ಕುರುಬರ ಕುಲಗುರು ಒಡೆಯರ ಶಾಖೆಯೊಂದರ ಪ್ರಮುಖ ಸಿದ್ಧ ಅಮೋಘಸಿದ್ಧ ಅಪ್ಪಟ ಜನಪದರ ದೈವ. ಈತನ ಮಟ್ಟಿಗೆ ಜನಪದರ ನಂಬಿಕೆಯೇ ಚರಿತ್ರೆ; ಭಂಡಾರದ ಮಳೆ ಸುರಿದಲ್ಲೇ ಜಾತ್ರೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನಮಾನಸದಲ್ಲಿ ಕುರುಬರ ಇನ್ನೋರ್ವ ಕುಲಗುರುವಾದ ರೇವಣಸಿದ್ಧರಷ್ಟೇ ಪ್ರಖ್ಯಾತನಾಗಿದ್ದಾನೆ. ಆದರೆ ರೇವಣಸಿದ್ಧನಿಗಿರುವಂತೆ ಈತನ ಕುರಿತು ಶಾಸನಾಧಾರಗಳಾಗಲಿ, ಶಿಷ್ಟಕಾವ್ಯಗಳಾಗಲಿ ಇಲ್ಲ. ಈತನ ಜೀವಂತಿಕೆ ಇರುವುದು ಜನಪದರ ಮೌಖಿಕ ಸಾಮಗ್ರಿಗಳಲ್ಲಿ. ಅಮೋಘಸಿದ್ಧನ ಮೂಲ ನೆಲೆ ವಿಜಯಪುರದಿಂದ ಹತ್ತನ್ನೆರಡು ಕಿಲೋ ಮೀಟರ್ ದೂರದ ಅರಿಕೇರಿ ಸಮೀಪದ ಮುಮ್ಮೆಟಗುಡ್ಡ. ಇವನ ಜಾತ್ರೆಯನ್ನು ಜನ ಇಂದಿಗೂ ಮುಮ್ಮಡಪ್ಪನ ಜಾತ್ರೆ ಎಂದೇ ಕರೆಯುತ್ತಾರೆ.
ಅಮೋಘಸಿದ್ಧನನ್ನು ಕೈಲಾಸದಲ್ಲಿ ಉದ್ಭವಿಸಿ ಭೂಲೋಕದಲ್ಲಿ ಅವತರಿಸಿದಂತೆ ಪಾರಂಪರಿಕ ಪುರಾಣ ಕಥನದಲ್ಲಿ ಕಲ್ಪಿಸಿಕೊಂಡಿರುವುದರಿಂದ ಈತ ಕಾಲಾತೀತನಾಗಿ ಗೋಚರಿಸುತ್ತಾನೆ. ಆ ಪ್ರಕಾರ ಈತ ಅವತರಿಸಿದ ನಂತರ ಉತ್ತರ ಭಾರತದ ಹಸ್ತಿನಾವತಿಯಲ್ಲಿ ಕೆಲ ದಿನವಿದ್ದು ಪಾಂಡವರು ಕೈಕೊಂಡ ಯಾಗದಲ್ಲಿ ಪಾಲ್ಗೊಳ್ಳುತ್ತಾನೆ. ಕುಂತಿಯಿಂದ ಸೇವೆ ಪಡೆದು ವಾರದ ಒಡೆಯ ಅನ್ನಿಸಿಕೊಳ್ಳುತ್ತಾನೆ.
ಅಮೋಘಸಿದ್ಧನ ಮಗನಾದ ಬಿಳಿಯಾನಿಸಿದ್ದನು ಕಲ್ಯಾಣಪಟ್ಟಣಕ್ಕೆ ಹೋಗಿ ಅಲ್ಲಿನ ಮಡಿವಂತ ಲಿಂಗಾಯತರಿಗೆ ನೀವೆಲ್ಲ ಕಟ್ಟುಲಿಂಗದವರಾದರೆ ನಾನು ಹುಟ್ಟುಲಿಂಗದವನು ಎಂಬುದನ್ನು ಸಾಬೀತುಪಡಿಸುತ್ತಾನೆ. ಅಮೋಘಸಿದ್ಧನ ಮೊದಲ ಮಗನಾದ ಅವತಾರ ಅವಧೂಸಿದ್ಧ ವಿಜಾಪುರದ ಶೇಖಾಶಾಹಿಗಳೊಂದಿಗೆ ಕಾದಾಡಿದ್ದು ಹಾಗೂ ಅಮೋಘಸಿದ್ಧನ ಮೊಮ್ಮಗನಾದ ಮಲಕಾರಿಸಿದ್ಧನು ಆನೆಗುಂದಿ ಅರಸರೊಂದಿಗೆ ಹಾಗೂ ಸುರಪುರದ ದೊರೆಗಳೊಂದಿಗೆ ಹಸು ಮೇಯಿಸುವ ಜಾಗೆಯ ವಿಷಯದಲ್ಲಿ ಹಾಕ್ಯಾಡಿದ ವಿವರ ಜನಪದ ಮೌಖಿಕ ಸಾಮಗ್ರಿಗಳಲ್ಲಿ ನೈಜವಾಗಿ ದೊರೆಯುತ್ತವೆ.
