ಈ ಗ್ರಂಥದಲ್ಲಿ ಒಟ್ಟು ಮೂರು ವಿಭಾಗಗಳಿರುತ್ತವೆ. ‘ಸ್ತ್ರೀ ಸಮಾನತೆ ಹಾಗೂ ಸ್ವಾತಂತ್ಯಕ್ಕಾಗಿ ವಚನಕಾರರ ಚಳವಳಿ,’ ‘ಮಹಿಳೆಯರ ವೈಜ್ಞಾನಿಕ ಮನೋಭಾವ,’ ‘ನನ್ನ ಪ್ರೀತಿಯ ಅಮ್ಮ -ನಾನು ಕಂಡಂತೆ,’ ‘ ಆತ್ಮೀಯ ಸಖಿ ಸರಸ್ವತಿ-ನಾ ಕಂಡಂತೆ’, ‘ತುಂಬಿದ ಕೊಡ’,’ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಜ್ಯೋತಿರಾವ್ ಫುಲೆ ಎಂಬ ಸಾಮಾಜಿಕ ಕ್ರಾಂತಿಗೈದ ಮಹಿಳೆ’ ಇತ್ಯಾದಿ ಇಂಗ್ಲೀಷ ಲೇಖನಗಳನ್ನೂ ಕೂಡ ಒಳಗೊಂಡಿರುವ ಒಟ್ಟು ಅರವತ್ತು ಸಂಶೋಧನಾತ್ಮಕ ಲೇಖನಗಳ ಪುಷ್ಪ ಗುಚ್ಛವಿದಾಗಿರುತ್ತದೆ.
ಅಮೃತ ಮಹೋತ್ಸವ ಎನ್ನುವುದು ಮನುಷ್ಯನ ಜೀವಿತ ಕಾಲವೆಂದು ಪರಿಗಣಿಸದೆ ಜೀವನದ ಹಿಂದಿನ ಸಾಧನೆ ಮತ್ತು ಸಂಘರ್ಷ ಬದುಕಿನ ಅನಾವರಣವಾಗಿರುತ್ತದೆ. ಇಂತಹ ಧೀಮಂತ ವ್ಯಕ್ತಿಗಳಿಗೆ ಗೌರವ ಗ್ರಂಥ ಸಮರ್ಪಣೆ ನಾಗರಿಕ ಸಮಾಜದ ಕರ್ತವ್ಯ ಮತ್ತು ಜವಾಬ್ದಾರಿ. ಒಬ್ಬ ವ್ಯಕ್ತಿಯ ಸಾಧನೆಯ ಸುಪ್ತ ಮನದಾಳದ ಫಲ ಸುಖ-ದುಃಖ ನಲಿವು-ನೋವು ಹಳೆಯ ನೆನಪಿನ ಸುರುಳಿಯನ್ನು ಬಿತ್ತರಿಸುವ ಹಾಗೂ ರಾಷ್ಟ್ರ ನಾಡು-ನುಡಿ ಸಂಸ್ಕೃತಿ ಸಾಹಿತ್ಯ ಇತಿಹಾಸ ಸಂಶೋಧನೆ ಕೃಷಿ ಇತ್ಯಾದಿ ಅನೇಕ ವೈಚಾರಿಕ ವೈಜ್ಞಾನಿಕ ವಿಷಯಗಳ ಬಗ್ಗೆ ಬೇರೆ ಬೇರೆ ಸಂಶೋಧನ ಲೇಖನಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಬರೆಯಿಸಿ,ಸಂಗ್ರಹಿಸಿ ಅಕ್ಕನ ಅರಿವಿನ ವಚನ ಅಧ್ಯಯನ ವೇದಿಕೆಯ ಸದಸ್ಯರು ‘ ಅನುಭವ ಸಿರಿ’ ಅಭಿನಂದನ ಗ್ರಂಥವನ್ನು ಪ್ರಕಟಿಸಿ ನಾಡಿಗೆ ಸಮರ್ಪಿಸುವ ಕಾರ್ಯಕ್ಕೆ ಹಲವಾರು ಸಾಹಿತಿಗಳು ಚಿಂತಕರು ಪ್ರೋತ್ಸಾಹಿಸಿರುವ ಪ್ರತಿಫಲವೇ ಈ ಕೃತಿ ರತ್ನ.
