ಹಣಕಾಸು ಸಚಿವರು, ಅಹಿಂದ ಎಂಬ ಬಡ ವರ್ಗದ ಅಧಿಕೃತ ವಕ್ತಾರರೆಂದು ತಮ್ಮನ್ನೇ ತಾವು ಕರೆದುಕೊಳ್ಳುವ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ನಿಮಗೆ ನಮಸ್ಕಾರಗಳು.
ತಾವೇನೋ ಅಧಿಕಾರದ ಗದ್ದುಗೆ ಹಿಡಿಯಲೆಂದು ಬಡವರ ಉದ್ಧಾರದ ಘೋಷಣೆಗಳನ್ನು ಮಾಡಿ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ, ಉಚಿತ ಕರೆಂಟ್, ಉಚಿತವಾದ ಬಸ್, ಹತ್ತು ಕೆಜಿ ಅಂತ ಹೇಳಿ ಐದು ಕೇಜಿ ಅಕ್ಕಿಯ ಹಣ ಕೆಲವೇ ಕೆಲವು ಜನರಿಗೆ ಕೆಲವೇ ಕೆಲವು ತಿಂಗಳು ಕೊಟ್ಟಂತೆ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ದೊಡ್ಡದಾಗಿ ಜಾಹೀರಾತು ಹಾಕಿಕೊಂಡು ರಾಜ್ಯದ ಬೊಕ್ಕಸದ ಅಪಾರ ಹಣವನ್ನು ವ್ಯಯ ಮಾಡಿದಿರಿ ನಿಜ ಆದರೆ ಉಚಿತ ಕೊಡಲು ಹಣ ಸಾಲದೆ ಒಮ್ಮಿಂದೊಮ್ಮೆಲೆ ಅನೇಕ ರೀತಿಯಲ್ಲಿ ಬೆಲೆಯೇರಿಕೆ ಮಾಡಿ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಜನರಿಗೆ ಕೊರಳಿಗೆ ಉರುಳು ತಂದಿಟ್ಟಿದ್ದು ಅಷ್ಟೇ ನಿಜ ಸರ್.
ತಾವು ಹಣಕಾಸು ಸಚಿವರಾಗಿ ಕೆಲಸ ಮಾಡಿದವರು. ಬೊಕ್ಕಸಕ್ಕೆ ಯಾವ ರೀತಿಯಲ್ಲಿ ಹಣ ತರಬೇಕು ಅದನ್ನು ಯಾವ ರೀತಿ ಕೆಲಸ ಮಾಡಬೇಕು ಎಂಬುದು ತಮಗೆ ತಿಳಿದಿರುತ್ತದೆ. ಆದರೆ ಶತಾಯಗತಾಯ ಅಧಿಕಾರಕ್ಕೆ ಬರಲೇಬೇಕೆಂಬ ಹುಡದಿಯಲ್ಲಿ ಜನರಿಗೆ ಉಚಿತಗಳ ರುಚಿ ಹಚ್ಚಿದಿರಿ. ಒಂದಂತೂ ಸತ್ಯ, ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ನೀವು ಅಧಿಕಾರಕ್ಕೆ ಬರುವ ಬಗ್ಗೆ ನಿಮಗೇ ಗ್ಯಾರಂಟಿ ಇರಲಿಲ್ಲ. ಅದಕ್ಕಾಗಿಯೇ ಕೊನೆಯ ಅಸ್ತ್ರವಾಗಿ ಈ ಉಚಿತ ಗ್ಯಾರಂಟಿಗಳನ್ನು ಪ್ರಯೋಗಿಸಿದಿರಿ ಅದರಲ್ಲಿ ಯಶಸ್ವಿಯೂ ಆದಿರಿ. ಆದರೆ ರಾಜ್ಯದ ಬೊಕ್ಕಸದ ಗತಿಯೇನು ? ಎಂಬ ಬಗ್ಗೆ ತಾವು ಮೊದಲು ವಿಚಾರ ಮಾಡಿರಲಿಲ್ಲ. ಅಧಿಕಾರಕ್ಕೆ ಬಂದ ಮೇಲೆಯೇ ನಿಮ್ಮ ಸರ್ಕಾರಕ್ಕೆ ಒಂದು ರೀತಿಯ ಅಚ್ಚರಿ ಹಾಗೂ ಅಪನಂಬಿಕೆ ಮೂಡಿತ್ತು ಈಗ ನುಡಿದಂತೆ ನಡೆಯಬೇಕಾದ ಅನಿವಾರ್ಯತೆ ಇತ್ತು.
