*ಕಾಯದ ಜೀವದ ಹೊಲಿಗೆ*
———————————–
ದೇಹಭಾವವಳಿದಲ್ಲದೆ ಜೀವಭಾವವಳಿಯದು.
ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು.
ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು.
ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.
ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.
ಇದು ಕಾರಣ;
ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ
ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ.
*-ಅಲ್ಲಮಪ್ರಭುದೇವರು*
ಅಲ್ಲಮಪ್ರಭುಗಳ ಅದ್ಭುತ ವಚನಗಳಲ್ಲಿ ಇದೂ ಒಂದು .ಕಾಯ ಶರೀರ ಜೀವ ಭಾವ ಭಕ್ತಿ ಅರಿವು ಕುರುಹು ಹೀಗೆ ಒಂದಕ್ಕೊಂದು ಹೇಗೆ ಮನುಷ್ಯನ ಭಕ್ತನ ಜೀವನದಲ್ಲಿ ತೊಡಕಿ ಹಾಕಿ ಕೊಳ್ಳುತ್ತವೆ ಎಂದು ಈ ವಚನಗಳ ಮೂಲಕ ನೋಡಬಹುದು. ಉತ್ತಮ ನಿದರ್ಶನ ಪ್ರತಿಮೆಗಳ ಮೂಲಕ ಅಭಿವ್ಯಕ್ತಗೊಳಿಸುವ ಅಲ್ಲಮರು ಪಾರಮಾರ್ಥಿಕ ಮೋಕ್ಷದ ಸರಳ ಮಾರ್ಗದ ಸೂತ್ರದಾರರಾಗಿ ನಿಲ್ಲುತ್ತಾರೆ.
*ದೇಹಭಾವವಳಿದಲ್ಲದೆ ಜೀವಭಾವವಳಿಯದು.*
————————————————-
ಮನುಷ್ಯನು ತಾನು ತನ್ನ ಶರೀರ ಸುಖ ,ದೇಹ ಸೌಂದರ್ಯತೆ ಪ್ರಾಪಂಚಿಕ ವಿಷಯಕ್ಕೆ ಬಳಲುತ್ತಾನೆ ,ವಿಷಯಾದಿ ಅರಿಷಡ್ ವರ್ಗಗಳ ಸುಳಿಯಲ್ಲಿ ಸಿಲುಕಿ ಬದುಕಿನ ಸಾರ್ಥಕತೆ ಮರೆತು ಸೋಲುತ್ತಾನೆ. ದೇಹದ ಬಗೆಗಿನ ಅತೀವ ಮೋಹ ಆಶೆ ಬಿಡದೆ ದೇಹದೊಳಗಿನ ಜೀವ ಭಾವವು ಬಿಡದು. ದೇಹ ಸ್ವಾಸ್ಥ್ಯತೆಗೆ ಆಹಾರ ನಿದ್ದೆ ಯೋಗ ವ್ಯಾಯಾಮ ಮುಂತಾದ ಜೀವ ಭಾವಕ್ಕೆ
ಪೂರಕವಾಗಿ ಬದುಕುವ ಭಕ್ತನು ದೇಹದ ಹಂಗನ್ನು ದೇಹದ ಮೇಲಿನ ಅತೀವ ಆಶೆ ಭಾವವನ್ನುಬಿಟ್ಟಾಗ ಅದಕ್ಕೆ ತಕ್ಕಂತೆ ಜೀವ ಪ್ರಕ್ರಿಯೆ ಯೋಚನೆ ಪಚನ ಕ್ರಿಯೆ ಚಯಾಪಚಯ ರಕ್ತ ಸಂಚಲನ ,ಮೆದುಳು ಕ್ರಿಯೆ ಮನಸಿನ ಅನೇಕ ಗೊಂದಲಗಳು ಆತಂಕ ನೋವು ಅಸ್ಥಿರತೆ ಮುಂತಾದವುಗಳನ್ನು ಕಳೆದುಕೊಂಡು ವ್ಯಕ್ತಿ ನಿರಾಳನಾಗುತ್ತಾನೆ.
