ಇದೊಂದು ಅದ್ಭುತವಾದ ಗಾದೆ ಮಾತು. ಇದು ಮನುಷ್ಯನ ವ್ಯಕ್ತಿತ್ವದಲ್ಲಿ ಇರಬೇಕಾದ ಅತ್ಯಗತ್ಯ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ.
ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದುದು. ಕೇವಲ ಮನುಷ್ಯನಾಗಿ ಹುಟ್ಟಿದರೆ ಸಾಲದು,ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಮ್ಮ ದೇಶದ ಪರಂಪರೆಯಲ್ಲಿ ಅಡಗಿರುವುದು ನಯ ,ದಯ, ಕರುಣೆ,ಕಕ್ಕುಲಾತಿಯ ಭಾಗವಾಗಿದೆ. ಅತೀ ಜಿಪುಣನಾದರೂ ಪರವಾಗಿಲ್ಲ.ಎಲ್ಲ ಮಿತಿಯೊಳಗಿದ್ದು,ಅವನ ಕರ್ತವ್ಯದ ನಿರ್ವಹಣೆಯಲ್ಲಿ ಅವನಿರುತ್ತಾನೆ.ಹಬ್ಬ, ಅಮಾವಾಸ್ಯೆ, ಹುಣ್ಣಿವೆಗಾದರೂ ನಾಲ್ಕು ಜನರಿಗೆ ಅವನು ಉಣಿಸುವ ಪ್ರಯತ್ನದಲ್ಲಿರುತ್ತಾನೆ.
ಇದಕ್ಕೆ ವ್ಯತಿರಿಕ್ತವಾಗಿ ಆರೋಪ,ಅಸಮಾಧಾನ, ಆಕ್ರೋಶ, ವೈರತ್ವ, ವೈಮನಸ್ಸು ಬೆಳೆಸಿಕೊಳ್ಳುವವನಿಗೆ ನಯ ವಿನಯ ದಯ ಎಲ್ಲಿಂದ ಬರಬೇಕು ?ಅವನು ತಪ್ಪು ಮಾಡಿದ ನೋಡು, ಇವಳು ತಪ್ಪು ಮಾಡಿದಳು ನೋಡು,ಅವನ ಸ್ವಭಾವ ಸರಿಯಿಲ್ಲ,ಬರೀ…ಇವೆ ಕಥೆಗಳೆ.ಅಷ್ಟಕ್ಕೂ ನನ್ನಿಂದ ಪ್ರಮಾದ ಆಗಿದೆ ಎಂದು ಭಯವಿಲ್ಲದವರು ಹೇಳಿಕೊಳ್ಳಲು ಸಾಧ್ಯವೇ ಇಲ್ಲ.ಬಹು ಮುಖ್ಯವಾದದೇನಂದರೆ ಇಂತವರು ಎಲ್ಲಾ ಸಮಯದಲ್ಲಿ ಭ್ರಮೆಯಲ್ಲಿಯೇ ಇರುತ್ತಾರೆ.ಇನ್ನೊಬ್ಬರ ಸ್ಥಾನದಲ್ಲಿ ನಿಂತು ಇವರು ಯೋಚಿಸಲಾರರು. ಇಂಥವರಿಗಾಗಿಯೆ “ನಯವಾಗಲಿ,ಭಯವಾಗಲಿ,ಇಲ್ಲದವ ಧರ್ಮವೇನು ಮಾಡಿಯಾನು?” ಎಂಬ ಗಾದೆಯ ಮಾತುಗಳು ಹುಟ್ಟಿಕೊಂಡಿವೆ.
ವ್ಯಕ್ತಿಯೊಬ್ಬನ ಬಾಹ್ಯ ನಡವಳಿಕೆ (ನಯ) ಮತ್ತು ಆಂತರಿಕ ಗುಣ (ದಯೆ) ಇಲ್ಲದಿದ್ದರೆ ಅವನು ಮಾಡುವ ಯಾವುದೇ ಧಾರ್ಮಿಕ ಕಾರ್ಯಗಳು ವ್ಯರ್ಥ ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತದೆ.
