ಬೆಳಗಾವಿ-ದೆಹಲಿ ನಡುವೆ ವಿಮಾನಯಾನ ಸೇವೆಗೆ ಸಂಸದ ಈರಣ್ಣ ಕಡಾಡಿ ಚಾಲನೆ

0
637

ಬೆಳಗಾವಿ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ದೆಹಲಿ ನೇರ ವಿಮಾನಯಾನ ಸಂಚಾರ ಹಾಗೂ ಕಾರ್ಗೋ (ಸರಕು) ಸೇವೆ ಕೂಡ ಪ್ರಾರಂಭವಾಗಿದ್ದು, ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಜನರಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಆಗಸ್ಟ್ 13 ರಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ-ದೆಹಲಿ ನೇರ ವಿಮಾನ ಸೇವೆ ಸ್ವಾಗತ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು, ದೆಹಲಿಗೆ ನೇರ ವಿಮಾನ ಸಂಪರ್ಕ ಹೊಂದಿದ ಉತ್ತರ ಕರ್ನಾಟಕದ ಮೊದಲ ವಿಮಾನ ನಿಲ್ದಾಣ ಎನ್ನುವ ಕೀರ್ತಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಿಗುತ್ತದೆ ಎಂದರು.

ದೆಹಲಿ ಸಂಪರ್ಕದಿಂದ ಉತ್ತರ ಕರ್ನಾಟಕದ ಜನರಿಗೆ ಶಿಕ್ಷಣಕ್ಕಾಗಿ ಇಲ್ಲಿಗೆ ಬರುವ ಮತ್ತು ಉತ್ತರ ಭಾರತಕ್ಕೆ ಹೊಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ಮೊದಲು ಪ್ರವಾಸಿಗರು ಬೆಂಗಳೂರು, ಮುಂಬೈ, ಹೈದರಾಬಾದಗೆ ತರಳಿ ಅಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದರು. ಇದೀಗ ಬೆಳಗಾವಿಯಿಂದ ನೇರವಾಗಿ ದೆಹಲಿಗೆ ತೆರಳಿ ಪ್ರಸಿದ್ದ ಪ್ರವಾಸಿ ಸ್ಥಳಗಳಾದ ಜಮ್ಮು ಕಾಶ್ಮೀರ್, ಅಯೋಧ್ಯೆ, ಆಗ್ರಾ, ಮಥುರಾ, ಬೃಂದಾವನ್, ಬದ್ರಿನಾಥ, ಕೇದಾರನಾಥ, ವೈಷ್ಣವಿದೇವಿ ಸೇರಿದಂತೆ ಇತರ ರಾಜ್ಯಗಳಿಗೆ ಮತ್ತು ಪ್ರವಾಸಿ ತಾಣಗಳಗೆ ಹೋಗಲು ಸುಲಭವಾಗಲಿದೆ. ಬೆಳಗಾವಿ ಉದ್ಯಮಕ್ಕೂ ಉತ್ತರ ಭಾರತದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಭಾರತೀಯ ಸೇನೆಯಲ್ಲಿ ಇರುವ ಸೈನಿಕರಿಗೆ ಅನುಕೂಲವಾಗಲಿದ್ದು ಈ ಮೂಲಕ ಬೆಳಗಾವಿ ವಿಮಾನ ನಿಲ್ದಾಣ ರಾಜ್ಯದ ಗಮನ ಸೆಳೆಯಲಿದೆ ಎಂದರು.

ಬೆಳಗಾವಿ-ದೆಹಲಿ ನಡುವೆ ವಾರದಲ್ಲಿ ಎರಡು ದಿನ ಸಂಚರಿಸಲಿದ್ದು, ಪ್ರತಿ ಸೋಮವಾರ ಮತ್ತು ಶುಕ್ರವಾರ ಮಾತ್ರ ಸೇವೆಗೆ ಅನುಕೂಲವಾಗಿದೆ, ಆಗಸ್ಟ್ 20 ರಿಂದ ಪ್ರತಿ ದಿನ ಬೆಳಗಾವಿ-ಬೆಂಗಳೂರ ತಡೆರಹಿತ ವಿಮಾನ ಸೇವೆ ಪ್ರಾರಂಭವಾಗಲಿದ್ದು, ಬೆಳಿಗ್ಗೆ 8 ಗಂಟೆಗೆ ಬೆಳಗಾವಿಯಿಂದ ಹೊರಟು ಬೆಳಿಗ್ಗೆ 9.25 ಗಂಟೆಗೆ ಬೆಂಗಳೂರು ತಲುಪಲಿದೆ. ಇದನ್ನು ಸ್ಪೈಸ್ ಜೆಟ್ ವಿಮಾನ ಸೇವಾ ಸಂಸ್ಥೆ ಪ್ರಾರಂಭಿಸಲಿದೆ ಎಂದರು.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ, ಪ್ರತಾಪ್ ದೇಸಾಯಿ, ಸ್ಪೈ ಸ್ ಜೆಟ್ ವಿಮಾನ ಸೇವಾ ಸಂಸ್ಥೆಯ ಮ್ಯಾನೇಜರ್ ನಿಯಾಜ್ ಶಿರಟ್ಟಿ, ಡಾ. ವಿವೇಕ ಸಾವಜಿ, ರಾಕೇಶ ಮುಧೋಳ, ಬೆಳಗಾವಿ ವಿಮಾನ ನಿಲ್ಧಾಣ ಸಿಪಿಐ ಈರಪ್ಪ ವಾಲಿ, ಆರ್. ಎಸ್. ಮುತಾಲಿಕ, ತಮ್ಮಣ್ಣ ದೇವರ, ಶ್ರೀಕಾಂತ ಕೌಜಲಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.