‘ಅನುಭವ ಸಿರಿ’ ಡಾ. ಸರಸ್ವತಿ ಪಾಟೀಲರವರ ಜೀವನದ ಸುತ್ತಮುತ್ತ ನಡೆದ ಅನೇಕ ಸಂಗತಿಗಳೊಂದಿಗೆ ಅವರ ಸ್ನೇಹಿತರ ಆತ್ಮೀಯ ಬಂಧು-ಬಾಂಧವರನ್ನು ಕಾಣುವ ಪರಿ ಅವಿಸ್ಮರಣೀಯವಾದುದು ಡಾ. ಸರಸ್ವತಿಯವರ ಜೀವನ ಸಂಘರ್ಷ, ಶೈಕ್ಷಣಿಕ ಸಾಧನೆ, ಕೌಟುಂಬಿಕ ಜೀವನ, ಪ್ರಾಧ್ಯಾಪಕ ವೃತ್ತಿ,ಹೀಗೆ ಹಲವಾರು ಮುಖಗಳ ಪರಿಚಯದ ಪ್ರತಿರೂಪವೇ ಈ ಕ್ರತಿ. ಕನ್ನಡ ಸಾಹಿತ್ಯ ಸಂಸ್ಕೃತಿ ವಿಶೇಷವಾಗಿ ವಚನ ಸಾಹಿತ್ಯದ ಉತ್ಕ್ರಷ್ಟ ಲೇಖನಗಳನ್ನೊಳಗೊಂಡ ಆಕರ ಗ್ರಂಥವಿದು.
‘ವಚನ ಅಧ್ಯಯನ ವೇದಿಕೆ’ಯು ಕಳೆದ ಐದು ವರ್ಷಗಳಿಂದಲೂ ಪ್ರತಿ ಶನಿವಾರ ಮತ್ತು ರವಿವಾರ ಗೂಗಲ್ ಮೀಟ್ ಸಂಘಟಿಸಿ ತನ್ಮೂಲಕ ನಾಡಿನ ದೇಶದ ಜಾಗತಿಕ ಮಟ್ಟದ ಉಪನ್ಯಾಸಗಳನ್ನು ಅನುಭಾವಿಗಳಿಂದ ಏರ್ಪಡಿಸಿ ವಚನ ಸಾಹಿತ್ಯದ ಹೊಸ ಬಗೆಯ ಚಿಂತನೆ ಆಲೋಚನೆ ಕ್ರಮವನ್ನು ವರ್ಧಿಸಿರುತ್ತಲಿರುವದು ಸ್ತುತ್ಯರ್ಹವಾದುದು. ಈ ಸಂಘಟನೆಯ ನೂರಾರು ಪರಿಣತ ಸಂಶೋಧಕರು ಹಾಗೂ ವಿಶ್ವವಿದ್ಯಾಲಯವನ್ನು ಮೀರಿ ಬೆಳೆದ ತಜ್ಞ ಸಂಪನ್ಮೂಲ ವ್ಯಕ್ತಿಗಳ ಅನುಭಾವ ನಿಜಕ್ಕೂ ಪ್ರಶಂಸನೀಯವಾದುದು ಎಂಬುದು ಶರಣೆ.ಗೌರಮ್ಮ ನಾಶಿಯವರ ಪ್ರಸ್ತಾವನೆಯ ನುಡಿಮುತ್ತಾಗಿರುತ್ತದೆ.