ಹುಟ್ಟು ಸಾವು ಸಹಜ ಪ್ರಕ್ರಿಯೆ ಇದರ ಪೋಷಣೆಗೆ ಬೇಕಾದ ಕನಿಷ್ಠ ಆಹಾರ ಬಟ್ಟೆ ಮತ್ತು ಇತರ ಸೌಲಭ್ಯಗಳ ಬಗ್ಗೆ ಮಾತ್ರ ಮನುಷ್ಯ ಗಮನ ಕೊಟ್ಟು ಉಳಿದ ಸಮಯ ಶಕ್ತಿಯನ್ನು ಪಾರಮಾರ್ಥಿಕ ಆಧ್ಯಾತ್ಮಿಕ ಬದುಕಿಗೆ ತೊಡಗಿಸಿಕೊಡಲು ಸಾಧ್ಯ ಎಂದಿದ್ದಾರೆ.
*ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು.*
——————————————-
ಮನುಷ್ಯ ತನ್ನ ಬದುಕಿನ ಗುರಿಯನ್ನು ಅರಿತುಕೊಳ್ಳಬೇಕು.ಜೀವನದ ಸಫಲತೆ ಉದ್ದೇಶಗಳನ್ನು ಅರ್ಥೈಸಿಕೊಂಡರೆ ಜೀವಭಾವವನ್ನು ಅಳಿಯುವ ಸಾಧನವನ್ನು ಕಂಡುಕೊಳ್ಳುತ್ತಾನೆ.
ಸಹಜವಾಗಿ ನಾವು ಆಹಾರ ಸೇವಿಸುತ್ತೇವೆ .ಆಹಾರ ಸೇವಿಸುವುದು ಮನುಷ್ಯ ಬದುಕಲು ಮಾತ್ರ ,ಆದರೆ ಬದುಕುವುದು ಆಹಾರ ಸೇವಿಸಲು ಮಾತ್ರವಲ್ಲ .ಬದುಕಿಗೆ ನಿಶ್ಚಿತ ಗುರಿ ಸಾಧನೆಯ ಮಾರ್ಗ ಗೊತ್ತಿರಬೇಕು. ಜೀವಂತವಾಗಿರುವುದೇ ಸಾಧನವಲ್ಲ . ಅದಕ್ಕೆ ಜೀವ ಭಾವ ಅಳಿಯಬೇಕಲ್ಲದೆ ಭಕ್ತಿ ಭಾವವು ಅಳವಡದು. ಅಂದರೆ ಬದುಕಿಗೆ ಕೊಡುವ ಸಮಯ ಹಣ ಶಕ್ತಿ ಆಹಾರ ಸೇವೆನೆ ಆರೋಗ್ಯ ಕಾಳಜಿ ಮುಂತಾದಕ್ಕೆ ಸಮಯ ವಿನಿಯೋಗಿಸುತ್ತ ಸಮಯ ವ್ಯರ್ಥ ಮಾಡಿಕೊಳ್ಳುವವನು ಭಕ್ತಿ ಮಾರ್ಗವನ್ನು ಅರಿಯಲಾಗದು. ಅದಕ್ಕೆ ಜೀವದ ಮೋಹ ಕಳೆದುಕೊಳ್ಳಬೇಕಲ್ಲದೆ ಭಕ್ತಿಯ ಭಾವ ಅಳವಡಿಸಲು ಸಾಧ್ಯವಿಲ್ಲ ಎಂದೆನ್ನುತ್ತಾರೆ ಅಲ್ಲಮರು.
*ಭಕ್ತಿ ಭಾವವಳವಟ್ಟಲ್ಲದೆ ಅರಿವು ತಲೆದೋರದು.*
——————————————————
ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮತೆಯ ಸಾರುವ ಶರಣ ಸಿದ್ಧಾಂತವು ಭಕ್ತಿ ಪ್ರಧಾನವಾದ ಧರ್ಮವಾಗಿದೆ , ಭಕ್ತಿ ಸಾಧಕನ ಮುಕ್ತಿಗೆ ಗಟ್ಟಿಮುಟ್ಟಾದ ಆಯಾಮ .ಭಕ್ತಿ ಸೇವೆ
ಬದ್ಧತೆ ಪ್ರಾಮಾಣಿಕತೆ ಸತ್ಯ ಶುದ್ಧ ಕಾಯಕ ಜಂಗಮಸೇವೆ ಹೀಗೆ ಭಕ್ತಿ ಪ್ರಧಾನ ಬದುಕು ಅಳವಡದೆ ,ಸಾಧಕನಿಗೆ ಅರಿವು ತಲೆದೋರದು.