ನಯವು ನಡತೆಯ ಲಕ್ಷಣ
’ನಯ’ ಎಂದರೆ ವಿನಯ, ನಮ್ರತೆ ಮತ್ತು ಮಾತಿನ ಮಾಧುರ್ಯ. ಒಬ್ಬ ವ್ಯಕ್ತಿ ಎಷ್ಟೇ ಪರಿಣಿತನಾದರೂ, ಎಷ್ಟೇ ಶ್ರೀಮಂತನಾಗಿದ್ದರೂ ಅವನಲ್ಲಿ ವಿನಯವಿಲ್ಲದಿದ್ದರೆ ಅವನಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ.
“ಮಾತು ಮುತ್ತಿನ ಹಾರದಂತಿರಬೇಕು”ಎಂದು ವಿಶ್ವಗುರು ಬಸವಣ್ಣನವರು ಹೇಳಿದ್ದಾರೆ. ನಯವಾದ ಮಾತು ಕಠಿಣ ಮನಸ್ಸನ್ನೂ ಕರಗಿಸುತ್ತದೆ. ಅಹಂಕಾರದಿಂದ ವರ್ತಿಸುವವನು ಎಲ್ಲರಿಂದ ದೂರವಾಗುತ್ತಾನೆ. ವಿನಯವಂತನು ಎಲ್ಲರನ್ನೂ ಪ್ರೀತಿಯಿಂದ ಗೆಲ್ಲುತ್ತಾನೆ. ನಯವಿಲ್ಲದವನ ಭಕ್ತಿ ಅಥವಾ ಧರ್ಮವು ಕೇವಲ ಪ್ರದರ್ಶನವಾಗಿ ಉಳಿಯುತ್ತದೆ.
”ದಯವಿಲ್ಲದ ಧರ್ಮವದಾವುದಯ್ಯಾ?” ಎಂಬ ವಚನದ ಸಾಲು ಈ ಗಾದೆಗೆ ಪೂರಕವಾಗಿದೆ. ದಯೆ ಎಂದರೆ ಕೇವಲ ಮನುಷ್ಯರ ಮೇಲಷ್ಟೇ ಅಲ್ಲ, ಪ್ರಾಣಿ-ಪಕ್ಷಿ ಹಾಗೂ ಸಕಲ ಜೀವರಾಶಿಗಳ ಮೇಲೆ ತೋರುವ ಕರುಣೆ. ಮನಸ್ಸಿನಲ್ಲಿ ಕ್ರೌರ್ಯವನ್ನು ಇಟ್ಟುಕೊಂಡು, ಕೈಯಲ್ಲಿ ಜಪಸರ ಹಿಡಿದು ಕುಳಿತುಕೊಂಡರೆ ಅದು ಧರ್ಮವಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಗುಣವೇ ನಿಜವಾದ ದಯೆ. ಭಯಪಡಿಸುವವರು ಈಗ ಈ ಭೂಮಿಯ ಮೇಲೆ ಫಾರಂ ಕೋಳಿ, ಹುಂಜದಂತೆ ಹುಟ್ಟುತ್ತಿದ್ದಾರೆ.ಇವರ ಜೀವನದುದ್ದಕ್ಕೂ ಪಾಪ ಪ್ರಜ್ಞೆಯಲ್ಲಿಯೆ ಇರುತ್ತಾರೆ.ಇಂತವರಿಗೆ ದಂಡಿಸುವುದು ಯಾವಾಗಲೂ ಯಾತನಾದಾಯಕ ಅನುಭವ. ಇವರಿಗೆ ತಿದ್ದುವ ಕಾಲವು ಕಾಲವೆ ನಿರ್ಣಯಿಸುತ್ತದೆ.
ಅದರಾಚೆ ಕೆಲವು ಜನರಿದ್ದಾರೆ. ಲಕ್ಷಗಟ್ಟಲೆ ರೂಪಾಯಿಗಳನ್ನು ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ನೀಡುತ್ತಾರೆ.ಹಾಗೆಯೇ ಫೋಟೋ ತೆಗೆಸಿಕೊಳ್ಳುತ್ತಾರೆ ಚುನಾವಣೆಗಳು ಬಂದರೆ ಸಾಕು.ಹೀಗೇ ಧರ್ಮಾಧಿಕಾರಿಗಳ ಹಾಗೆ ತುಪ್ಪದಲ್ಲಿ ಎಳೆ ತೆಗೆದಂತೆ ನಾಜೂಕಾಗಿರುತ್ತಾರೆ.ಆದರೆ ಅಕ್ಕಪಕ್ಕದ ಹಿರಿಯರನ್ನು ಅಥವಾ ತಮ್ಮ ಮನೆಯ ಕೆಲಸಗಾರರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಧರ್ಮಕ್ಕೆಲ್ಲಿದೆ ಬೆಲೆ.
