವಿದ್ಯಾಲಯ, ಸರಕಾರ ಮಾಡದೆ ಇರುವ ಕೆಲಸಗಳನ್ನು ಮಾಡುತ್ತಿದೆ. ಒಳ್ಳೆಯ ಮನಸ್ಸುಗಳನ್ನು ಸೇರಿಸಿ ಸಾಹಿತ್ಯದ ಸೇವೆ ಮಾಡುತ್ತಿದ್ದೇವೆ. ಕವಿಗಳ ಸಾಹಿತ್ಯವನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಲು ಇಂತಹ ವೇದಿಕೆಗಳಿಂದ ಸಾಧ್ಯವೆಂದರು. ಕಾವ್ಯೋತ್ಸವದ ಅಂಗವಾಗಿ ಶೇಕಡ 50% ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ನೀಡಲಾಯಿತು.
ಗುಂಡಣ್ಣ ಕುರಿ ಪ್ರಾರ್ಥಿಸಿದರು. ಎಂ. ಡಿ. ಚಿತ್ತರಗಿ ನಿರೂಪಿಸಿ ವಂದಿಸಿದರು..ಕೆ.ಎ.ಬನ್ನಟ್ಟಿ, ಹೇಮಂತ ಬೂತ್ನಾಳ್, ಡಾ.ಎಸ್.ಆರ್.ಗೋಲಗೊಂಡ ಡಾ.ನಾಗರಾಜ್ ನಾಡಗೌಡ, ವಿಜಯಕುಮಾರ್ ಕುಲಕರ್ಣಿ, ಬಸವರಾಜ ಕನ್ನೂರು, ಶ್ರೀಮತಿ ಮುರ್ತುಜಬೇಗಂ ಕೊಡಗಲಿ ಸೇರಿದಂತೆ ಇನ್ನಿತರ ಲೇಖಕರು, ಸಹೃದಯರು ಹಾಗೂ ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

