ಸವದತ್ತಿಃ ಸರಕಾರ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಜೊತೆಗೆ ಅವರ ಕಲಿಕೆಗೆ ಗಮನ ಕೇಂದ್ರೀಕರಿಸುವ ಹಾಗೂ ಮಕ್ಕಳ ಹಾಜರಾತಿ ಹೆಚ್ಚಿಸಲು ಜಾರಿಗೆ ತಂದಿರುವ ಅಕ್ಷರದಾಸೋಹ ಯೋಜನೆಯಲ್ಲಿ ಎಲ್ಲ ಅಡುಗೆಯವರು ಶಾಲೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣುವ ಜೊತೆಗೆ ಸ್ವಚ್ಚತೆ ಮತ್ತು ಸುರಕ್ಷತೆಯತ್ತ ಗಮನ ಕೊಡಬೇಕು ಎಂದು ಜಿಲ್ಲಾ ಅಕ್ಷರ ದಾಸೋಹ ವಿಭಾಗದ ಶಿಕ್ಷಣಾಧಿಕಾರಿ ಲಕ್ಷ್ಮಣ ರಾವ್ ಯಕ್ಕುಂಡಿ ಹೇಳಿದರು.
ಅವರು ಪಟ್ಟಣದ ಜಿ.ಜಿ.ಚೋಪ್ರಾ ಸರಕಾರಿ ಪ್ರೌಢಶಾಲೆಯಲ್ಲಿ ಸವದತ್ತಿ ವಲಯದ ಅಕ್ಷರ ದಾಸೋಹ ಅಡುಗೆ ತಯಾರಿಸುವ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಬಿಸಿಯೂಟ ಯೋಜನೆ ಕ್ಷೀರಭಾಗ್ಯ ಮೊಟ್ಟೆ ವಿತರಣೆ ಪೌಷ್ಠಿಕಾಂಶ ಹಾಗೂ ಜಂತುಹುಳು ಮಾತ್ರೆ ವಿತರಣೆ ಸೇರಿದಂತೆ ಅಕ್ಷರದಾಸೋಹ ಯೋಜನೆಯನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಿದ್ದು ಅದು ಫಲಪ್ರದವಾಗಬೇಕಿದ್ದರೆ ಅಡುಗೆಯವರ ಪಾತ್ರ ಬಹಳ ಮಹತ್ವದ್ದು ಎಂಬುದನ್ನು ವಾರದ ವಿವಿಧ ದಿನಗಳಲ್ಲಿ ನೀಡುತ್ತಿರುವ ವಿಭಿನ್ನ ಅಡುಗೆ ಕುರಿತು ತಿಳಿಸುತ್ತ ಎಲ್ಲರೂ ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳನ್ನು ಪ್ರೀತಿಯಿಂದ ಕಾಣುವ ಜೊತೆಗೆ ಶುಚಿ ಮತ್ತು ರುಚಿಯಾದ ಅಡುಗೆ ತಯಾರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಕಾಂಚನಾ ಅಮಠೆ, ಕೆ.ಎಂ.ಎಫ್.ವಿಸ್ತೀರ್ಣಾಧಿಕಾರಿಗಳಾದ ಮುಸ್ತಾಕ್ ನದಾಫ್, ಅಗ್ನಿಶಾಮಕ ಅಧಿಕಾರಿಗಳಾದ ಎಸ್.ಎಸ್.ಮಂಜನ್ನವರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಟಿ.ಬುರಲಿ, ತಾಲೂಕ ಆರೋಗ್ಯಾಧಿಕಾರಿಗಳಾದ ಎಸ್.ಆರ್.ದೇಸಾಯಿ, ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಅಬ್ಬಾರ, ಸುರೇಶ ಕರಿಗಾರ, ಶಾಸಕರ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಕಮ್ಮಾರ, ಶಶಿಕಾಂತ ಜೋಷಿ, ಮೋಹನ ಕಡೇಮನಿ, ಸಿ.ಆರ್.ಪಿಗಳಾದ ರಾಮಚಂದ್ರಪ್ಪ, ಮಂಜುನಾಥ ಗಡೇಕಾರ, ಎಚ್,ಎಂ.ನದಾಫ, ಪಿ.ಸಿ.ಫರೀಟ್, ಧರೆಪ್ಪ ಮರಕುಂಬಿ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರೀಕಟ್ಟಿ ಮಾತನಾಡಿ “ಪ್ರತಿದಿನ ಸಾಂಬಾರಕ್ಕಾಗಿ ಮತ್ತು ಪಲಾವ್ ತಯಾರಿಸುವ ಸಂದರ್ಭದಲ್ಲಿ ತಾಜಾ ತರಕಾರಿ ಬಳಸುವುದು ಕಡ್ಡಾಯವಾಗಿದೆ. ಆಹಾರ ತಯಾರಿಸುವಾಗ ಕಾರ್ಯಕರ್ತೆಯರು ಕಾಳಜಿ ವಹಿಸಬೇಕು.ಯಾವದೇ ರೀತಿಯ ಕಲುಷಿತವಾಗದಂತೆ ನಿಗಾ ವಹಿಸಬೇಕು ಎಂದರು.
