ಮೈಸೂರು, -ನಗರದ ಕೃಷ್ಣಮೂರ್ತಿಪುರಂನ ೫ನೇ ಕ್ರಾಸ್‌ನಲ್ಲಿರುವ ಕೆಎಂಪಿ ಕಿಡ್ಸ್ ಗ್ರೂಪ್ ವತಿಯಿಂದ ಮಾತೆ ಕಮಲಮ್ಮರವರ ಸ್ಮರಣಾರ್ಥ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿತ್ರಕಲಾ ಸ್ಪರ್ಧೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾನಸಿ ಮಾತೃಮಂಡಲಿ ಸಂಗೀತ ಶಿಕ್ಷಕಿಯಾದ ಶ್ರೀಮತಿ ಕೋಮಲಾರವರು ಮಾತನಾಡಿ, ಭಾರತೀಯರಿಗೆ ಖುಷಿ ತಂದು ಎಲ್ಲರೂ ಸಂಭ್ರಮಿಸುವ ಹಬ್ಬವೇ ಸ್ವಾತಂತ್ರ್ಯ ದಿನಾಚರಣೆ. ಮಕ್ಕಳಿಗೆ ಬಾವುಟದ ಮಹತ್ವವನ್ನು ಇಂದು ತಿಳಿಸಬೇಕಿದೆ. ಆ ಮೂಲಕ ಮಕ್ಕಳು ಚಿತ್ರ ಬಿಡಿಸುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು. ಚಿತ್ರ ಬಿಡಿಸುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಬೆಳೆಯುತ್ತದೆಂದು ತಿಳಿಸಿದರು.
ವೇದಿಕೆಯಲ್ಲಿ ಶಿಕ್ಷಕಿ ಬಾವನಾರವರು ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಶಿಕ್ಷಕರ ಕರ್ತವ್ಯವಾಗಬೇಕು. ಇಂದು ನಾವು ಮಕ್ಕಳಿಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ತೆಗೆದುಕೊಡುವುದರಿಂದ ಮಕ್ಕಳನ್ನು ದಾರಿ ತಪ್ಪಿಸುವ ಸ್ಥಿತಿಗೆ ತಲುಪಿಸುತ್ತಿದ್ದೇವೆ ಎಂಬ ಭಾವನೆ ಉಂಟಾಗುತ್ತದೆ. ಏಕೆಂದರೆ ಮಕ್ಕಳು ಆಧುನಿಕ ತಂತ್ರಜ್ಞಾನಗಳನ್ನು ಅಗತ್ಯಕ್ಕೆ ಮಾತ್ರ ಪೂರೈಸಿಕೊಳ್ಳಬೇಕೇ ಹೊರತು ಬೇಡವಾದ ವಿಚಾರಗಳನ್ನು ನೋಡದಂತೆ ಮನಸ್ಸು ಮಾಡಬೇಕು. ಶಿಕ್ಷಕರಾದವರು ಮಕ್ಕಳ ಪೋಷಕರನ್ನು ಕರೆದೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ಹಾಗೂ ತಿಳುವಳಿಕೆಯನ್ನು ನೀಡಿದರೆ ಸ್ವಲ್ಪ ಮಟ್ಟಿಗೆ ಇದರ ಹತೋಟಿಗೆ ಸಾಧ್ಯ ಎಂದರು.
ಚಿತ್ರಕಲಾ ಸ್ಪರ್ಧೆ ೨ ವಿಭಾಗಗಳಲ್ಲಿ ನಡೆದಿದ್ದು, ಹಿರಿಯರ ವಿಭಾಗದಲ್ಲಿ ಸಿಕೆಸಿ ಶಾಲೆಯ ಯಾಶೀಕಾ ಪಿ. ಪ್ರಥಮ ಸ್ಥಾನವನ್ನು, ಚೈತ್ರಾಂಜಲಿ ಡಿ.ಎ. ದ್ವಿತೀಯ ಸ್ಥಾನವನ್ನು, ಡಿಎವಿ ಪಬ್ಲಿಕ್ ಶಾಲೆಯ ಶಿವು ಎಸ್. ಕ್ರಮವಾಗಿ ತೃತೀಯ ಸ್ಥಾನವನ್ನು ಪಡೆದುಕೊಂಡರು. ಕಿರಿಯರ ವಿಭಾಗದಲ್ಲಿ ವಿದ್ಯೋದಯ ಶಾಲೆಯ ವಿಕಾಸ್ ಎಸ್. ಪ್ರಥಮ ಸ್ಥಾನ, ರೋಟರಿ ಶಿಶುವಿಹಾರದ ಅಹನ ಎಸ್. ದ್ವಿತೀಯ ಸ್ಥಾನ, ವೆಟ್ರಿವೇಲ್ ಪಿ. ತೃತೀಯ ಸ್ಥಾನವನ್ನು, ಪುಟಾಣಿಗಳ ವಿಭಾಗದಲ್ಲಿ ಯುಕೆಜಿಯ ಋಜುಲ ಬಹುಮಾನವನ್ನು ಪಡೆದುಕೊಂಡರು.