ನಯ ಮತ್ತು ದಯೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮನುಷ್ಯನಿಗೆ ಹೊರಗಿನ ನಡವಳಿಕೆಯಲ್ಲಿ ‘ನಯ’ ಮತ್ತು ಒಳಗಿನ ಮನಸ್ಸಿನಲ್ಲಿ ‘ದಯೆ’ ಇರಬೇಕು. ಈ ಎರಡು ಗುಣಗಳಿಲ್ಲದವನು ಎಷ್ಟೇ ಧಾರ್ಮಿಕ ವಿಧಿ-ವಿಧಾನಗಳನ್ನು ಪಾಲಿಸಿದರೂ ಅದು ನಾಯಿ ಮುಕಳಿಯಲ್ಲಿ ಜೇನು ಇಟ್ಟ ಹಾಗೆ.
ನಿಜವಾದ ಧರ್ಮವು ಮನುಷ್ಯನ ಸಂಸ್ಕಾರದಲ್ಲಿ ಅಡಗಿದೆಯೇ ಹೊರತು ಕೇವಲ ಆಡಂಬರದಲ್ಲಿರುವುದಿಲ್ಲ
”ಕೊಲ್ಲುವವನೇ ಮಾದಿಗ, ಹೊಲಸು ತಿನ್ನುವವನೇ ಕುಲಹೀನ”: ಅಂದರೆ ಪ್ರಾಣಿಹಿಂಸೆ ಮಾಡುವವನು ಅಥವಾ ದಯೆಯಿಲ್ಲದವನೇ ನಿಜವಾದ ಅರ್ಥದಲ್ಲಿ ಹೀನ ಕುಲದವನು. ”ಧರ್ಮವೇ ಜಯದ ಮೂಲ”: ಧರ್ಮವೆಂದರೆ ಇಲ್ಲಿ ಕೇವಲ ಆಚರಣೆಯಲ್ಲ, ಅನ್ಯರಿಗೆ ಕೆಡುಕನ್ನು ಬಯಸದ ‘ದಯಾ’ ಗುಣವೇ ಜಯವನ್ನು ತಂದುಕೊಡುತ್ತದೆ.
”ವಿದ್ಯೆ ವಿನಯವನ್ನು ಕೊಡುತ್ತದೆ”: ಹಾಗೆಯೇ ಜ್ಞಾನ ಮತ್ತು ಗುಣವಂತಿಕೆ ಹೆಚ್ಚಾದಂತೆ ಮನುಷ್ಯ ಹೆಚ್ಚು ವಿನಯಶೀಲನಾಗುತ್ತಾನೆ.
”ಮಾತು ಮುತ್ತಿನ ಹಾರದಂತಿರಬೇಕು”: ಮಾತಿನಲ್ಲಿ ನಯವಿರಬೇಕು, ಅದು ಇತರರ ಮನಸ್ಸನ್ನು ನೋಯಿಸುವಂತಿರಬಾರದು.
”ಮನಸ್ಸು ಮಹಾದೇವ”: ಅಂತರಂಗದ ದಯೆಯೇ ದೇವರು. ಒಳಗೊಂದು ಹೊರಗೊಂದು ಇರಬಾರದು.
“ಕೇವಲ ‘ನಯವಿಲ್ಲದವನು ದಯವಿಲ್ಲದವನು’ ಮಾತ್ರವಲ್ಲದೆ, ನಮ್ಮ ಹಿರಿಯರು ‘ದಯೆಯೇ ಧರ್ಮದ ಮೂಲ’ವೆಂದು ಸಾರಿದ್ದಾರೆ. ಬಾಗುವ ಮರಕ್ಕೆ ಹಣ್ಣು ಹೆಚ್ಚು ಎಂಬಂತೆ ಮನುಷ್ಯನು ವಿನಯವಂತನಾದಾಗ ಮಾತ್ರ ಧರ್ಮ ಅವನನ್ನು ರಕ್ಷಿಸುತ್ತದೆ.”
••••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

