ಕಣ್ಣು ಮುಚ್ಚಿರುವ ಪುರಸಭೆ; ಈ ರಸ್ತೆ ರಿಪೇರಿ ಯಾವಾಗ?

0
252
ಬಿಇಓ ಕಚೇರಿಯ ಹಿಂದೆ ರಸ್ತೆಯಲ್ಲಿ ತಗ್ಗು

ಮೂಡಲಗಿ – ನಗರದ ಲಕ್ಷ್ಮಿ ನಗರದ ಆರ್ ಡಿ ಎಸ್ ಶಾಲೆಯ ಹತ್ತಿರ ರಸ್ತೆಯನ್ನು ಅಗೆದು ಹಲವು ತಿಂಗಳಾಗಿದ್ದರೂ ಇನ್ನೂ ರಿಪೇರಿಯಾಗದೆ ಪುರಸಭೆ ಇಂಜಿನೀಯರ್ ಸೇರಿದಂತೆ ಅಧಿಕಾರಿಗಳು ಕಣ್ಣು ಮುಚ್ಚಿದಂತೆ ಕಾಣುತ್ತದೆ.

ನಗರದಲ್ಲಿ ಬಿಇಓ ಕಚೇರಿಯ ಹಿಂದೆ ಪಾರ್ಶಿಯವರ ಶಾಲೆಗೆ ಹೋಗಬೇಕಾದರೆ ಈ ತಗ್ಗಿನಲ್ಲಿ ಇಳಿದು ದಾಟಬೇಕು. ಬೈಕ್ ಇದ್ದವರು ಸ್ವಲ್ಪ ಮಟ್ಟಿನ ಸಾಹಸ ಮಾಡಬೇಕಾಗುತ್ತದೆ. ಶಾಲೆಯವರೂ ಈ ರಸ್ತೆಯ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ.

ಅತಿ ವೇಗವಾಗಿ ಬೆಳೆಯುತ್ತಿರುವ ಲಕ್ಷ್ಮಿ ನಗರದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಮೂಲಭೂತವಾದ ರಸ್ತೆ ಅಭಿವೃದ್ಧಿ ಯಂತೂ ಶೂನ್ಯ. ಇಲ್ಲಿನ ನಾಗರಿಕರು ಸೂಕ್ತ ರಸ್ತೆ ಸೌಲಭ್ಯ ಇಲ್ಲದೆ ದಿನಂಪ್ರತಿ ಶಾಪ ಹಾಕುತ್ತ ಪರದಾಡುತ್ತ ಜೀವನ ಸಾಗಿಸುವಂತಾಗಿದೆ.

ಇಲ್ಲಿನ ವಾರ್ಡ್ ಸದಸ್ಯರೂ ಇತ್ತ ಗಮನ ಕೊಡದೇ ಇರುವುದು ಅಚ್ಚರಿಯ ವಿಷಯ. ಇನ್ನಾದರೂ ಪುರಸಭೆ ಕಣ್ಣು ತೆರೆಯಬೇಕಾಗಿದೆ.

ಇನ್ನೊಂದು ವಿಚಿತ್ರ ಸಂಗತಿಯೆಂದರೆ ಪತ್ರಿಕೆಗಳಲ್ಲಿ ಬಂದ ವಿಷಯಗಳ ಬಗ್ಗೆ ಮೂಡಲಗಿ ಪುರಸಭೆಯ ಅಧಿಕಾರಿಗಳು, ವಾರ್ಡ್ ಗಳ ಸದಸ್ಯರು, ಸರ್ಕಾರಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಪ್ರದರ್ಶನ ಮಾಡುತ್ತಾರೆಂಬುದು.

ಊರ ಅಭಿವೃದ್ಧಿ ಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ, ಲೋಪದೋಷಗಳ ಬಗ್ಗೆ ಪತ್ರಿಕೆಗಳು ವರದಿ ಮಾಡಿದರೆ ಯಾರಿಂದಲೂ ಒಂದು ಸಣ್ಣ ಪ್ರತಿಕ್ರಿಯೆಯೂ ಬಾರದೇ ಇರುವುದು ಮೂಡಲಗಿಯ ಭವಿಷ್ಯ ಎತ್ತ ಸಾಗಿದೆ ಎಂಬುದನ್ನು ಸೂಚಿಸುತ್ತದೆ.

ಈ ಹಿಂದೆ ನಗರದ ವಂಟಗೋಡಿಯವರ ವಠಾರದ ಹಿಂದೆ ಪತ್ತಾರ ಓಣಿಯಲ್ಲಿ ಹಳೆಯ ಕಟ್ಟಡಗಳು ಕುಸಿದು ರಸ್ತೆ ಬಂದ್ ಆಗಿರುವ ಬಗ್ಗೆ Times of ಕರ್ನಾಟಕ ವರದಿ ಮಾಡಿದ್ದರೂ ಕನಿಷ್ಠ ಅದನ್ನು ನಿವಾರಿಸುವ ಕೆಲಸವನ್ನು ಪುರಸಭೆಯವರು ಮಾಡಲಿಲ್ಲ. ಅಲ್ಲಿನ ಜನರು ಇನ್ನೂ ಕಲ್ಲುಗಳನ್ನು ದಾಟಿಕೊಂಡೇ ಸಾಗಬೇಕಾಗಿದೆ ಎಂಬ ಬಗ್ಗೆ ಪತ್ರಿಕೆಗೆ ಹೇಳಿಕೊಂಡರು.

ಇನ್ನಾದರೂ ಈ ವರದಿಗಳಿಗೆ ಪುರಸಭೆ ಕಣ್ತೆರೆಯುವುದೇ ಕಾದು ನೋಡಬೇಕು.


ಉಮೇಶ ಬೆಳಕೂಡ, ಮೂಡಲಗಿ