ಕರೆಂಟ್ ಬಿಲ್ ನಲ್ಲಿ ಕರಾರುಗಳು ಬಂದು ಕುಳಿತವು, ಅಕ್ಕಿ ಕೇಂದ್ರದಿಂದ ಸಿಗುತ್ತಿಲ್ಲ ಎಂಬ ನೆಪ ಹೇಳುತ್ತ ಸರಿಯಾಗಿಯೇ ಕೇಂದ್ರದ ಕಡೆಗೆ ಬಾಣ ಬಿಟ್ಟು ಅಕ್ಕಿಯ ಬದಲಿಗೆ ಹಣ ಕೊಡತೊಡಗಿದಿರಿ ಇನ್ನು ಮಹಿಳೆಯರ ಬಸ್ ಪ್ರಯಾಣಕ್ಕೂ ಕತ್ತರಿ ಬೀಳುತ್ತಿತ್ತು ಆದರೆ ಅದಾಗಲೇ ರಾಜ್ಯದ ಮಹಿಳೆಯರು ಅಗ್ರೆಸ್ಸಿವ್ ಆಗಿದ್ದರಿಂದ ಜೇನು ಗೂಡಿಗೆ ಕಲ್ಲು ಎಸೆಯುವುದು ಬೇಡ ಅಂತ ಸುಮ್ಮನಾದಿರಿ. ವೃದ್ಧರಿಗೆ, ಮಕ್ಕಳಿಗೆ ಶಾಲಾ ಮಕ್ಕಳಿಗೆ ಕಣ್ಣೀರು ಹಾಕುವ ಪರಿಸ್ಥಿತಿ ಬರುವಂತಾಯಿತು.
ಮಾನ್ಯರೆ, ನಿಮ್ಮ ಉಚಿತಗಳಿಂದ ಬಡವರ ಉದ್ಧಾರ ಅಂತ ತಾವೇನು ತಿಳಿದಿದ್ದೀರಲ್ಲ ಅದು ತೀರ ಬುಲ್ ಶಿಟ್ ಅಂತ ನಿಮಗೂ ಗೊತ್ತು ಆದರೂ ಸುಮ್ಮನಿರಬೇಕಾದ ಅನಿವಾರ್ಯತೆ ತಮಗೆ. ತಿಂಗಳಿಗೆ ಎರಡು ಸಾವಿರ ರೂಪಾಯಿ ಮಹಿಳೆಯರಿಗೆ ಕೊಟ್ಟರೆ, ಐದು ಕೆಜಿ ಅಕ್ಕಿ ಕೊಟ್ಟರೆ, ತಿರುಗಾಡಲು ಬಸ್ ಫ್ರೀ ಕೊಟ್ಟರೆ ಬಡತನ ನಿರ್ಮೂಲನೆಯಾಗುತ್ತದೆ ಎಂದು ತಮ್ಮ ಯಾವ ಆರ್ಥಿಕ ನೀತಿ ಹೇಳಿದೆ ಸರ್ ? ಬದಲಾಗಿ ಇಂಥ ವ್ಯವಸ್ಥೆಯಿಂದ ಆರ್ಥಿಕ ನೀತಿಯೇ ಬುಡಮೇಲಾಗುತ್ತದೆಯೆಂಬುದು ತಮಗೆ ತಿಳಿಯದ ವಿಷಯವೇ ? ಸರ್, ನಿಮ್ಮ ಈ ಉಚಿತಗಳನ್ನು ಕೊಡಲು ತಿಣುಕಾಡುತ್ತಿರುವ ನೀವು ಎಲ್ಲಾದರ ಬೆಲೆಗಳನ್ನು ಹೆಚ್ಚು ಮಾಡಿ ನಿಮ್ಮದೇ ಅಹಿಂದ ವರ್ಗವನ್ನು ಆರ್ಥಿಕ ಪ್ರಪಾತಕ್ಕೆ ತಳ್ಳುತ್ತಿದ್ದೀರಿ ಅಂತ ಅನ್ನಿಸುವುದಿಲ್ಲವೆ ?
