ಡಿ.ಎಸ್. ವೀರಯ್ಯ ಅವರ ʼಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳುʼ ಕೃತಿ ಬಿಡುಗಡೆ
ಬೆಂಗಳೂರು – ರಾಜಕಾರಣ ಮತ್ತು ಧರ್ಮ ಎರಡೂ ಪ್ರಸ್ತುತ ಸಂದರ್ಭದಲ್ಲಿ ಪ್ರಶ್ನಾತೀತ ನೆಲೆಗೆ ತಲುಪುತ್ತಿವೆಯೇನೋ ಎನ್ನುವ ಅನುಮಾನ ಬಲವಾಗಿದೆ. ಈ ವೇಳೆ ಜನಸಾಮಾನ್ಯ ಅನುಭವಿಸುತ್ತಿರುವ ಬಿಕ್ಕಟ್ಟುಗಳಿಂದ ಬಿಡುಗಡೆ ಪಡೆಯಲು ಡಿ.ಎಸ್. ವೀರಯ್ಯನವರು ಚಿಂತನೆ ನಡೆಸಿದ್ದಾರೆ.ಅನೇಕ ವರ್ಷಗಳಿಂದ ಅಂಬೇಡ್ಕರ್ ಅವರ ಸಿದ್ದಾಂತಗಳ ಬಗೆಗೆ ಅಧ್ಯಯನ ನಡೆಸಿ ಅದರ ಸಾರವನ್ನು ಸರಳವಾಗಿ ಪುಸ್ತಕ ರೂಪದಲ್ಲಿ ತರುವಲ್ಲಿ ವೀರಯ್ಯನವರು ಯಶಸ್ಸು ಸಾಧಿಸಿದ್ದಾರೆ ಎಂಬುದಾಗಿ ಬಿ.ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಅವರು ನುಡಿದರು.
ಬೆಂಗಳೂರಿನ ಡಿ.ಎಸ್.ವಿ ಫೌಂಡೇಷನ್ ಅವರ ಆಶ್ರಯದಲ್ಲಿ ಲೇಖಕ ಡಿ.ಎಸ್. ವೀರಯ್ಯ ಅವರ ʼಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳುʼ ಕೃತಿ ಬಿಡುಗಡೆ ಸಮಾರಂಭ 2022 ಫೆಬ್ರವರಿ 26ರಂದು ಬೆಂಗಳೂರಿನ ಜೆ.ಪಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ನೆರೆವೇರಿದ್ದು ಈ ವೇಳೆ ಅವರು ಮಾತನಾಡಿದರು.
ಭಾರತದಲ್ಲಿ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಸಿದ್ದಾಂತ, ಚಿಂತನೆಗಳಿಗೆ ಸಿಗಬೇಕಿದ್ದ ಗೌರವ ಸಿಕ್ಕಿಲ್ಲ..ನಮ್ಮ ದೇಶ ಅವರನ್ನು ಅಷ್ಟಾಗಿ ಗುರುತಿಸಿಲ್ಲವಾದರೂ ವಿಶ್ವ ಸಂಸ್ಥೆ ಅವರನ್ನು ಗುರುತಿಸಿದೆ..ಆಕ್ಸಫರ್ಡ್ ವಿಶ್ವ ವಿದ್ಯಾಲಯ ಗುರುತಿಸಿ ಗೌರವಿಸಿದೆ. ಇದನ್ನು ಗಮನದಲ್ಲಿರಿಸಿಕೊಂಡು ಡಿ.ಎಸ್. ವೀರಯ್ಯನವರು ಅಂಬೇಡ್ಕರ್ ಹಾದಿಯಲ್ಲಿ ಮುನ್ನಡೆದು, ಅವರ ಸಂದೇಶಗಳನ್ನು ಜಗತ್ತಿಗೆ ಸಾರುತ್ತಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಅಂಬೇಡ್ಕರ್ ಹಾಗೂ ಅವರ ಚಿಂತನೆಗಳನ್ನು ನಾಲಿಗೆಗೆ ಸೀಮಿತವಾಗಿರಿಸದೆ ಹೃದಯದೊಳಕ್ಕೆ ಬಿಟ್ಟುಕೊಂಡವರು ಮಾತ್ರ ಸಮಾಜದಲ್ಲಿ ಉತ್ತಮ ಬದಲಾವಣೆಯನ್ನು ತರುವವರಾಗುತ್ತಾರೆ. ಇಂತಹ ಕೆಲಸ ವೀರಯ್ಯನವರಿಂದ ಸಾಧ್ಯವಾಗಿದೆ ಎಂಬುದಾಗಿ ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಕೃತಿ ಬಿಡುಗಡೆಗೊಳಿಸಿದ ಸಹಕಾರ ಸಚಿವ ಎಸ್.ಐ. ಸೋಮಶೇಖರ್ ಅವರು ಮಾತನಾಡಿ, ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಸಹ ಅಂಬೇಡ್ಕರ್ ಕೃತಿಯನ್ನು ಓದುವಂತಾಗಬೇಕು..ಸರ್ಕಾರವೇ ಪುಸ್ತಕಗಳನ್ನು ಕೊಂಡುಕೊಂಡು ಸರ್ಕಾರಿ ಗ್ರಂಥಾಲಯ ಹಾಗೂ ಶಾಲಾ ಕಾಲೇಜುಗಳಿಗೆ ಹಂಚುವ ಕೆಲಸ ಮಾಡಲಿದೆ. ಆದರೆ ಅದರ ಸದ್ಬಳಕೆ ಮಾಡುವುದು ಜನತೆಯ ಕೈಯಲ್ಲಿದೆ ಎಂಬುದಾಗಿ ಹೇಳಿದರು.
ಬರಹಗಳ ಮೂಲಕ ಸಮಾಜದ ಶುದ್ಧೀಕರಣ:
ಲೇಖಕರ ಪರಿಚಯವನ್ನು ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ, ಲೇಖಕ ಹಾಗೂ ಚಲನಚಿತ್ರ ನಿರ್ದೇಶಕರು ಪ್ರೊ. ದೊಡ್ಡರಂಗೇಗೌಡ ಅವರು ಮಾತನಾಡಿ, ಸಂಘಟನೆಗೆ ಮತ್ತೊಂದು ಹೆಸರಾದ ವೀರಯ್ಯನವರ ಬರವಣಿಗೆಯಲ್ಲಿ ಸಮಾಜದ ಬಗೆಗಿನ ಅಪಾರ ಕಾಳಜಿ ಎದ್ದು ಕಾಣುತ್ತದೆ. ಬರಹಗಳ ಮೂಲಕ ಸಮಾಜದ ಶುದ್ಧೀಕರಣವನ್ನು ಮಾಡಿದ ಅಂಬೇಡ್ಕರ್ ಅವರನ್ನು ಅನುಸರಿಸಿರುವ ವೀರಯ್ಯನವರು ಅಂಬೇಡ್ಕರ್ ಸಿದ್ದಾಂತಗಳನ್ನು ತುಂಬಿರುವ ಈ ಪುಸ್ತಕವನ್ನು ಪ್ರತಿ ಮನೆ ಮನೆಗೆ ತಲುಪಿಸುವಂತಾಗಬೇಕು. ಅದಕ್ಕೆ ಸರ್ಕಾರ ನೆರವಾಗಬೇಕು ಎಂಬುದಾಗಿ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಪ್ರೊ. ಮಲ್ಲೇಪುರಂ ಜೆ. ವೆಂಕಟೇಶ್ ಅವರು, ಮಲಗಿರುವ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ವೀರಯ್ಯನವರು ತಮ್ಮ ಸಾಹಿತ್ಯದ ಮೂಲಕ ಮಾಡುತ್ತಿದ್ದಾರೆ.ಮಾನಸಿಕವಾಗಿ, ವಿವೇಕ ಹಾಗೂ ಜ್ಞಾನದ ಎಚ್ಚರ ಸದಾ ಇರಬೇಕು..ಸಮಾಜವನ್ನು ಕಟ್ಟಿ, ಬೆಳೆಸುವ ನಿಟ್ಟಿನಲ್ಲಿ ಅಂಬೇಡ್ಕರ್ ಚಿಂತನೆಗಳು ಬುನಾದಿ ಹಾಕಿಕೊಟ್ಟಿದ್ದು, ಅದನ್ನು ಅನುಸರಿಸಿಕೊಂಡು ಮುನ್ನಡೆಯುವ ಶ್ರದ್ಧೆ ಇಂದಿನ ಯುವ ಜನತೆಯಲ್ಲಿ ಇರಬೇಕು ಎಂಬುದಾಗಿ ಕರೆ ಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃತಿಯ ಲೇಖಕರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ನ ಅಧ್ಯಕ್ಷರು ಡಿ.ಎಸ್. ವೀರಯ್ಯ ಅವರು ಮಾತನಾಡಿ, ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳು’ ಕೃತಿಯ ಮೂಲಕ ಅಂಬೇಡ್ಕರ್ ಸಂದೇಶಗಳನ್ನು ಬಿತ್ತುವ ಪ್ರಯತ್ನವನ್ನು ಮಾಡಿದ್ದೇನೆ. ಅದು ಬೆಳೆದು, ಹೆಮ್ಮರವಾಗಿ ಫಲ ನೀಡಲು ಸಮಾಜ ನನ್ನೊಂದಿಗೆ ನಿಂತುಕೊಳ್ಳಬೇಕಿದೆ. ಈ ಮೂಲಕ ಹೊಸ ಬಗೆಯ ಸಮಾಜವನ್ನು ಕಟ್ಟುವ ಪ್ರಯತ್ನಕ್ಕೆ ಸಹಕರಿಸಿ ಎಂದು ಕರೆ ಕೊಟ್ಟರು.
ಗುಣವಂತ ಮಂಜು ಅವರು ನಿರೂಪಿಸಿದರು. ಎಂ. ನಾಗರಾಜ ಸ್ವಾಗತಿಸಿದರು.