ಒಂದೇ ಬಾಗಿಲಿಗೆ ಬಂದ ಅರಭಾವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು!

Must Read

ಮೂಡಲಗಿ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದಂತೆ ಬೆಳಗಾವಿ ಜಿಲ್ಲೆಯ ಅರಭಾವಿ ಕ್ಷೇತ್ರದಲ್ಲಿಯೂ ರಾಜಕೀಯ ಜಿದ್ದಾಜಿದ್ದಿನ ಚಟುವಟಿಕೆಗಳು ಗರಿಗೆದರಿದ್ದು ಈ ಸಲದ ಚುನಾವಣೆ ಅತ್ಯಂತ ತುರುಸಿನ ಚುನಾವಣೆಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.

ಈಗಾಗಲೇ ಕ್ಷೇತ್ರದ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿಯವರು ಬಿಜೆಪಿಯ ನಿರ್ಧರಿತ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದು ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಟಿಕೆಟ್ ಗಾಗಿ ಮುಸುಕಿನ ಗುದ್ದಾಟ ನಡೆದಿತ್ತು. ಸುಮಾರು ಆರು ಜನ ನಾಯಕರು ಅರಭಾವಿ ಟಿಕೆಟ್ ಗಾಗಿ ಸ್ಪರ್ಧೆ ನಡೆಸಿದ್ದು ಜನಜನಿತವಾಗಿದ್ದರಿಂದ ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮೂರು ಬಾಗಿಲು ಎಂಬ ವಿಶೇಷಣ ಅಲ್ಲಲ್ಲಿ ಹರಿದಾಡುತ್ತಿತ್ತೆಂಬುದು ಸುಳ್ಳಲ್ಲ.

ಕಾಂಗ್ರೆಸ್ ಪರಿಸ್ಥಿತಿಯೇನೋ ಮನೆಯೊಂದು ಮೂರು ಬಾಗಿಲು ಎನಿಸಿಕೊಂಡಿತ್ತು ಆದರೆ ಅದನ್ನು ಸುಳ್ಳು ಮಾಡುವಂತೆ ಕೌಜಲಗಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ಆಗಮಿಸಿ, ತಾವು ಬೇರೆ ಬೇರೆಯಲ್ಲ; ಅರಭಾವಿ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೇ ಸಿಕ್ಕರೂ ತಾವೆಲ್ಲ ಒಂದಾಗಿ ಚುನಾವಣೆ ಎದುರಿಸುವುದಾಗಿ ಪಣ ತೊಟ್ಟಿದ್ದು ಕಾಂಗ್ರೆಸ್ ಗೆ ಹೊಸ ಜೀವ ಬಂದಂತಾಗಿದೆ.

ಕೌಜಲಗಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕೋರ್ ಕಮಿಟಿಯ ಸಭೆಗೆ ವೀಕ್ಷಕರಾಗಿ ಎಐಸಿಸಿ ಕಾರ್ಯದರ್ಶಿ ಡಾ. ಮಹ್ಮದ ಜಾವೇದ ಆಗಮಿಸಿದ್ದರು. ಅವರ ಜೊತೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿಯವರೂ ಇದ್ದು ಅರಭಾವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಅರವಿಂದ ದಳವಾಯಿ, ಭೀಮಪ್ಪ ಹಂದಿಗುಂದ, ಭೀಮಪ್ಪ ಗಡಾದ ಅವರುಗಳನ್ನು ಒಂದೆಡೆ ಸೇರಿಸಿ ಬರುವ ಚುನಾವಣೆಯಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಂದಾಗಿಯೇ ಚುನಾವಣೆ ಎದುರಿಸುವುದಾಗಿ ಏಕತೆಯ ಸಸಿಗೆ ನೀರುಣಿಸಿದರು. 

ಕಳೆದ ಸಲ ಮೂಡಲಗಿ ತಾಲೂಕಾ ಹೋರಾಟದಲ್ಲಿ ಮಿಂಚಿದ್ದ ಭೀಮಪ್ಪ ಗಡಾದ ಜನತಾ ದಳ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಯವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಿದ್ದರು. ಸ್ವಲ್ಪದರಲ್ಲಿ ಸೋಲು ಅನುಭವಿಸಿದ್ದರೂ ಗಡಾದ ಅವರು ತಮ್ಮ ವರ್ಚಸ್ಸು ಉಳಿಸಿಕೊಂಡು ಬಂದಿದ್ದರು.

