ಅಲ್ಲಮರ ವಚನ ವಿಶ್ಲೇಷಣೆ ; ಉಳಿ ಮುಟ್ಟದ ಲಿಂಗ

Must Read

ಎನಗೊಂದು ಲಿಂಗ ನಿನಗೊಂದು ಲಿಂಗ.          ಮನೆಗೊಂದು ಲಿಂಗವಾಯಿತ್ತು,                      ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ,                              ಉಳಿ ಮುಟ್ಟದ ಲಿಂಗ ಮನ ಮುಟ್ಟಬಲ್ಲದೆ ಗುಹೇಶ್ವರಾ.

*ಅಲ್ಲಮ ಪ್ರಭುದೇವರ ವಚನ*
ಸವಸಂ : 2, ವಚನ-207 ಪುಟ-65.

ಅಲ್ಲಮರು ಅನುಭಾವದ ಹಿನ್ನೆಲೆಯಲ್ಲಿ ಮೂಡಿ ಬಂದ ಈ ಟೀಕಿನ ವಚನದಲ್ಲಿ ಜಡ ಸ್ಥಾವರವನ್ನು ವಿಡಂಬಿಸಿ ವಿರೋಧಿಸಿದ್ದಾರೆ .ಸಂಪ್ರದಾಯವಾದಿಗಳ ಸನಾತನ ಆಚರಣೆಯಲ್ಲಿ ಜಡ ಸ್ಥಾವರವನ್ನು ದೇವರೆಂದು ಲಿಂಗವೆಂದು ಪೂಜಿಸಿ ಬಳಲಿದ್ದನ್ನು ಕಣ್ಣಾರೆ ಕಂಡು ಮುಮ್ಮಲ ಮರುಗಿದ ಅಲ್ಲಮರು ಅದನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ .

*ಎನಗೊಂದು ಲಿಂಗ ನಿನಗೊಂದು ಲಿಂಗ*
—————————————
ಲಿಂಗವಿಲ್ಲಿ ಸ್ಥಾವರವಾಗಿ ಜಡದ ಸಂಕೇತವನ್ನು ತೋರುತ್ತದೆ. ಪ್ರತಿಯೊಬ್ಬ ಮನುಷ್ಯನು ತನ್ನ ಆಧ್ಯಾತ್ಮಿಕ ಸಾಧನೆಗೆ ದೇವರನ್ನು ಮೊರೆ ಹೋಗುತ್ತಾನೆ . ದೇವರೆಂದರೆ ಮನುಷ್ಯನ ಬಿಟ್ಟು ಹೊರ ಜಗತ್ತಿನಲ್ಲಿರುವ ಅಗಾಧವಾದ ಶಕ್ತಿ ಎಂದು ಮನುಷ್ಯನು ನಂಬಿದ್ದಾನೆ .ಹೀಗಾಗಿ ತಮ್ಮ ತಮ್ಮ ಧಾರ್ಮಿಕ ಆಧ್ಯಾತ್ಮಿಕ ಸಾಧನೆಗೆ ಬಾಹ್ಯ ಜಗತ್ತಿನ ಕಲ್ಲು ಮಣ್ಣು ಲೋಹದಲ್ಲಿನ ದೇವರ ಕಾಲ್ಪನಿಕ ವಿಗ್ರಹಗಳನ್ನು ಪೂಜಿಸುತ್ತ ಉನ್ಮಾದ ಉತ್ಸಾಹ ಭಕ್ತಿ ಎಂಬ ನಂಬಿಕೆಯಲ್ಲಿ ಕಾಲ ಕಳೆಯುತ್ತಾನೆ.

ಇದನ್ನು ಅಲ್ಲಮರು ಎನಗೊಂದು ಲಿಂಗ ನಿನಗೊಂದು ಲಿಂಗವೆಂದಿದ್ದಾರೆ. ಚರ ಲಿಂಗಗಳು ಸ್ಥಾವರ ಲಿಂಗಗಳು ಬಹುತೇಕವಾಗಿ ಜನರ ಆರಾಧನೆ ಪೂಜೆ ಆಚರಣೆಗೆ ಮೂಲ ಸಾಮಗ್ರಿ ಸಾಧನವಾದಾಗ ಅವುಗಳನ್ನು ಕಟುವಾಗಿ ಟೀಕಿಸಿ ಎನಗೊಂದು ಲಿಂಗ ನಿನಗೊಂದು ಲಿಂಗವೆಂದು ಜಡತ್ವದ ಅರ್ಥರಹಿತ ಲಿಂಗಗಳನ್ನು ನಿರಾಕರಿಸಿದ್ದಾರೆ ಅಲ್ಲಮರು.