ಭಕ್ತಿಯ ವಿವಿಧ ಪ್ರಕಾರ ಸೇವೆ ಮಜಲುಗಳನ್ನು ಗುರುತಿಸುವ ಭಕ್ತನು ತನ್ನ ಆತ್ಮಸಾಕ್ಷಾತ್ಕಾರಕ್ಕೆ ಅರಿವಿನ ಮೊರೆ ಹೋಗುತ್ತಾನೆ. ಭಕ್ತಿ ದೃಢತೆ ಶೃದ್ಧೆ ನಿಷ್ಠೆ ವಿಶ್ವಾಸದಿಂದ ಕೂಡಿರಬೇಕು.
ಇಂತಹ ಭಕ್ತಿಯು ಭಕ್ತನ ಅಂಗ ಗುಣದಲ್ಲಿ ಅಳಪಡಬೇಕು ಆಗ ಮಾತ್ರ ಅರಿವಿನ ಮಾರ್ಗ ಸ್ಪಷ್ಟವಾಗಿ ಕಾಣುವುದು.ಇಲ್ಲದಿದ್ದರೆ ಅರಿವು ಒಂದು ಮಸುಕಾದ ಅನುಭವ .
*ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು.*
——————————————————–
ಭಕ್ತನಿಗೆ ಅರಿವು ಗೋಚರವಾಗದೆ ತಾನು ಹೊಂದಿರುವ ಅಷ್ಟಾವರಣಗಳ ಕುರುಹು ನಷ್ಟವಾಗದು. ಅರುಹನರಿಯಲೆಂದು ಗುರು ಕೊಟ್ಟ ಕುರುಹ, ಕುರುಹವಿಡಿದು ಅರಿವ ಮರೆತ ಕುರುಬನ ನೋಡ ಗುಹೇಶ್ವರ ಎಂದಿದ್ದಾರೆ ಅಲ್ಲಮಪ್ರಭುಗಳು. ಗುರು ಲಿಂಗ ಜಂಗಮ ಇವು ಕಾಯ ಗುಣಗಳು. ಅಂಗದ ಅರಿವಿನ ಅನುಸಂಧಾನಕ್ಕೆ ಲಿಂಗ ಮೂಲ ಕಾರಣ. ಲಿಂಗವಿಡಿದು ಅಂಗ ಮರೆಯಬೇಕು ವಿಷಯಾದಿಗಳ ಅಳಿಯಬೇಕು ,ದೇಹ ಭಾವ ಜೀವ ಭಾವ ಬಿಡಬೇಕು. ಭಕ್ತಿ ಅಳವಡಿಸಿ ಅರಿವಿನ ಮಾರ್ಗವನ್ನು ಹುಡುಕಬೇಕು ಎಂದೆನ್ನುವುದು ಅಲ್ಲಮ ಪ್ರಭುಗಳ ಸಲಹೆ.
ಅರಿವು ಗಟ್ಟಿಗೊಂಡಾಗ ಕೈಯೊಳಗಿನ ಲಿಂಗ ಕುರುಹು ನಷ್ಟವಾಗುತ್ತದೆ ಅಂದರೆ ಲಿಂಗ ಯೋಗದ ಸಫಲತೆ ತನ್ನ ಕುರುಹಿನ ಹರಿವು ನಷ್ಟವಾದಾಗ . ಅರಿವು ಪ್ರಜ್ವಲಿಸುವ ಜ್ಞಾನ ಜ್ಯೋತಿ .
ಲಾಂಛನಗಳ ಕುರುಹುಗಳು ಅರಿವಿನ ಸಾಧನದಿಂದ ಗೌಣವಾಗುತ್ತವೆ.ಗೌಣವಾಗಬೇಕು ಇದು ಅಲ್ಲಮರ ವಾದ. ಕಾಣಬಾರದ ಲಿಂಗವು ಎನ್ನ ಕರಕ್ಕೆ ಸಿಲುಕಿತು. ಲಾಂಛನಗಳು ಕುರುಹುಗಳು ಬಂಧನ ಸಂಕೋಲೆಗಳಾಗಬಾರದು.
*ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು.*
——————————————
ಭಕ್ತನ ಅಷ್ಟಾವರಣ ಕುರುಹು ಲಾಂಛನಗಳು ನಷ್ಟವಾಗಿ ಗೌಣವಾಗಿ ಪ್ರಾಣಮಯ ಲಿಂಗಮಯ ಜಂಗಮ ಚೈತನ್ಯವನ್ನು ಕಾಣತೊಡಗಿದ ಭಕ್ತನು ತನ್ನ ಆಧ್ಯಾತ್ಮಿಕ ಉನ್ನತಿಯಿಂದ ಉದಾತ್ತೀಕರಣಕ್ಕೆ ವಾಲುತ್ತಾನೆ. ಅಲ್ಲಿ ಲಿಂಗವೇ ತಾನಾಗುತ್ತುನೆ. ಸಮರತಿ ಸಮಸುಖ ಸಮಕಳೆಯ ವಿಕಾಸವನ್ನು ಸಮಷ್ಟಿಯಲ್ಲಿ ಬಯಸುತ್ತಾನೆ. ತನ್ನಂತೆ ಪರರು ಇಹದಂತೆ ಸ್ವರ್ಗ .ಇಂತಹ ಅವಿನಾಭಾವ ಅನುಭವವು ಮಾಯೆಯಿಂದ ಮುಕ್ತವಾದಾಗ , ಇದು ಆಯತ ಸ್ವಾಯತ ಮೀರಿ ಸನ್ನಿಹಿತದ ಗುಣ ಲಕ್ಷಣ.
ಲಿಂಗವಂತನ ಆರಂಭದ ಸಂಕೇತ ಲಾಂಛನ ಕುರುಹುಗಳನ್ನು ಅವುಗಳ ಸಂಕೋಲೆಯ ಬಂಧನವನ್ನು ಕಳೆದುಕೊಳ್ಳದೆ ಮನುಷ್ಯನ ಮಾಯೆ ಹಿಂಗದು. ಪ್ರಾಪಂಚಿಕ ವಿಷಯಾದಿಗಳ ತೊರೆದು ಪಾರಮಾರ್ಥಿಕ ಯಾತ್ರೆಗೆ ಕರೆದೊಯ್ಯುವ ಅಲ್ಲಮರು ಪಾರಮಾರ್ಥವನ್ನು ಕೂಡಾ ಒಂದು ಮಾಯೆ ನಿರಾಕಾರದ ತತ್ವಗಳಿಗೇಕೆ ಕುರುಹುಗಳ ಹಂಬಲ ಮೋಹವೆಂದೆನ್ನುತ್ತಾರೆ.
ನಿರಾಕಾರದ ನಿಜ ನಿಲುವು ಅರಿಯಲು ಸಾಕಾರವನ್ನು ಹಿಡಿದು ನಿರಾಕಾರದ ಯಾತ್ರೆ ಪಯಣಕ್ಕೆ ಸಜ್ಜಾಗಬೇಕು ಇಲ್ಲದಿದ್ದರೆ ಸಾಕಾರದ ಕುರುಹುಗಳೇ ಬಂಧನ ಸಂಕೋಲೆಗಳು ಮಾಯೆಯಾಗುತ್ತವೆ .
*ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ*
———————————————————————————–
ಜೈವಿಕ ವಿಕಾಸ ಒಂದು ಸಹಜದತ್ತವಾದ ಪ್ರಕ್ರಿಯೆಯಾಗಿದೆ.ಕಾಯದೊಳಗಿರುವ ಜೀವ ಚೈತನ್ಯದ ಮತ್ತು ಕಾಯದ ಬಂಧನದ ಹೊಲಿಗೆ ಅತ್ಯಂತ ಸೂಕ್ಷವಾದದ್ದು. ನರವ್ಯೂಹ ಮೆದುಳು ಬಳ್ಳಿ
ರಕ್ತ ಸಂಚಲನ ಸ್ನಾಯು ರಜ್ಜು ಮೂಳೆ ಹೀಗೆ ಇವುಗಳನ್ನು ವ್ಯವಸ್ಥಿತವಾಗಿ ಜೋಡಿಸಿದ ಬಗೆಯ ಜ್ಞಾನವು ಅಗಾಧವೂ ಹಾಗೂ ಅಪರಿಮಿತವೂ ಆಗಿದೆ. ಇಂತಹ ಕಾಯದ ಜೀವದ ಹೊಲಿಗೆ ಅಳಿವ ಭೇದವ ತಿಳಿಯುವದಾದರೆ ಅವನೇ ಶ್ರೇಷ್ಠ, ಅದುವೆ ಅರಿವು .ಕಾಯದಿಂದ ಜೀವದ ಹೊಲಿಗೆ ಸಡಿಲಿಸಿ ಬಯಲಿನಲ್ಲಿ ಬಯಲಾಗುವ ರಹಸ್ಯವನ್ನು ಭೇದಿಸುವ ಸುಜ್ಞಾನವೆ ಶೂನ್ಯ ಭಾವ
*ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯಾ.*
———————————————————————–
ಭಕ್ತನು ಪಿಂಡಾಂಡದಿಂದ ಬ್ರಹ್ಮಾಂಡದ ಅಪ್ರಮಾಣ ಅಗೋಚರ ಅಪ್ರತಿಮ ಲಿಂಗಮೂಲಕ ದೇಹದ ಕಾಯದ ಹಂಗು ಹರಿದು ಜೀವ ಭಾವ ತೊರೆದು ,ಧ್ಯಾನಸ್ಥನಾಗಿ ಅರಿವು ಪಡೆದು ಕುರುಹು ನಷ್ಟ ಮಾಡಿ ಶರೀರ ಮತ್ತು ಜೀವಜಾಲದ ಮಧ್ಯದ ಸಂಕೋಲೆಯನ್ನು ಬಿಚ್ಚಿ ಬಯಲಲ್ಲಿ ಬಯಲಾಗುವ ಬಗೆಯನ್ನು ಅರಿತಾಗ ಮಾತ್ರ ಗುಹೇಶ್ವರವೆಂಬ ಸಮಷ್ಟಿಯನ್ನು ಅರಿಯಲು ಸಾಧ್ಯ. ವ್ಯಕ್ತಿ ತನ್ನಲ್ಲಿನ ಕಾಯಗುಣವರಿತು ತಾನೇ ದೈವತ್ವ ಸಾಧಿಸುವ ಪರಿಕ್ರಮವನ್ನು ಪಡೆದಾಗ ಮಾತ್ರ ದೇವನಲ್ಲಿ ತಾನು ಒಂದಾಗುತ್ತಾನೆ ಎಂದರ್ಥ. ಇಂತಹ ಅರಿವು ಪಡೆಯಲು ಎಲ್ಲ ಬಂಧನಗಳನ್ನು ಕಳಚಿಕೊಂಡು ನಿರಾಳವಾಗಬೇಕು. ಇಲ್ಲದಿದ್ದರೆ ನಿರಾಳವೆಂಬ ಕೂಸಿಂಗೆ ಬೆಣ್ಣೆಯನಿಕ್ಕಿ ಹೆಸರನಿಟ್ಟವರಾರು ಅಕಟಕಟಾ ಇದೂ ಶಬ್ದದ ಲಜ್ಜೆ ಎಂದಿದ್ದಾರೆ ಅಲ್ಲಮಪ್ರಭುಗಳು.
ಅಲ್ಲಮರು ಕಾಲ ಜ್ಞಾನ ಬೆಡಗಿನ ವಚನಗಳು ಮಂತ್ರ ಗೌಪ್ಯವನ್ನು ಸುಲಲಿತವಾಗಿ ವಿವರಿಸುವ ಕಲ್ಯಾಣದ ಶ್ರೇಷ್ಠ ಅನುಭಾವಿಗಳು. ಬಯಲ ಶೂನ್ಯದದತ್ತ ಗಮನವಿಟ್ಟ ಅಲ್ಲಮರು ಅದನ್ನು
ಸುಂದರವಾಗಿ ತಮ್ಮ ವಚನಗಳಲ್ ವಿವರಿಸಿದ್ದಾರೆ .ಪ್ರಪಂಚದ ಬದುಕನ್ನು ಸರಳಗೊಳಿಸುತ್ತಾ ನಂತರ ಅರಿವಿನ ಮೂಲಕ ಪಾರಮಾರ್ಥಿಕ ಬದುಕಿಗ ಜೋತು ಬೀಳದೆ .ಕುರುಹು ನಷ್ಟಮಾಡಿ ಅರಿವಿನ ಮೂಲಕ ಸಮಷ್ಟಿಯ ಅರಿಯಲು ಸಾಧ್ಯ ಸಿದ್ಧರಾಮಯ್ಯಾ ಎಂದು ಸೊನ್ನಲಗೆಯ ಶರಣರಿಗ ಸಲಹೆ ನೀಡುತ್ತಾರೆ ಅಲ್ಲಮಪ್ರಭುಗಳು.
——————————————
*ಡಾ.ಶಶಿಕಾಂತ.ರುದ್ರಪ್ಪ ಪಟ್ಟಣ ರಾಮದುರ್ಗ -9552002338*