ಸಾಂಸ್ಕೃತಿಕ ಸಾಹಿತ್ಯಿಕ ವಿಶ್ವವಿದ್ಯಾಲಯದ ಬಹುತೇಕ ಕಾರ್ಯಕ್ರಮಗಳಲ್ಲಿ ಸಂಘಟಕರಾಗಿ ಸಂಯೋಜಕರಾಗಿ ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಡಾ.ಸರಸ್ವತಿ ಪಾಟೀಲರು ಅತ್ಯಂತ ಜನಪ್ರಿಯ ಪ್ರಾಧ್ಯಾಪಕರು. ಗೌರವ ಗ್ರಂಥ ಮತ್ತು ಅಭಿನಂದನಾ ಗ್ರಂಥಗಳ ಸಮರ್ಪಣೆ ಪ್ರಬುದ್ಧ ಸಮಾಜದ ನೈತಿಕ ಹೊಣೆಗಾರಿಕೆ.ವಿಜಯಪುರದ ಡಾ.ಸರಸ್ವತಿ ಪಾಟೀಲವರ ಜೀವನ ಬದುಕಿನ ಅವಿಸ್ಮರಣೀಯ ಸಂಗತಿಗಳನ್ನು ಹೆಕ್ಕಿ ಮುಂದಿನ ಸಮಾಜಕ್ಕೆ ಯುವಕರಿಗೆ ಸಾಧಕರಿಗೆ ಸತ್ಪ್ರೇರಣೆಯನ್ನೀಯುವ ಪ್ರಾಮಾಣಿಕ ಪ್ರಯತ್ನವೇ ‘ಅನುಭವ ಸಿರಿ’ ಅಭಿನಂದನ ಗ್ರಂಥ.ಶಾಂತ ಸಮುದ್ರಗುಣ ಹೊಂದಿದ ಡಾ.ಸರಸ್ವತಿ ಮೇಡಂ ಅವರು ಧಾರವಾಡದ ಕವಿವಿಯಲ್ಲಿ ತಮ್ಮ ಸ್ನಾತಕೋತ್ತರ ಪದವಿ,ಪಿ.ಎಚ್ ಡಿ.ಪದವಿ ಮುಗಿಸಿಕೊಂಡು,ಮುಂದೆ ಗುಲ್ಬರ್ಗಾ ವಿವಿಯ ಪ್ರಾಧ್ಯಾಪಕರಾಗಿ ಅಲ್ಲಿನ ರಸಾಯಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಬಿ.ಆರ್.ಪಾಟೀಲರನ್ನು ಮದುವೆಯಾದರು. ಡಾ.ಹರ್ಷಿತಾ ಮತ್ತು ಡಾ.ಆನಂದ ಇರ್ವರು ಮಕ್ಕಳು. ಅತ್ಯುತ್ತಮ ಸಂಶೋಧನೆ,ಕಿರೀಟ ಪ್ರಾಯವಾದ ವ್ರತ್ತಿ ಜೀವನ,ಇವುಗಳ ಜೊತೆಗೆ ಕೌಟುಂಬಿಕ ಸಮಸ್ಯೆ ಸಾವು-ನೋವು ಎಲ್ಲವನ್ನೂ ಮೌನದಲ್ಲಿ ನುಂಗಿ ಶ್ರೇಷ್ಠ ಪ್ರಾಧ್ಯಾಪಕರೆನಿಸಿಕೊಂಡರು.ಡಾ.ಸರಸ್ವತಿ ಪಾಟೀಲ ಅವರು ಚಿಕ್ಕಂದಿನಿಂದಲೂ ವಚನ ಸಾಹಿತ್ಯ ಬಸವಣ್ಣ ಮತ್ತು ಸರ್ವಜ್ಞ ಇವರ ಬಗ್ಗೆ ಅಪಾರವಾದ ಆಸಕ್ತಿ ಕಳಕಳಿ ಹೊಂದಿದ್ದರೆಂಬುದು ಡಾ.ಶಶಿಕಾಂತ.ಪಟ್ಟಣ ಅವರ ಅಭಿಪ್ರಾಯ ಔಚಿತ್ಯಪೂರ್ಣವಾದುದು.