ಈಗ ನೋಡಿ, ತೈಲದ ಮೇಲಿನ ತೆರಿಗೆ ಹೆಚ್ಚು ಮಾಡಿ ಒಮ್ಮೆಲೆ ದರ ಹೆಚ್ಚಾಯಿತು. ಅದರಿಂದ ಸಂಬಂಧಪಟ್ಟ ಎಲ್ಲಾ ವಸ್ತುಗಳು, ಸಾರಿಗೆ ದರಗಳು ಹೆಚ್ಚಾಗುತ್ತವೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿವೆ. ಆಸ್ತಿ ತೆರಿಗೆ ಹೆಚ್ಚಿಸಿದಿರಿ ಮಧ್ಯಮ ವರ್ಗದವರು ಒಂದು ಸಣ್ಣ ನಿವೇಶನ ಖರೀದಿ ಮಾಡದಂತಾಯಿತು. ಮನೆ ಕಟ್ಟುವ ಕನಸಂತೂ ದೂರವೇ ಉಳಿಯಿತು.ಸಾರಿಗೆ ವ್ಯವಸ್ಥೆಯ ಮೇಲೆ ಅವಲಂಬಿತರಾಗಿ ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡಿರುವ ನಿಮ್ಮ ಅಹಿಂದ ವರ್ಗದವರೇ ಈಗ ನರಳುವಂತಾಯಿತು.
ಮಹಿಳೆಯರಿಗೆ ಬಸ್ ಉಚಿತ ಮಾಡಿದ್ದರಿಂದ ಆಟೋರಿಕ್ಷಾ, ಕ್ಯಾಬ್ ಇಟ್ಟುಕೊಂಡು, ಖಾಸಗಿ ಮಿನಿ ಬಸ್ ಇಟ್ಟುಕೊಂಡು ಜೀವನ ಸಾಗಿಸುವವರ ಜೀವನಕ್ಕೆ ಸಂಚಕಾರ ಬಂದಂತಾಯಿತು.ಬಸ್ ಗಳಿಗೆ ಮಹಿಳೆಯರ ಮಹಾಪೂರವೇ ಹರಿದುಬಂದು ವಿದ್ಯಾರ್ಥಿಗಳು, ವೃದ್ಧರು ಬಸ್ ಹತ್ತಲು ಪರದಾಡುವಂತಾಯಿತು. ಕೆಲವು ಮಹಿಳೆಯರಂತು ಸೀಟು ಸಿಗದೆ ಸಾರ್ವಜನಿಕರ ಎದುರಿಗೆ ಯಾವ ರೀತಿಯಲ್ಲಿ ಬಹಿರಂಗ ಕುಸ್ತಿ ಆಡಿದರೆಂಬುದು ತಮ್ಮ ಗಮನಕ್ಕೂ ಬಂದಿರಲಿಕ್ಕೆ ಸಾಕು ! ಇನ್ನು ತಾವು ಹೇಳುವಂತೆ ಮಹಿಳೆಯರ ಪ್ರವಾಸದಿಂದ ದೇವಸ್ಥಾನಗಳಿಗೆ ಹೆಚ್ಚಿನ ಕಾಣಿಕೆ ಬಂದಿದೆ ಎಂಬ ಮಾತು ನಾಲ್ಕು ದಿನದ ವ್ಯಾಪಾರ ಅಷ್ಟೇ. ಇನ್ನು ಮಹಿಳಾ ಕಾರ್ಮಿಕರ ಅವಲಂಬಿತ ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ದೇವರಿಗೇ ಗೊತ್ತು. ತಮಗೆ ಅದರ ಅರಿವಿಲ್ಲ ಎಂದರೆ ಯಾರೂ ನಂಬುವುದಿಲ್ಲ.
ಮಹನೀಯರೇ, ತಾವಂತೂ ಆಸ್ತಿ ತೆರಿಗೆ ತುಂಬಲೆಂದು ಪಟ್ಟಣ ಪಂಚಾಯಿತಿಗೋ, ನಗರಸಭೆಗೋ, ಮಹಾನಗರ ಸಭೆಗೋ ಹೋಗುತ್ತೀರೋ ಇಲ್ಲವೋ ಗೊತ್ತಿಲ್ಲ. ಈ ಸಲ ಮನೆ ಹಾಗೂ ಇತರೆ ಆಸ್ತಿ ತೆರಿಗೆ ತುಂಬಲು ಹೋದ ಬಡವರು ಮಧ್ಯಮವರ್ಗದವರು ನೇಣು ಹಾಕಿಕೊಳ್ಳಬೇಕೆಂದರೆ ಹಗ್ಗ ಕೊಳ್ಳಲು ದುಡ್ಡಿಲ್ಲದಂತಾಗಿದೆ ಸರ್ ! ಒಂದು ವರ್ಷದ ಬಾಕಿಯಿದ್ದರೆ ಅದಕ್ಕೆ ಹೆಣಭಾರ ಬಡ್ಡಿ, ಮನೆಗೆ ನಳ ಸಂಪರ್ಕ ಇಲ್ಲದಿದ್ದರೂ ನೀರಿನ ತೆರಿಗೆ, ಘನ ತ್ಯಾಜ್ಯದ ಹೆಸರಿನಲ್ಲಿ ಸಿಕ್ಕಾಪಟ್ಟೆ ವಸೂಲಿ ಆದರೆ ಇದೇ ಸ್ಥಳೀಯ ಸಂಸ್ಥೆಗಳಿಂದ ಊರಿನ ಅಭಿವೃದ್ಧಿ ಮಾತ್ರ ಶೂನ್ಯ. ಏನಾದರೂ ಕೇಳಿದರೆ, ಸರ್ಕಾರದ ಅನುದಾನವನ್ನೇ ಪೌರ ಕಾರ್ಮಿಕರ ಸಂಬಳವನ್ನಾಗಿ ಕೊಡುತ್ತಿದ್ದಾರಂತೆ ! ಕೆಲವು ಇಲಾಖೆಗಳ ಸಂಬಳವೇ ಬಂದಿಲ್ಲವಂತೆ. ಸಾರಿಗೆ ಇಲಾಖೆಯವರದೂ ದಿನಾ ಇದೇ ಮಂತ್ರ. ಈಗ ಬಸ್ ದರ ಹೆಚ್ಚಳದ ಬರೆ ನಮಗೆ ! ರಾಜ್ಯವನ್ನು ಎಲ್ಲಿಗೆ ತಂದಿಟ್ಟಿರಿ ಸರ್ !
ತಾವು ಅಧಿಕಾರಕ್ಕೆ ಬಂದಿದ್ದು ಹೇಗೆ ? ಸ್ವಚ್ಛ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ಹೇಳಿದ್ದಿರಲ್ಲವೆ ? ಅಳಿಯನ ಕುರುಡು ಬೆಳಗಾಗ ತಿಳಿಯಿತು ಎಂಬಂತೆ ಒಂದರ ಮೇಲೊಂದು ಹಗರಣ ಹೊರಬೀಳುತ್ತಿವೆ. ಅವುಗಳನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳತ್ತ ಬೊಟ್ಟು ಮಾಡಿ, ನೀವೇನು ಸಾಚಾಗಳಾ ? ನೀವು ಅಷ್ಟು ಮಾಡಿದ್ದೀರಿ ನಾವು ಇಷ್ಟೂ ಮಾಡಬಾರದಾ ಎಂಬ ರೀತಿಯಲ್ಲಿ ಹಗರಣಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ. ಹಾಗೆ ನೋಡಿದರೆ ಭ್ರಷ್ಟಾಚಾರದ ವಿಷಯದಲ್ಲಿ ಎಲ್ಲಾ ಪಕ್ಷಗಳೂ ಒಂದು ಕೈ ಹೆಚ್ಚೇ ಎನ್ನುವಂತೆ ಇವೆ. ಈ ವಿಷಯದಲ್ಲಿ ಜನತೆಯಂಥ ಮೂರ್ಖರು ಯಾರೂ ಇಲ್ಲವೆನ್ನುವುದು ವರ್ಷಗಳಿಂದಲೂ ಸಾಬೀತಾಗಿದೆ. ಅವರ ಪಕ್ಷ ಅಧಿಕಾರದಲ್ಲಿದ್ದಾಗ ಹಗರಣ ಮಾಡಿದರೆ ನೀವು ಕೇಳುವುದಿಲ್ಲ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು ಕೇಳುವುದಿಲ್ಲ. ಒಂದು ವೇಳೆ ಕೇಳಿದರೂ ಗಂಟಲಿಗೇನೋ ಸಿಕ್ಕಿಹಾಕಿಕೊಂಡವರಂತೆ ಕೀಚಲು ದನಿ ಹೊರಡಿಸಿ ಕೇಳುತ್ತೀರಿ ಅವರೂ ಅದೇ ರೀತಿ ಕೇಳುತ್ತಾರೆ ಅಲ್ಲಿಗೆ ಒಂದು ಅನೈತಿಕ ಒಪ್ಪಂದದ ವಿಜಯವಾಗುತ್ತದೆ, ಅನೈತಿಕತೆಯೇ ವಿಜೃಂಭಿಸುತ್ತದೆ.
