ಮೈಸೂರು: ಇಂದಿನ ಮಕ್ಕಳು ನಾಳೆಯ ನಾಗರಿಕರು. ಆದ್ದರಿಂದ ಗುಣಮಟ್ಟದ ಶಿಕ್ಷಣದ ಮೂಲಕ ಅವರನ್ನು ಉನ್ನತ ವ್ಯಕ್ತಿತ್ವಗಳಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹೇಳಿದರು.
ನಗರದ ಹೂಟಗಳ್ಳಿಯ ಕೆಎಚ್ಬಿ ಕಾಲೋನಿಯಲ್ಲಿರುವ ಸುದರ್ಶನ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಯು ಉಚಿತ ಶಿಕ್ಷಣ, ಸಮವಸ್ತ್ರ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಮೂಲಕ ಜಾತಿ–ಧರ್ಮ ಭೇದವಿಲ್ಲದೆ ಎಲ್ಲಾ ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ಸಂವಿಧಾನದ ಆಶಯದಂತೆ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವುದು ಶಿಕ್ಷಣದ ಮೂಲ ಗುರಿಯಾಗಬೇಕು ಎಂದು ತಿಳಿಸಿದ ಅವರು, ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯ ವಾಚನ ನಿರಂತರವಾಗಿ ನಡೆಯಬೇಕೆಂದು ಹೇಳಿದರು.
ಸಂಸ್ಥೆಯ ಮುಖ್ಯಸ್ಥ ಡಾ. ಎನ್. ಶ್ರೀನಿವಾಸನ್ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು. ಮಕ್ಕಳು ಪ್ರದರ್ಶಿಸಿದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ನಾಟಕಗಳನ್ನು ಮೆಚ್ಚಿದ ಸಚಿವರು, ದೇಶಾಭಿಮಾನ ಬೆಳೆಸಿಕೊಂಡು ಮಕ್ಕಳು ಉತ್ತಮ ಪ್ರಜೆಗಳಾಗಬೇಕು ಎಂದು ಆಶಿಸಿದರು.

