ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದೋರಣೆಗೆ ರೈತರ ಆಕ್ರೋಶ : ಪರಿಹಾರ ನೀಡಲು ಫೆ.೨ ರವರೆಗೆ ಗಡುವು
ಹುನಗುಂದ:ಹೈದ್ರಾಬಾದ್-ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡ ರೈತರ ಭೂಮಿಗೆ ಎರಡು ವರ್ಷವಾದರೂ ಪರಿಹಾರ ಕೊಡದೇ ಭೂಮಿ ಕಳೆದುಕೊಂಡ ರೈತರನ್ನು ನ್ಯಾಯಾಲಯದ ಮೆಟ್ಟಿಲೇರಿಸಿ ರೈತರನ್ನು ಸತಾಯಿಸುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸ್ವಾಧೀನ ಅಧಿಕಾರಿಗಳು ಮಾಡುತ್ತಿದ್ದಾರೆ. ಪರಿಹಾರ ನೀಡಿ ಕಾಮಗಾರಿ ಆರಂಭಿಸಬೇಕೆಂದು ತಾಲೂಕಿನ ಯಡಹಳ್ಳಿ ಗ್ರಾಮದ ರೈತರು ಬುಧವಾರ ಕಾಮಗಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಗ್ರಾಮದ ರೈತ ಶಿವನಗೌಡ ಪಾಟೀಲ ಮಾತನಾಡಿ, ಹೈದ್ರಾಬಾದ್-ಪಣಜಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ನಮ್ಮ ಭೂಮಿ ಸ್ವಾಧೀನಪಡಿಸಿಕೊಂಡು ಎರಡು ವರ್ಷಗಳಾದರೂ ಪರಿಹಾರ ನೀಡಿಲ್ಲ.ಪರಿಹಾರವನ್ನು ನೀಡುವಂತೆ ಭೂಸ್ವಾಧೀನ ಅಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಕೇಳಿದರೇ ನಿಮ್ಮ ಪರಿಹಾರ ನ್ಯಾಯಾಲಯದಲ್ಲಿದೆ.ನೀವು ಅಲ್ಲೇ ಪಡೆದುಕೊಳ್ಳಿ ಎಂದು ರೈತರಿಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.ಗ್ರಾಮದ ೨೫ಕ್ಕೂ ಹೆಚ್ಚು ರೈತರಿಗೆ ಪರಿಹಾರ ಬಂದಿಲ್ಲ. ರೈತರಿಗೆ ಹಣ ಬರದೇ ಇರೋದಕ್ಕೆ ರಾಷ್ಟ್ರೀಯ ಹೆದ್ದಾರಿ ಮತ್ತು ಭೂ ಸ್ವಾಧೀನ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ.ಪರಿಹಾರ ವಿತರಣೆಯಲ್ಲೂ ತಾರತಮ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಇನ್ನು ರೈತರು ತಮ್ಮ ಪರಿಹಾರಕ್ಕಾಗಿ ನಿತ್ಯ ಜಿಲ್ಲಾಧಿಕಾರಿ ಕಚೇರಿ ಹಾಗೂ ಭೂ ಸ್ವಾಧೀನ ಅಧಿಕಾರಿಗಳ ಕಚೇರಿಗೆ ಅಲೆದಾಡಿ ಎರಡು ವರ್ಷದಿಂದ ಮನವಿ ಸಲ್ಲಿಸುತ್ತಾ ಬಂದರೂ ಕೂಡಾ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ.
ನಿಮ್ಮ ಪರಿಹಾರ ನ್ಯಾಯಾಲಯದಲ್ಲಿದ್ದು ಅಲ್ಲಿಯೇ ಪಡೆಯಬೇಕು ಅದನ್ನು ಬಿಟ್ಟು ಕಾಮಗಾರಿ ತಡೆಯಲು ನಿಮಗೆ ಅಧಿಕಾರವಿಲ್ಲವೆಂದು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡುವುದಲ್ಲದೇ ರೈತರ ಅಂಜಿಸೋದಕ್ಕೆ ಪೊಲೀಸರನ್ನು ಕರಯಿಸಿ ರೈತರನ್ನು ಭಯಪಡಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.