ಈಗ ಪ್ರಶ್ನೆ ಬಂದಿರುವುದು ನಮ್ಮಂಥ ಮಧ್ಯಮ, ಮೇಲ್ಮಧ್ಯಮ ವರ್ಗದವರು, ಅಹಿಂದ ವರ್ಗದವರು ಹೇಗೆ ಜೀವನ ಸಾಗಿಸಬೇಕು ಎಂಬುದು. ತಾವು ಸಮಾಜವಾದಿ ಸಿದ್ಧಾಂತದವರು ಎಂದು ಕೇಳಿದ್ದೇನೆ ಆದರೆ ಸಮಾಜಕ್ಕೆ ಉಪಕಾರವಾಗುವಂಥ ನಿರ್ಧಾರಗಳು ತಮ್ಮಿಂದಾಗಲೀ ತಮ್ಮ ಸರ್ಕಾರದಿಂದಾಗಲೀ ಹೊರಬಂದ ಉದಾಹರಣೆಗಳಿಲ್ಲ. ಮತ್ತೆ ಉಚಿತ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಅನ್ನಬೇಡಿ. ಗಂಡನಿಂದ ನಾಲ್ಕು ಸಾವಿರ ಕಿತ್ತು ಎರಡು ಸಾವಿರ ಕೊಡುವುದು, ಉಚಿತ ಕರೆಂಟ್ ಕೊಟ್ಟು ಕರೆಂಟ್ ಬಿಲ್ ನಲ್ಲಿ ಇಲ್ಲಸಲ್ಲದ ಕಾಲಂ ಗಳನ್ನು ತುಂಬಿ ಮೊತ್ತ ಹೆಚ್ಚು ಮಾಡುವುದು, ಹೆಂಡತಿಗೆ ಉಚಿತ ಪ್ರಯಾಣ ಕೊಟ್ಟು ಗಂಡನ ಬಸ್ ದರ ಹೆಚ್ಚು ಮಾಡುವುದು, ನಿರುದ್ಯೋಗ ಭತ್ಯೆ ಕೊಟ್ಟು ನಿರುದ್ಯೋಗ ಮತ್ತಷ್ಟು ಹೆಚ್ಚುವಂತೆ ಮಾಡುವುದು, ಪುಕ್ಕಟ್ಟೆ ಅಕ್ಕಿಯ ಬದಲಿಗೆ ಹಣ ಕೊಟ್ಟು ಮದ್ಯದ ದರ ಹೆಚ್ಚು ಮಾಡಿ ಪುರುಷರ ಜೇಬಿಗೆ ಕತ್ತರಿ ಹಾಕುವುದು ಯಾವ ಪುರುಷಾರ್ಥದ ಸಮಾಜವಾದ ಸರ್ ? ಇಂಥ ಆಡಳಿತಕ್ಕೆ ಬಹಿರಂಗ ಧಿಕ್ಕಾರ. ನಮ್ಮಂಥ ಕೋಟ್ಯಂತರ ಜನರು ಒಳಗೊಳಗೇ ತಮ್ಮ ಸರ್ಕಾರಕ್ಕೆ ಶಾಪ ಹಾಕುತ್ತ ದಿನ ದೂಡುತ್ತಿರುವುದು ವಾಸ್ತವ ಸಂಗತಿ.
ಬರುಬರುತ್ತ ಪೃಥ್ವಿಯ ಶಾಖ ಮೇಲೇರುತ್ತಿದೆ. ಅದರ ಜೊತೆಗೇ ನಿಮ್ಮಂಥವರ ಅಧಿಕಾರ ದಾಹದ ಭರವಸೆಗಳಿಂದ ಜನತೆಯ ತಲೆಯೊಳಗಿನ ಬಿಸಿಯೂ ಏರುತ್ತಿದೆ. ಆಡಲಾರದೆ ಅನುಭವಿಸಲಾರದೆ ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿರಿ ಸರ್, ಸೇವೆಯೆಂದು ಕರೆಸಿಕೊಳ್ಳುವ ರಾಜಕಾರಣದಲ್ಲಿ ಬರೀ ಅಧಿಕಾರಕ್ಕಾಗಿ ರಾಜಕಾರಣ ಮಾಡಿ ನಿವೃತ್ತಿ ಹೊಂದಿದರೆ ಈ ಜೀವನ ಸಾರ್ಥಕವಾಗುವುದಿಲ್ಲ.
ಬೆಲೆಯೇರಿಕೆಯಿಂದ ತತ್ತರಿಸಿರುವ ಎಲ್ಲಾ ವರ್ಗದವರ ಪರವಾಗಿ ನುಡಿದ ಮಾತುಗಳು ಕಟುವಾಗಿದ್ದರೆ ಕ್ಷಮೆ ಇರಲಿ ಸರ್.
ಧನ್ಯವಾದಗಳು
ಉಮೇಶ ಮ. ಬೆಳಕೂಡ
ಮೂಡಲಗಿ