ಈ ಸಲದ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿದ್ದು ಜೆಡಿಎಸ್ ಗೆ ರಾಜೀನಾಮೆ ಕೊಟ್ಟಿದ್ದಾರೆ. ಅರವಿಂದ ದಳವಾಯಿಯವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದುಕೊಂಡು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ ಇನ್ನು ಭೀಮಪ್ಪ ಹಂದಿಗುಂದ ಅವರು ಹಿಂದೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಇಷ್ಟು ವರ್ಷಗಳ ಕಾಲ ಸುಮ್ಮನಿದ್ದವರು ಈಗ ಸ್ಪರ್ಧೆಗೆ ಅಣಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರೋಧಿ ಅಲೆ ಇದೆಯೆಂಬ ಭಾವನೆ ಹರಿದಾಡುತ್ತಿರುವುದರಿಂದ ಈ ಸಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನಬಹುದು.

ಅರಭಾವಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಾಲಚಂದ್ರ ಜಾರಕಿಹೊಳಿಯವರ ಪ್ರಭಾವ ಕುಗ್ಗಿಸಲು ಶತಾಯಗತಾಯ ಪ್ರಯತ್ನ ನಡೆದಿದೆ. ಅದರ ಒಂದು ಅಂಗವಾಗಿ ಕ್ಷೇತ್ರದ ಹಳ್ಳಿಗಳಲ್ಲಿ ಜಲಕುಂಭಗಳು, ಬಸ್ ನಿಲ್ದಾಣಗಳು, ದೇವಸ್ಥಾನಗಳು (!), ಮೂತ್ರಾಲಯಗಳು, ಸರ್ಕಾರಿ ಕಟ್ಟಡಗಳ ಮೇಲೆ BLJ ಎಂದು ಬರೆಯುತ್ತಿರುವುದರಿಂದ ವಿಪಕ್ಷಗಳಿಗೆ ಅದೊಂದು ಅಸ್ತ್ರ ಸಿಕ್ಕಂತಾಗಿದೆ. ಇದನ್ನೇ ಬಳಸಿಕೊಂಡು ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಪ್ರಬಲ ಟಕ್ಕರ್ ಕೊಡಬಹುದು.

ಈಗಂತು ಕಾಂಗ್ರೆಸ್ ನಾಯಕರು ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ರಾಜಕೀಯವೆಂಬ ಚದುರಂಗದಾಟದಲ್ಲಿ  ಏನು ಬೇಕಾದರೂ ಆಗಬಹುದು. ಅರಭಾವಿ ಕಾಂಗ್ರೆಸ್ ನ ಚೆಂಡು ಈಗ ರಾಜ್ಯದ ಹೈಕಮಾಂಡ್ ಅಂಗಳಕ್ಕೆ ಬಿದ್ದಿದೆ. ಮುಖ್ಯವಾಗಿರುವ ಈ ಚುನಾವಣೆಯಲ್ಲಿ ವರಿಷ್ಠರು ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದರೆ ಅಳೆದು ತೂಗಿ ನೋಡುತ್ತಾರೆಂಬ ಭಾವನೆ ಎಲ್ಲರದೂ ಇದೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾರೂ ಯಾವುದೇ ಹಗರಣದಲ್ಲಿ ಭಾಗಿಯಾಗಿರಬಾರದು, ಜನತೆಯ ಹಿತಕ್ಕಾಗಿ ಕೆಲಸ ಮಾಡಿದವರಿರಬೇಕು ಜೊತೆಗೆ ಎಲ್ಲ ಸಮುದಾಯದವರನ್ನು ಏಕತ್ರವಾಗಿ ನೋಡಿಕೊಂಡು ಹೋಗುವ ನಾಯಕತ್ವ ಗುಣವಿರಬೇಕು. ಹೀಗೆ ಎಲ್ಲ ನೋಡಿಯೇ ಟಿಕೆಟ್ ನೀಡಲಾಗುತ್ತದೆ. 

ಅರಭಾವಿಗೆ ಅಂಥ ಯಾವ ಕಾಂಗ್ರೆಸ್ ನಾಯಕರಿಗೆ ವರಿಷ್ಠರು ಮಣೆ ಹಾಕುತ್ತಾರೆಂಬುದನ್ನು ಕಾದು ನೋಡೋಣ.


 ಉಮೇಶ ಬೆಳಕೂಡ, ಮೂಡಲಗಿ

Latest News

ಸಿಂಡಿಕೇಟ್ ಸದಸ್ಯ ಜಗದೀಶ ಭೈರಮಟ್ಟಿಯವರಿಗೆ ಸನ್ಮಾನ

ಬಾಗಲಕೋಟೆ : ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘ ವಜ್ರಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇದ್ದು ಸಂಸ್ಥೆಗೆ ಹಿರಿಮೆಯ ಗರಿ ಹೆಮ್ಮೆ ಎಂಬಂತೆ ಶ್ರೀ ಪರಪ್ಪ ಸಂಗಪ್ಪ...

More Articles Like This

error: Content is protected !!
Join WhatsApp Group