ಗೋಕಾಕ – ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಮಠದ ಸ್ವಾಮೀಜಿ ಪ್ರಕರಣವು ಸ್ವಾಮೀಜಿಗಳು ಮತ್ತು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಸುಖ್ಯಾಂತವಾಗಿದ್ದು,, ಸ್ವಾಮಿಗಳ ಮೇಲೆ ಬಂದಿರುವ ಆರೋಪಗಳನ್ನು ತಳ್ಳಿ ಹಾಕಲಾಗಿದೆ ಹೀಗಾಗಿ ಶುಕ್ರವಾರದಿಂದ ಮಠದ ಧಾರ್ಮಿಕ ಕಾರ್ಯಗಳಲ್ಲಿ ಶ್ರೀ ಗಳು ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು, ಶೂನ್ಯ ಸಂಪಾದನ ಮಠದ ಸ್ವಾಮೀಜಿ, ಅಡವಿ ಸಿದ್ದೇಶ್ವರ ಮಠದ ಸಿದ್ಧರಾಮ ಶ್ರೀಗಳು ಗೋಕಾಕ, ಮೂಡಲಗಿ ಮತ್ತು ರಾಯಬಾಗ ತಾಲೂಕಿನ ಎಲ್ಲ ಸ್ವಾಮೀಜಿಗಳು ಹಾಗೂ ಕಿಕ್ಕಿರಿದು ಸೇರಿದ್ಧ ಭಕ್ತರ ಸಮ್ಮುಖದಲ್ಲಿ ಮಾತನಾಡಿ, ಶಿವಾಪೂರ (ಹ) ಶ್ರೀಗಳ ಮೇಲೆ ಆರೋಪ ಮಾಡಲಾಗಿತ್ತು. ಅದರ ಬಗ್ಗೆ ಮೂಡಲಗಿ ಪೊಲೀಸರಿಂದ ತನಿಖೆ ಮಾಡಿಸಲಾಗಿ ಈ ಆರೋಪವು ಸುಳ್ಳೆಂದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸರ ವರದಿಯನ್ನು ಆಧರಿಸಿ ಸ್ವಾಮೀಜಿಯವರನ್ನು ಮತ್ತೆ ಮಠಕ್ಕೆ ಸೇರಿಸಿ ಈ ಪ್ರಕರಣವನ್ನು ಸುಖಾಂತಗೊಳಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇನ್ನು ಮುಂದೆ ಮಠದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಿವಾಪೂರ ಗ್ರಾಮದ ಹಿರಿಯರಲ್ಲಿ ಕೂಡ ಅವರು ಮನವಿ ಮಾಡಿಕೊಂಡರು. ಈ ಮೂಲಕ ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಕ್ತ ಸಮೂಹದಲ್ಲಿ ಆತಂಕ ಸೃಷ್ಟಿಸಿದ್ದ ಶಿವಾಪೂರ ಅಡವಿ ಸಿದ್ದೇಶ್ವರ ಮಠದ ಸ್ವಾಮೀಜಿ ಪ್ರಕರಣವು ಸುಖಾಂತವಾದಂತಾಗಿದೆ.