ಸಾಹಿತ್ಯಾಸಕ್ತರ ಗಮನ ಸೆಳೆದ ಗೋಷ್ಠಿಗಳು
ಬೈಲಹೊಂಗಲ: ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಫೆಬ್ರುವರಿ ೩ ರಂದು ಖ್ಯಾತ ಸಾಹಿತಿ ಡಾ. ಶಾಂತಿನಾಥ ದಿಬ್ಬದ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಬೈಲಹೊಂಗಲ ತಾಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ಗೋಷ್ಠಿಗಳು ಸಾಹಿತ್ಯಾಸಕ್ತರ ಗಮನ ಸೆಳೆದವು. ಕನ್ನಡ ಭಾಷಾ ಶಿಕ್ಷಕರ ವೇದಿಕೆಯ ಗೌರವ ಅಧ್ಯಕ್ಷ ಎಸ್. ಎಂ. ಪಾಟೀಲ ಆಶಯ ನುಡಿಗಳೊಂದಿಗೆ ಆರಂಭವಾದ ವಿಚಾರ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಬೈಲಹೊಂಗಲ ತಾಲೂಕಿನ ಕೊಡುಗೆ ಎಂಬ ವಿಷಯದ ಮೇಲೆ ಡಾ. ಫಕೀರನಾಯ್ಕ ಗಡ್ಡಿಗೌಡರ ಹಾಗೂ ಮಕ್ಕಳಲ್ಲಿ ನೈತಿಕತೆ ಬೆಳೆಸುವಲ್ಲಿ ಪಾಲಕ-ಸಮುದಾಯದ ಜವಾಬ್ದಾರಿ ವಿಷಯದ ಮೇಲೆ ಪ್ರಕಾಶ ಮಾಸ್ತಿಹೊಳಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಚಂದ್ರಶೇಖರ ಗಣಾಚಾರಿ ಬೈಲಹೊಂಗಲ ನಾಡಿನ ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಪರಂಪರೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲಾ ಮಾಜಿ ಜಿಲ್ಲಾಧ್ಯಕ್ಷ ಪ್ರೊ. ಸಿ.ವಿ.ಜ್ಯೋತಿ, ಕರಾವಿಪ ಬೆಳಗಾವಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕೋಳಿ, ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಶ್ರೀಶೈಲ ಶರಣಪ್ಪನವರ ಗೌರವ ಉಪಸ್ಥಿತಿ ವಹಿಸಿದ್ದರು.
ನಂತರ ಕವಿಗಳಾದ ನಾಗೇಶ ನಾಯಕ ಅವರು ತಮ್ಮ ಆಶಯ ನುಡಿಗಳ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಿದರು. ಉತ್ತಮ ಕಾವ್ಯ ಹೃದಯ ಅರಳಿಸುವ ಶಕ್ತಿ ಹೊಂದಿದೆ ಎಂದು ಅವರು ಹೇಳಿದರು. ಡಾ. ಮಲ್ಲಿಕಾರ್ಜುನ ಛಬ್ಬಿ, ಜಾನಕಿದೇವಿ ಭದ್ರನ್ನವರ, ಸವಿತಾ ಪಾಟೀಲ, ಶ್ವೇತಾ ಕಾಡನ್ನವರ, ಶಿವಾನಂದ ಉಳ್ಳಿಗೇರಿ, ಸಿದ್ದಪ್ಪ ಗೊಡಚಿ, ಅವಿನಾಶ ಸೆರೆಮನಿ, ಶಾಂತಿನಾಥ ಉಪಾಧ್ಯೆ, ಶ್ರೀಶೈಲ ಹೆಬ್ಬಳ್ಳಿ, ಸುಖದೇವಾನಂದ ಚವತ್ರಿಮಠ, ಎಸ್.ಜಿ. ಜಹಗೀರದಾರ, ಅಮಜವ್ವ ಭೋವಿ, ಕಿರಣ ಗಣಾಚಾರಿ, ಭಾರತಿ ಕಿತ್ತೂರಮಠ, ಸಿದ್ದು ನೇಸರಗಿ, ಸಂಗಮೇಶ ಕುಲಕರ್ಣಿ, ಉಮಾರೂಢ ತಲ್ಲೂರ, ಮಹಾದೇವಿ ಪಾಟೀಲ, ಪೂರ್ಣಿಮಾ ಯಲಿಗಾರ, ಆನಂದ ಮಾಲಗಿತ್ತಿಮಠ, ಎಂ.ಆರ್.ಪಾಟೀಲ, ಫಕ್ಕೀರಪ್ಪ ಸೋಮನ್ನವರ, ಸಾವಿತ್ರಿ ಹೊತ್ತಿಗಿಮಠ, ಗಜಾನಂದ ಸೂರ್ಯವಂಶಿ, ಚನ್ನಬಸಯ್ಯ ಕೋಳಿವಾಡ, ಎಂ.ಡಿ ಬಾವಾಖಾನ ಮುಂತಾದ ಕವಿಗಳು ವಿಭಿನ್ನ ವಿಷಯಗಳ ಕುರಿತು ವಿಶಿಷ್ಟ ಶೈಲಿಗಳಲ್ಲಿ ಕವನ ವಾಚಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಾಹಿತಿ ಎಂ.ಟಿ. ಉಪಾಧ್ಯೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಡಾ. ಷಣ್ಮುಖ ಗಣಾಚಾರಿ, ಸಾಹಿತಿ ಶಂಕರ ಕುಂಬಾರ ಗೌರವ ಉಪಸ್ಥಿತಿ ವಹಿಸಿದ್ದರು. ಸಮಯ ಸರಿದರೂ ತುಂಬಿದ ಕುರ್ಚಿಗಳು ವೇದಿಕೆಗೆ ಶೋಭೆ ತಂದಿದ್ದು ವಿಶೇಷವಾಗಿತ್ತು.