ಗ್ಯಾಸ ಬಳಕೆ ಕುರಿತಂತೆ ಮಾತನಾಡಿ, ಆಹಾರ ತಯಾರಿಸುವಾಗ ಬಳಸಿದ ಗ್ಯಾಸ ಸಿಲಿಂಡರ್ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲು ಗ್ಯಾಸ ಕಂಪನಿಯವರು ತಿಳಿಸಿದರು.ಮಕ್ಕಳ ಆರೋಗ್ಯದ ರಕ್ಷಣೆಯಲ್ಲಿ ಅಡುಗೆಯವರ ಪಾತ್ರ ಹಾಗೂ ಸರಕಾರ ವಿತರಿಸುತ್ತಿರುವ ವಿಟೆಮಿನ್ ಮಾತ್ರೆ ಮತ್ತು ಜಂತುಹುಳು ನಿವಾರಕ ಮಾತ್ರೆಗಳ ಕುರಿತಂತೆ ತಾಲೂಕು ಆರೋಗ್ಯ ಇಲಾಖೆಯ ವೈದ್ಯರಾದ ಎಸ್.ಆರ್. ದೇಸಾಯಿಯವರು ಮಾಹಿತಿ ಒದಗಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿ.ಡಿ.ಪಿ.ಓ ಕಾಂಚನಾ ಅಮಠೆ ಮಾತನಾಡಿ “ಮಕ್ಕಳಿಗೆ ಸ್ವಚ್ಚತೆಯಿಂದ ಅಡುಗೆ ತಯಾರಿಸುವ ಮೂಲಕ ಮಗುವಿನ,ಶಾಲೆಯ,ಶಿಕ್ಷಣ ಇಲಾಖೆಯ ಆರೋಗ್ಯ ಕಾಪಾಡುತ್ತಿರುವುದು ಗಮನಾರ್ಹ. ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳಿದ್ದವು. ಇಂದು ಅವುಗಳ ಸಂಖ್ಯೆ ವಿರಳ.ಪ್ರಸ್ತುತ ವಿಘಟನೆ ಹೊಂದಿದ ಕುಟುಂಬಗಳ ಮಕ್ಕಳು ಹೆಚ್ಚು ಪ್ರಮಾಣದಲ್ಲಿ ಶಾಲೆಗೆ ಬರುತ್ತಿರುವರು ಅವರಿಗೆ ತಮ್ಮ ಸೇವೆ ಅನುಪಮ, ಅಚ್ಚುಕಟ್ಟುತನದಿಂದ ಕಾರ್ಯ ನಿರ್ವಹಿಸುವ ಮೂಲಕ ಯಾವುದೇ ಅವಘಡಗಳು ಜರುಗದಂತೆ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ಕೆ.ಎಂ.ಎಫ್.ವಿಸ್ತೀರ್ಣಾಧಿಕಾರಿಗಳಾದ ಮುಸ್ತಾಕ್ ನದಾಫ್ ಕ್ಷೀರ ಯೋಜನೆ ಭಾಗ್ಯ ಕುರಿತು ಮಾಹಿತಿ ನೀಡಿದರು ಅಗ್ನಿಶಾಮಕ ಅಧಿಕಾರಿಗಳಾದ ಎಸ್.ಎಸ್.ಮಂಜನ್ನವರ ಅಗ್ನಿ ನಂದಕದ ಉಪಯೋಗ ಹಾಗೂ ಅಗ್ನಿ ಹತ್ತಿದ ಸಂದರ್ಭದಲ್ಲಿ ನಂದಿಸುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸವದತ್ತಿ ತಾಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ ಮಾತನಾಡಿ “ತಾಲೂಕಿನ ವಿವಿಧ ಶಾಲೆಗಳಲ್ಲಿ ಜರುಗಿರುವ ಅಕ್ಷರದಾಸೋಹ ಕಾರ್ಯದ ಕುರಿತು ಯಶೋಗಾಥೆಯನ್ನು ತಿಳಿಸಿ ಉತ್ತಮ ಶಾಲೆಗಳಲ್ಲಿ ಜರುಗಿದಂತೆ ಎಲ್ಲ ಶಾಲೆಗಳಲ್ಲಿಯೂ ಕೂಡ ಅದೇ ರೀತಿ ಒಳ್ಳೆಯ ಪರಿಣಾಮಕಾರಿ ಅನುಷ್ಠಾನವಾಗಲಿ. ಅಡುಗೆ ಸಿಬ್ಬಂದಿಯ ಪರಿಶ್ರಮದಿಂದ ಇಂದು ಮಕ್ಕಳಿಗೆ ಯಾವುದೇ ಲೋಪವಿಲ್ಲದೇ ಅಕ್ಷರದಾಸೋಹ ಜರುಗುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ.ತಾಯಂದಿರ ಈ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು. ಶಿಕ್ಷಕ ನರಗುಂದ ನಿರೂಪಿಸಿದರು. ಮೈತ್ರಾದೇವಿ ವಸ್ತ್ರದ ಸ್ವಾಗತಿಸಿದರು.