…ಹೀಗೆ ತಂದೆ-ಮಗ-ಮೊಮ್ಮಗ ಮೂರು ತಲೆಮಾರುಗಳ ಈ ಕಥನದಲ್ಲಿ ಹಸ್ತಿನಾವತಿಯ ದ್ವಾಪರಯುಗ, ಕಲ್ಯಾಣದ ಬಸವಯುಗ, ವಿಜಾಪುರದ ಶಾಹಿಕಾಲ, ಆನೆಗುಂದಿಯ
ವಿಜಯನಗರದ ಕಾಲ ಹಾಗೂ ಸುರಪುರದ ಪಾಳೆಗಾರರ ಕಾಲ ಸೇರಿದಂತೆ ವಿವಿಧ ಕಾಲಘಟ್ಟದಲ್ಲಿ ಇವರು ಗೋಚರಿಸುತ್ತಾರಾದ್ದರಿಂದ ಯಾವುದೇ ಕಾಲದ ಚೌಕಟ್ಟಿಗೆ ಸಿಗದೆ ಇಡೀ ಪರಂಪರೆ ಕಾಲಾತೀತವಾಗಿ ತೋರುತ್ತದೆ.
ಜನಪದರ ನಾಲಗೆಯ ನಂಬಿಕೆಗಳನ್ನೇ ನೆಚ್ಚಿ ತಲತಲಾಂತರಗಳಲ್ಲಿ ಹರಿದು ಬರುವ ಅಮೋಘಸಿದ್ದನ ಕಥನ ಪುರಾಣೀಕರಣಗೊಂಡು ಕಾಲದ ಹಂಗನ್ನು ಹರಿದುಕೊಳ್ಳುವ ಪರಿಯೇ ವಿಸ್ಮಯಕಾರಿಯಾದದ್ದು.ಈ ವಿಸ್ಮಯಕಾರಿ ಕಥನವನ್ನು ಅಮೋಘಸಿದ್ದ ಪರಂಪರೆಯ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿರುವ ಡಾ.ಚನ್ನಪ್ಪ ಕಟ್ಟಿಯವರು ಕಟ್ಟಿಕೊಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಶಿವಪ್ಪ-ಕಾಶಿಬಾಯಿ ದಂಪತಿಗಳ ಮಗನಾಗಿ ಶ್ರೀ ಯಲ್ಲಾಲಿಂಗರು ಜನಿಸಿದರು. ಬಾಲ್ಯದಿಂದಲೇ ಶಿವಧ್ಯಾನದಲ್ಲಿದ್ದ ಇವರು, ಮುಗಳಖೋಡದ ಸ್ಮಶಾನಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಭಿಕ್ಷಾಟನೆ, ಸಮಾಜ ಸೇವೆ ಹಾಗೂ ದಾಸೋಹದ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದ ಮಹಾ ಸಿದ್ಧಿಪುರುಷರು.
ಯಲ್ಲಾಲಿಂಗ ಮಹಾರಾಜರ ಜೀವನದ ಪ್ರಮುಖಾಂಶಗಳು:
ಬಾಲ್ಯದಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಯಲ್ಲಪ್ಪ, ಇಪ್ಪತ್ತರ ಹರೆಯದಲ್ಲಿ ಕುಸ್ತಿಪಟುವಾಗಿದ್ದರು. ಮನೆಯವರ ಒತ್ತಾಯದ ಮೇರೆಗೆ ಹೊನ್ನಮ್ಮ ಎಂಬುವರೊಂದಿಗೆ ವಿವಾಹವಾದರು. ಮುಗಳಖೋಡ ಗ್ರಾಮದ ಸ್ಮಶಾನ ಭೂಮಿಯನ್ನು ಮುಕ್ತಿ ಮಂದಿರವನ್ನಾಗಿ ಮಾಡಿಕೊಂಡು, ಅಧ್ಯಾತ್ಮಿಕ ಜೀವನ ನಡೆಸಿದರು. ಸಿದ್ಧಲಿಂಗರ ಆಶೀರ್ವಾದ ಪಡೆದಿದ್ದ ಯಲ್ಲಾಲಿಂಗರು, ಸುತ್ತಮುತ್ತಲಿನ ಗ್ರಾಮದ ಜನರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದರು.