ಹೆದ್ದಾರಿ ಕಾಮಗಾರಿ ತಡೆದ ಪರಿಣಾಮ ಸ್ಥಳಕ್ಕೆ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಆಗಮಿಸಿ, ಕಾಮಗಾರಿಗೆ ತಡೆ ನೀಡಿದ ರೈತರ ಸಮಸ್ಯೆ ಆಲಿಸಿದರು. ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಭೂಸ್ವಾಧೀನ ಪಡಿಸಿಕೊಂಡ ರೈತರಿಗೆ ಫೆ.೨ರೊಳಗಾಗಿ ಪರಿಹಾರ ನೀಡುವಂತೆ ಸೂಚಿಸಿದರು.ನಂತರ ಕಾಮಗಾರಿ ಮುಂದುವರೆಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಾಯಕ ಎಂಜಿನಿಯರ್ ರಾಜು ಅಂಗಡಿ ಮಾತನಾಡಿ, ಭೂಮಿ ಕಳೆದುಕೊಂಡ ರೈತರು ನಿಗದಿತ ಅವಧಿಯಲ್ಲಿ ಪರಿಹಾರ ಪಡೆಯಲು ಮನಸ್ಸು ಮಾಡದೇ ಇರೋದರಿಂದ ರೈತರ ಹಣವನ್ನು ನಾವು ಇಟ್ಟುಕೊಳ್ಳಿಕ್ಕೆ ಆಗದೇ ಇರುವುದರಿಂದ ಅವರ ಹಣವನ್ನು ಕೋರ್ಟ್ ನಲ್ಲಿ ಡಿಪಾಸಿಟ್ ಮಾಡಲಾಗಿದೆ. ರೈತರು ತಮ್ಮ ಪರ ಸೀನಿಯರ್ ವಕೀಲರನ್ನು ನ್ಯಾಯಾಲಯಕ್ಕೆ ಕಳಿಸಿದ್ದೆಯಾದರೇ ಅವರ ಪರಿಹಾರ ಅವರಿಗೆ ಸಿಗುತ್ತದೆ ಎಂದರು.
ಪಿಎಸೈ ಎಸ್.ಜಿ. ಆಲದಕಟ್ಟಿ, ರೈತರಾದ ನಾಗಪ್ಪ ಬೀಳಗಿ, ನಿಂಗನಗೌಡ ಗೌಡರ, ಬಸಲಿಂಗಪ್ಪ ಗೌಡರ, ಶರಣಗೌಡ ಅರಸಿಬಿಡಿ, ಸಂಗನಗೌಡ ಗೌಡರ, ಬಸನಗೌಡ ಅರಸಿಬಿಡಿ, ರಾಮನಗೌಡ ಪಾಟೀಲ, ಸುರೇಶ ಗೌಡರ, ಸಂಗನಗೌಡ ದೇಸಾಯಿ, ಮಹಾಂತಗೌಡ ಗೌಡರ ಇದ್ದರು. ಸ್ಥಳದಲ್ಲಿ ಡಿ.ಆರ್. ವಾಹನದ ಪೊಲೀಸ್ ಸಿಬ್ಬಂದಿಗಳು ಕೂಡಾ ಇದ್ದರು.
ನಿಗಧಿತ ಅವಧಿಯಲ್ಲಿ ದಾಖಲಾತಿ ಸಲ್ಲಿಸಿದರೂ ಪರಿಹಾರ ನೀಡಿಲ್ಲ
ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಸರಿಯಾದ ಸಮಯಕ್ಕೆ ದಾಖಲಾತಿ ಸಲ್ಲಿಸಿದರೂ ಕೂಡಾ ಪರಿಹಾರದ ಹಣವನ್ನು ಕೋರ್ಟ್ ನಲ್ಲಿ ಡಿಪಾಸಿಟ್ ಮಾಡಿದ್ದಾರೆ. ಇನ್ನು ಕೆಲವು ರೈತರು ಪರಿಹಾರ ಕೋರ್ಟನಲ್ಲಿ ಡಿಪಾಸಿಟ್ ಆಗದಿದ್ದರೂ ಕೂಡಾ ಅಂತ ರೈತರಿಗೆ ಕಳೆದು ಒಂದು ವರ್ಷದಿಂದಲೂ ಕೂಡಾ ಪರಿಹಾರ ನೀಡುತ್ತಿಲ್ಲ. ಸದ್ಯ ತಹಶೀಲ್ದಾರ ಅವರ ಮಾತಿಗೆ ಗೌರವ ಕೊಟ್ಟು ಫೆ. ೨ರವರೆಗೆ ಕಾಯುತ್ತೇವೆ. ಆಗಲೂ ಪರಿಹಾರ ದೊರಯದಿದ್ದರೇ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ರೈತ ಮುಖಂಡರು ತಿಳಿಸಿದರು.

