ಆಕಾಶ ನೋಡಲಿಕೆ ನೂಕುನುಗ್ಗಲುಯೇಕೆ ?
ನಿಂತಲ್ಲೆ ಮೇಲ್ನೋಡು ಕಾಣಿಸುವುದು
ದೇಗುಲದಿ ದೇವರನು ನೋಡಬಯಸುವಿಯೇಕೆ?
ಮನದಲ್ಲಿ ಮಹದೇವ – ಎಮ್ಮೆತಮ್ಮ||೫||
ಶಬ್ಧಾರ್ಥ
ದೇಗುಲ – ದೇವಸ್ಥಾನ, ದೇವಾಲಯ,ಗುಡಿ, ಮಂದಿರ
ಗಗನವನ್ನು ನೋಡಲು ಹೋಗಿ ಜನರು ಗುಂಪುಸೇರಿ ನುಗ್ಗಿ
ನೂಕಾಡುವುದು ಬೇಕಾಗಿಲ್ಲ. ಏಕೆಂದರೆ ಕತ್ತೆತ್ತಿ ನಿಂತಲ್ಲೆ
ಮೇಲಕ್ಕೆ ನೋಡಿದರೆ ನೀಲಿಯಾದ ವಿಶಾಲವಾದ ಶುಭ್ರವಾದ
ಆಕಾಶ ಕಣ್ಣಿಗೆ ಕಾಣುತ್ತದೆ ಮತ್ತು ಸಂತೋಷವನ್ನು ಕೊಡುತ್ತದೆ.
ಗುಡಿ ಆಶ್ರಮ ಬಾಬಾಗಳನ್ನು ನೋಡಲು ಹೋಗಿ ಕಾಲ್ತುಳಿತಕ್ಕೆ ಎಷ್ಟೋ ಜೀವಗಳು ತುತ್ತಾಗಿ ಸತ್ತದ್ದನ್ನು ಕೇಳಿದ್ದೇವೆ. ಅದಕ್ಕೆ ಬಸವಣ್ಣನವರು ದೇಹವೇ ದೇಗುಲ ಮಾಡಿಕೊಳ್ಳಿರಿ ಎಂದು ಹೇಳಿದ್ದಾರೆ. ನೀಲಿಯಾಕಾಶದಷ್ಟು ವಿಶಾಲ ಮತ್ತು ಸುಂದರ ಎಂದು ಶಿವನ , ದೇವಿಯ ಮತ್ತು ವಿಷ್ಣುವಿನ ಮತ್ತು ಕಲ್ಲಿನ ಮೂರ್ತಿಗಳ ಮೈ ನೀಲಿ(ಕಪ್ಪು)ಯಾಗಿದೆ.ಅದು ಪರಿಶುದ್ಧ ಮತ್ತು ಸರ್ವಂತರ್ಯಾಮಿಯ ಸಂಕೇತ. ಅಮೂರ್ತವಾದ ದೇವನನ್ನು ನಮ್ಮ ಅನುಕೂಲಕ್ಕಾಗಿ ಮೂರ್ತಿ ಮಾಡಿ ಗುಡಿಯಲ್ಲಿ ಪ್ರಾಣ ಪ್ರತಿಷ್ಟೆ ಮಾಡಿದ್ದಾರೆ.ಆದರೆ ಅದೇ ದೇವನನ್ನು ನಮ್ಮ ಮನದಲ್ಲಿ ನಾವು ಪ್ರಾಣಾಯಾಮದ ಮೂಲಕ ಪ್ರತಿಷ್ಟಾಪಿಸಿಕೊಂಡರೆ ಸುಲಭವಾಗಿ ಗ್ರಾಹ್ಯನಾಗುತ್ತಾನೆ. ಮನದ ಏಕಾಗ್ರತೆಗೆ ಕುರುಹು ಮಾತ್ರ. ಆ ಕುರುಹೆ ದೇವರಲ್ಲ. ಅವನನ್ನು ಮನದಲ್ಲಿ ಅರಿಯುವುದು ಮುಖ್ಯ. ಅದಕ್ಕೆ ಗುಡಿ, ಚರ್ಚು,ಮಸೀದಿಗಳಲ್ಲಷ್ಟೆ ದೇವರಿಲ್ಲ, ನಮ್ಮ ಮನದಲ್ಲಿಯೂ ಸದಾ ಕಾಲ ವಾಸವಾಗಿದ್ದಾನೆ. ಅದರ ಕಡೆಗೆ ಗಮನ ಕೊಡಲೆಂದೆ ಗುಡಿಗಳನ್ನು ಮನುಷ್ಯನ ದೇಹದ ತರಹ ನಿರ್ಮಿಸಿದ್ದಾರೆ .ಅದರ ಗೂಢಾರ್ಥ ಅರಿಯಬೇಕು.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