*ಮನೆಗೊಂದು ಲಿಂಗವಾಯಿತ್ತು,*
———————————–
ಮನುಷ್ಯ ಮನುಷ್ಯರ ಲಿಂಗವಲ್ಲದೆ ಮನೆಯೊಳಗಿನ ಜಗುಲಿಯ ಮೇಲೆಯೂ ಲಿಂಗವು ಸ್ಥಾಪಿಸಲ್ಪಟ್ಟವು ಮನೆಯಲ್ಲಿನ ಸದಸ್ಯರು ಮತ್ತೆ ಅನೇಕ ಲಿಂಗಾಕಾರದ ಕಲ್ಲಿನ ಲೋಹದ ಮಣ್ಣಿನ ಮೂರ್ತಿ ಲಿಂಗಗಳನ್ನು ಪ್ರತಿಷ್ಠಾಪಿಸಿ ಪೂಜೆ ಅಭಿಶೇಕ ಯಜ್ಞಗಳಂತಹ ಮೌಢ್ಯ ಅರ್ಥರಹಿತ ಆಚರಣೆಗೆ ಮುಂದಾಗಿದ್ದನ್ನು ದಿಟ್ಟವಾಗಿ ಪ್ರಶ್ನಿಸಿದ್ದಾರೆ ಅಲ್ಲಮರು.ಪ್ರತಿಯೊಬ್ಬ ಮನೆಯಲ್ಲಿ ಇಂದಿಗೂ ಮನೆದೇವರು ಮಲ್ಲಯ್ಯ ಕಲ್ಲಯ್ಯ ಶ್ರೀಶೈಲ ಮಲ್ಲಿಕಾರ್ಜುನ ರೇಣುಕಾ ಎಲ್ಲಮ್ಮ ಹೀಗೆ ಸಾವಿರಾರು ದೇವರನ್ನು ಮನೆಯ ದೇವರನ್ನಾಗಿ ಮಾಡಿಕೊಂಡು ಜಾತ್ರೆ ಹಬ್ಬ ಉತ್ಸವದಲ್ಲಿ ಭಾಗವಹಿಸುವದನ್ನು ಅಲ್ಲಮರು ಟೀಕಿಸಿದ್ದಾರೆ

*ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ,*
—————————————
ಭಕ್ತಿ ಎಂಬುದು ಸಾಧಕನ ಆತ್ಮ ಕಾಯ ಪ್ರಾಣಗಳನ್ನು ಸಂಯೋಜಿಸುವ ಕೂಡುವ ಸಂಧಿಸುವ ನಿರ್ಮಲವಾದ ಯೋಗ. ಭಕ್ತಿ ಒಂದು ಅನನ್ಯವಾದ ಅಮೂಹೂರ್ತವಾದ ಪ್ರಜ್ಞೆ .
ಸಾಧಕ ಪಂಚೇಂದ್ರಿಗಳ ಮೂಲಕ ಶಕ್ತಿಯನ್ನು ತನ್ನ ಕಾಯ ಜಂಗಮ ಶಕ್ತಿಯಲ್ಲಿ ಲೀನಗೊಳಿಸುವ ಅಪೂರ್ವ ಸಾಧನೆ ಭಕ್ತಿ. ಶರಣರ ಧರ್ಮವು ಭಕ್ತಿ ಪ್ರಧಾನವಾದದ್ದು . ಎನಗೊಂದು ನಿನಗೊಂದು ಅವನಿಗೊಂದು ಹೀಗೆ ಎಲ್ಲರಿಗೂ ಬೇರೆ ಬೇರೆ ದೇವರ ಕಲ್ಪನೆಯಿಂದ ಬೇರೆ ಬೇರೆ ದೇವರ ಆಕರಗಳನ್ನು ಪೂಜಿಸುವ ವ್ಯರ್ಥ ಸಮಯಕ್ಕೆ ಮರುಗುತ್ತಾರೆ ಅಲ್ಲಮರು. ಇಂತಹ ಕಲ್ಲು ದೇವರು ಮಣ್ಣು ದೇವರು ಇವುಗಳನ್ನು ಭಕ್ತಿಯಿಂದ ನೀರಿನಲ್ಲಿ ತೊಳೆದು ಕುಂಕುಮ ಕಸ್ತೂರಿ ಶ್ರೀಗಂಧ ಲೇಪಿಸಿ ಭಸ್ಮ ವಿಭೂತಿ ಹಚ್ಚಿ ಹೂವು ಪತ್ರಿಗಳನ್ನು ಏರಿಸುವ ಭಕ್ತನ ಭಕ್ತಿ ನೀರಿನಂತೆ ತೊಳೆದು ಹೋಯಿತ್ತು. ಇಂದು ಮಾಡಿದ ಪೂಜೆ ನಾಳೆ ಮತ್ತೆ ಹಳೇದು ಆಗ ಒಣಗಿದ ಹೂವು ಪತ್ರಿಗಳು ದೇವರಿಗೆ ಲೇಪಿಸಿದ ಶ್ರೀಗಂಧ ಅಕ್ಷತೆ ಕುಂಕುಮ ಇತರ ವಸ್ತುಗಳು ಒಣಗಿ ಹೋಗಿರುತ್ತವೆ ಶೃಂಗಾರಕ್ಕೆ ಸಿದ್ಧವಾದ ದೇವರನ್ನು ಮತ್ತೆ ಮತ್ತೆ ತೊಳೆಯುವ ಬಲು ಮುಖ್ಯವಾದ ಸಮಯವು ವ್ಯರ್ಥವಾಗುತ್ತದೆ . ಇಂತಹ ಭಕ್ತಿಯು ಜಲವ ಕೂಡಿ ಹೋಗುತ್ತದೆ ಒಂದು ಕಾಲ ಸಮಯದಲ್ಲಿ ಪೂಜಿಸಿದ ದೇವರು ಮತ್ತೊಮ್ಮೆ ನೀರಿಗೆ ನೈವೈದ್ಯಕ್ಕೆ ಸಿದ್ಧವಾಗಿ ಮತ್ತೆ ನೀರು ಲಾಗುವದನ್ನು ವಿಡಂಬಿಸಿದ್ದಾರೆ ಅಲ್ಲಮರು .ಇಂತಹ ಭಕ್ತಿಗಳು ನೀರಿನಲ್ಲಿ ತೇಲಿ ಹೋಗುತ್ತವೆ ಎಂದು ಟೀಕಿಸಿದ್ದಾರೆ