ಶಿಷ್ಯರನ್ನು ತಮ್ಮ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರಲ್ಲದೆ ಶಾಂತ ಚಿತ್ತ, ಗಂಭೀರ ಸ್ವಭಾವದ ಡಾ.ಸರಸ್ವತಿ ಪಾಟೀಲರು ಸ್ನೇಹ ಜೀವಿ. ಸರ್ವರನ್ನು ಅತ್ಯಂತ ಪ್ರೀತಿಯಿಂದ ಆದರದಿಂದ ಆತಿಥ್ಯಗೈಯುವ ಹೃದಯ ವೈಶಾಲ್ಯವುಳ್ಳವರು. ವಿಜ್ಞಾನದ ಪ್ರಾಧ್ಯಾಪಕರಾದರೂ ಕೂಡ ಕನ್ನಡ ನಾಡು ನುಡಿ ಸಂಸ್ಕೃತಿಯ ಬಗ್ಗೆ ವಿಶೇಷವಾದ ಆಸಕ್ತಿವುಳ್ಳವರು. ಶರಣ ಸಾಹಿತ್ಯ ವಚನಕಾರರ ಬಗ್ಗೆ ಆಗಾಗ ಕೇಳಿ ತಿಳಿದುಕೊಳ್ಳುವ ಅತೀವ ಆಸಕ್ತರಾದ ಡಾ.ಸರಸ್ವತಿಯವರು ತಮ್ಮ ಜೀವನದ ಅಮೂಲ್ಯ 75 ನೇ ವರ್ಷಕ್ಕೆ ಕಾಲಿಡುತ್ತಲಿರುವ ಸುಸಂದರ್ಭದಲ್ಲಿ ‘ಅನುಭವ ಸಿರಿ’ ಎಂಬ ಅಭಿನಂದನಾ ಗೌರವ ಕೃತಿಯನ್ನು ಸಮರ್ಪಿಸುತ್ತಿರುವುದು ಸಂತಸದ ಸಂಗತಿ ಎಂಬುದು ಡಾ. ವೀರಣ್ಣ ದಂಡೆ,ವಿಶ್ರಾಂತ ಪ್ರಾಧ್ಯಾಪಕರು,ಮುಖ್ಯಸ್ಥರು,ಕನ್ನಡ ವಿಭಾಗ,ಗುಲ್ಬರ್ಗಾ ವಿವಿ ಕಲಬುರ್ಗಿ ಅವರದು ಅಭಿನಂದನಾರ್ಹ ಅಭಿಪ್ರಾಯವಾಗಿರುತ್ತದೆ.
ಅನೇಕ ಐತಿಹಾಸಿಕ ದಾರ್ಶನಿಕ ವೈಜ್ಞಾನಿಕ ಧಾರ್ಮಿಕ ಸಾಹಿತ್ಯಿಕ ಮುಂತಾದ ಸಂಶೋಧನಾ ಲೇಖನಗಳೊಂದಿಗೆ ವಿದ್ಯಾರ್ಥಿಗಳ ಸಂಬಂಧ ಮತ್ತು ಸ್ನೇಹಿತರ ಕುಟುಂಬದ ಬಾಂಧವರ ಬಳ್ಳಿಯ ಕರುಳ ಧ್ವನಿಯಂತಿರುವ ಈ ಕೃತಿಯ ಕಥಾನಾಯಕಿಯವರ ಜೀವನದ ಯಶೋಗಾಥೆಯ ಪ್ರತೀಕದಂತಿದೆ ಈ ಅಭಿನಂದನ ಗ್ರಂಥ ಎಂಬುದಾಗಿ ಅನುಭಾವಿಗಳು ಬೆನ್ನುಡಿ ಬರಹಗಾರರು ಮತ್ತು ಧಾರವಾಡದ ಬಸವ ಶಾಂತಿ ಮಿಷನ್ ಟ್ರಸ್ಟ್ ನ ಅಧ್ಯಕ್ಷರಾದ ಮಹಾದೇವ ಹೊರಟ್ಟಿಯವರು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ವಿಭಾ ಪ್ರಕಾಶಕರು ಹಾಗೂ ತಾರಾ ಪ್ರಿಂಟರ್ಸ್ ಮಾಲೀಕರಾದ ಶಶಿಕುಮಾರ ಮತ್ತು ಕಾರ್ತಿಕವರು ಈ ಗ್ರಂಥ ಪುಷ್ಪವನ್ನು ಪ್ರಕಟಿಸಿದ್ದಾರೆ. ಹೇಮಂತ ಅವರು ಆಕರ್ಷಕ ಮುಖಪುಟವನ್ನು, ಶ್ರೀಮತಿ ಗಿರಿಜಾ, ಲತಾ, ಜ್ಯೋತಿ ಇವರು ಅಕ್ಷರಗಳನ್ನು ದಾಖಲಿಸುವ ಕಾರ್ಯಗೈದಿರುವರು.ಹಿರಿಯ ಚೇತನರಾದ ಡಾ.ಎಂ.ಎಂ.ಪಡಶೆಟ್ಟಿಯವರು, ಡಾ.ಚನ್ನಪ್ಪ ಕಟ್ಟಿಯವರು, ಶಿವಬಸಪ್ಪ ಗವಸಾನಿಯವರು,ಡಾ.ಎಸ್.ಕೆ.ಕೊಪ್ಪ ಅವರು ಈ ಪುಸ್ತಕದ ಸಿದ್ಧತೆಯಲ್ಲಿ ಉತ್ತಮ ಮಾರ್ಗದರ್ಶನಗೈದಿರುವರು.