ಮುಗಳಖೋಡ ಮಠ: ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆ ಮುಗಳಖೋಡದಲ್ಲಿದ್ದು, ಇದು ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 24 ಗಂಟೆಗಳ ಕಾಲ ದಾಸೋಹ (ಅನ್ನದಾನ) ನಡೆಯುತ್ತದೆ.
ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರು ಉತ್ತರದ ಕರ್ನಾಟಕದಲ್ಲಿ ಅತ್ಯಂತ ಪೂಜನೀಯರಾಗಿದ್ದು, ಅವರ ಜೀವನ ಸತ್ಯ, ಭಕ್ತಿ ಮತ್ತು ಸೇವಾ ಮನೋಭಾಕ್ಕೆ ಸಾಕ್ಷಿಯಾಗಿದೆ. ಅಮೋಘ ಸಿದ್ಧ ಪರಂಪರೆಯ ಶ್ರೀ ಸಿದ್ಧಲಿಂಗರ ಆಶೀರ್ವಾದ ಕೃಪೆಯಿಂದ ತಮ್ಮ ಬದುಕನ್ನು ಶಿವಯೋಗ ಸಾಧನಕ್ಕೆ ಮೀಸಲಿಟ್ಟವರು ಪೂಜ್ಯರಾದ ಶ್ರೀ ಯಲ್ಲಾಲಿಂಗರು. ಮುಗುಳಖೋಡ ಮುತ್ಯಾ ಎಂದು ಜನರು ಕರೆಯುತ್ತಿದ್ದರು.
ಮೈಲಾರಲಿಂಗ ಎಂದರೆ ಮೈಯಲ್ಲಿ ಆರು ಲಿಂಗ
ಗುರು ಲಿಂಗ ಜಂಗಮ ಲಿಂಗ ಹೀಗೆ. ಆದರೆ ಯಲ್ಲಾಲಿಂಗವೆಂದರೆ ಇಡೀ ಕಾಯ ಶರೀರವೇ ಲಿಂಗ ಎಲ್ಲವೂ ಲಿಂಗ ಎಂಬಂತೆ ಬಸವ ತತ್ವಕ್ಕೆ ಅನುಗುಣವಾಗಿ ಬಾಳಿ ಬದುಕಿದ ನಾವು ಕಂಡ ಶ್ರೇಷ್ಠ ಶಿವಯೋಗ ಸಾಧಕರು.
ಬಡವರ ಪಾಲಿನ ಆಶಾಕಿರಣ ಭಕ್ತರ ನಂಬಿಕೆಯ ಶ್ರೇಷ್ಠ ಶಿವಯೋಗ ಸಾಧಕರು ಯಲ್ಲಾಲಿಂಗರು. ಬಂದ ಭಕ್ತರಿಗೆ ಅಂಬಲಿ ನೀಡಿ ಪ್ರೀತಿ ಗೌರವ ವಿಶ್ವಾಸದಿಂದ ಮಾತನಾಡಿ ಅವರ ದುಗುಡ ದುಮ್ಮಾನಗಳನ್ನು ದೂರು ಮಾಡುತ್ತಿದ್ದರು. ಜಿಡಗಾ ಮುಗುಳಖೋಡ ಬೆಳಗಾವಿಯ ಶ್ರೀನಗರದಲ್ಲಿ ಇವರ ಮಠವಿದೆ.ಯಲ್ಲಾಲಿಂಗರ ನಂತರ ಶ್ರೀ ಸಿದ್ಧರಾಮಸ್ವಾಮಿಗಳು ಮತ್ತೆ ಈಗ ಶ್ರೀ ಡಾ ಮುರುಘರಾಜೇಂದ್ರ ಶ್ರೀಗಳು ತಮ್ಮ ದಿವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ.ಇಂತಹ ಪೂಜ್ಯರನ್ನು ಹೊಂದಿದ ನಮ್ಮ ಕರ್ನಾಟಕದ ನೆಲವೇ ಪಾವನ ಸುಕ್ಷೇತ್ರ.
ಇವರಿಗೆ ಭಕ್ತಿಪೂರ್ವಕ ಶರಣಾರ್ಥಿಗಳು.
________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ 9552002338