*ಉಳಿ ಮುಟ್ಟದ ಲಿಂಗ ಮನ ಮುಟ್ಟಬಲ್ಲದೆ ?*
——————————————-
ಅತ್ಯಂತ ಸುಂದರ ಬೆಡಗಿನಿಂದ ಟೀಕಿಸಿದ ಅಲ್ಲಮರು . ಉಳಿಯೆನೆಂಬ ಕಾಯಕದ ಗಟ್ಟಿ ಮುಟ್ಟಾದ ಪ್ರತಿಮೆಯನ್ನು ಸಂಕೇತವನ್ನು ಬಳಸಿ .ಕಾಯಕವಿರದ ಅಂದರೆ ಉಳಿಯ ಪೆಟ್ಟು ಬೀಳದ ಲಿಂಗ.ಇಲ್ಲಿ ಶರೀರವು ಲಿಂಗವೆಂದು ತಿಳಿದುಕೊಳ್ಳಬೇಕು. ಶರೀರವೆಂಬ ಅಂಗ ಲಿಂಗಕ್ಕೆ ಶ್ರಮ ಕಾಯಕದ ಉಳಿಯ ಕಠಿಣ ಪೆಟ್ಟು ಬೀಳದಿದ್ದರೆ ಅಂತಹ ಲಿಂಗವು ಮನವನ್ನು ಮುಟ್ಟಬಲ್ಲದೇ ಎಂದು ಪ್ರಶ್ನಿಸಿ ಉಳಿಯು ಸ್ಥಾವರವನ್ನು ಕೆತ್ತಿ ವಿಗ್ರಹಮಾಡಬಹುದು . ಆದರೆ ಅಂಗವೆಂಬ ಲಿಂಗಕ್ಕೆ ಉಳಿಯ ಪೆಟ್ಟು ಬೀಳದಿದ್ದರೆ ಅಂದರೆ ಕಾಯಕವು ಕಡ್ಡಾಯವಾಗದಿದ್ದರೆ ಅಂತಹ ಕಾಯ ಶರೀರ ಲಿಂಗ ಶರೀರವು ಮನವನ್ನು ಹೇಗೆ ಮುಟ್ಟಬಲ್ಲದು ಎಂದಿದ್ದಾರೆ . ಅದಕ್ಕೆ ಬಸವಣ್ಣ ನೀರ ಕಂಡಲ್ಲಿ ಮುಳುಗುವರು ಮರವ ಕಂಡಲ್ಲಿ ಸುತ್ತುವರು . ಬತ್ತುವ ಜಲ ಒಣಗುವ ಮರವ ನೆಚ್ಚಿದವರ ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ ಎಂದಿದ್ದಾರೆ ?

ಉಳಿ ಸೋಂಕು ಕಾಯಕವನ್ನು ಕಾಯಕ್ಕೆ ಕಲಿಸುವ ಸಾಧನ .ಅದುವೇ ದೀಕ್ಷೆ ಪರಿಶ್ರಮವೇ ಜಪತಪ ಧ್ಯಾನ . ಇಂತಹ ಸತ್ಯ ಶುದ್ಧ ಕಾಯಕ ಮಾಡುವನ ಕಾಯವೇ ಕೈಲಾಸ ಅಂತಹ ಭಕತನ ಅಂಗವೇ ಲಿಂಗಮಯವೆಂದಿದ್ದಾರೆ .

ಮುಂದುವರೆದು ಈ ವಚನವು ಎದೆಯ ಮೇಲೆ ಲಿಂಗ ಧರಿಸಿ ಲಿಂಗಪೂಜೆ ಎಂದು ಹೇಳಿ ಅದಕ್ಕೆ ವಿಭೂತಿ ಪ್ರಸಾದ ನೈವೆದ್ಯ ಧೂಪ ದೀಪ ಕರ್ಪುರ ಹಚ್ಚಿ ಆರತಿ ಮಾಡುವ ಇಂದಿನ ಲಿಂಗಾಯತರಿಗೂ ಅನ್ವಯವಾಗುತ್ತೆ .

ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ,ಲಿಂಗ ವಸ್ತು ಅಲ್ಲ ಗುರು ವ್ಯಕ್ತಿ ಅಲ್ಲ ಜಂಗಮ ಜಾತಿಯಲ್ಲ. ಅರುಹನರಿಯುವ ಕುರುಹೇ ಲಿಂಗ .ಆ ಲಿಂಗಕ್ಕೂ ಕಾಯಕ ಕಡ್ಡಾಯ .
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಅಪ್ರಾಪ್ತ ಸೋದರಿಯ ಬೆನ್ನು ಬಿದ್ದ ಯುವಕನ ಕೊಲೆ

ಘಟಪ್ರಭಾ : ತನ್ನ ಅಪ್ರಾಪ್ತ ತಂಗಿಯ ಹಿಂದೆ ಪ್ರೀತಿಗೆ ಬಿದ್ದ ಯುವಕನನ್ನು ಯುವತಿಯ ಅಪ್ರಾಪ್ತ ವಯಸ್ಸಿನ ಅಣ್ಣನೇ ಕೊಲೆ ಮಾಡಿರುವ ಘಟನೆ  ಸಮೀಪದ ರಾಜಾಪೂರ ಗ್ರಾಮದಲ್ಲಿ...

More Articles Like This

error: Content is protected !!
Join WhatsApp Group