‘ ಅನುಭವ ಸಿರಿ ‘ಗ್ರಂಥವು ವ್ಯಕ್ತಿಯ ಸಾಧನೆ ತ್ಯಾಗ ಪ್ರೀತಿ ಸ್ನೇಹ ಸಮಾಜಮುಖಿ ಕಾರ್ಯ ವ್ರತ್ತಿ ಪ್ರವ್ರತ್ತಿ ಇತ್ಯಾದಿಗಳನ್ನೊಳಗೊಂಡಿದೆ. ಈ ಗ್ರಂಥವನ್ನು ಪ್ರತಿಯೊಬ್ಬರೂ ಓದಿ ಪ್ರಯೋಜನ ಪಡೆದರೆ ತಮ್ಮೆಲ್ಲರ ಶ್ರಮ ಸಾರ್ಥಕವಾಗುತ್ತದೆಂಬುದು ಡಾ.ಶಶಿಕಾಂತ ಪಟ್ಟಣ ಅವರ ಅಮೂಲ್ಯ ಸಂಪಾದಕೀಯ ನುಡಿಯಾಗಿರುತ್ತದೆ.
ಪ್ರೊ.ಸರಸ್ವತಿ ಪಾಟೀಲ ಅವರ ತಂದೆ ಬಿ.ಎಚ್.ಸಿಂದಗಿ ಮತ್ತು ತಾಯಿ ಗೌರಮ್ಮ ದಂಪತಿಗಳಿಗೆ ಹಾಗೂ ಡಾ.ಸರಸ್ವತಿ ಪಾಟೀಲ ಎಂಬ ಮಹಾಮಾನವತಾವಾದಿ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ವರೂಪರಾಗಿರುವದರೊಂದಿಗೆ ಇವರ ಯಾವುದೇ ಹಿಂದಿನ ಮಹಾಶಕ್ತಿ , ಸ್ಪೂರ್ತಿಯ ಸೆಲೆಯಾಗಿದ್ದ ಈ ಕೃತಿಯ ನಾಯಕಿ ಡಾ.ಸರಸ್ವತಿಯವರ ಪತಿದೇವರಾದ ಲಿಂ.ಡಾ.ಬಿ.ಆರ್.ಪಾಟೀಲ ಇವರಿಗೆ ಈ ಕೃತಿ ರತ್ನವನ್ನು ಸಂಪಾದಕ ಮಂಡಳಿಯವರು ಗೌರವಪೂರ್ವಕವಾಗಿ ಸಮರ್ಪಿಸಿರುವರು.ಡಾ.ಸರಸ್ವತಿಯವರ ಮಾವ ಲಿಂ.ಶ್ರೀ.ಆರ್.ಎಮ್.ಪಾಟೀಲ-ಅತ್ತೆ
ಯವರಾದ ಲಿಂ.ಕುಸುಮಾವತಿ ದಂಪತಿಗಳ ಹರಕೆಯ ತೋರಣವು ಹಿರಿಯರ ಶುಭಾಶೀರ್ವಾದ ಸ್ವರೂಪದಂತಿದೆ. ಅಧ್ಯಯನಾಸಕ್ತರು, ಓದುಗ ಸಹೃದಯರು, ಸಂಶೋಧಕರು ಈ ಅತ್ಯುಪಯುಕ್ತ ಆಕರ ಗ್ರಂಥದ ಪ್ರಯೋಜನ ಪಡೆದರೆ ಲೇಸಲ್ಲವೇ!
—————–
ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.
ಸಾಹಿತ್ಯ ಸಂಶೋಧಕರು – ವಿಮರ್ಶಕರು,ಗದಗ